ADVERTISEMENT

ಕೊಲ್ಲೂರು: ರಾಘವೇಂದ್ರ ಭಾರತೀ ಶ್ರೀ ಆರಾಧನೆ

‘ಮಾತೃತ್ವ, ಗುರುತ್ವದ ಸಮಾಗಮದಿಂದ ಲೋಕ ಕಲ್ಯಾಣ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 4:53 IST
Last Updated 2 ಡಿಸೆಂಬರ್ 2022, 4:53 IST
ರಾಘವೇಂದ್ರ ಭಾರತೀ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ವಾರಣಾಸಿ ರಾಮಕೃಷ್ಣ ಭಟ್ ಅವರನ್ನು ರಾಘವೇಶ್ವರ ಭಾರತೀ ಸ್ವಾಮೀಜಿಗಳು ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದರು
ರಾಘವೇಂದ್ರ ಭಾರತೀ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ವಾರಣಾಸಿ ರಾಮಕೃಷ್ಣ ಭಟ್ ಅವರನ್ನು ರಾಘವೇಶ್ವರ ಭಾರತೀ ಸ್ವಾಮೀಜಿಗಳು ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದರು   

ಕುಂದಾಪುರ: ಮಾತೃತ್ವ ಹಾಗೂ ಗುರುತ್ವದ ಸಮಾಗಮದಿಂದ ಲೋಕ ಕಲ್ಯಾಣವಾಗುತ್ತದೆ ಎಂದು ರಾಮ ಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅರ್ಚಕ ಶ್ರೀಧರ ಅಡಿಗ ಅವರ ನಿವಾಸದಲ್ಲಿ ಗುರುವಾರ ನಡೆದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾ ಸ್ವಾಮೀಜಿಯವರ ಆರಾಧನಾ ಮಹೋತ್ಸವ ಮತ್ತು ಪಾಂಡಿತ್ಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ದೇಶಕ್ಕೆ ಅನುಗ್ರಹ ಕಿಂಡಿಯಂತಿರುವ ಕೊಲ್ಲೂರಿನಲ್ಲಿ ಆರಾಧನೆ ನಡೆಯುತ್ತಿರುವುದರಿಂದ ದೇಶ- ಕಾಲಗಳ ಸಮಾಗಮವಾಗಿದೆ.
ತಾಯಿ- ಗುರುಗಳ ಸಮಾಗಮವೇ ಸತ್ಯದ ಸಾಕ್ಷಾತ್ಕಾರ. ಇಬ್ಬರನ್ನೂ ಉಪೇಕ್ಷಿಸುವವರು ಯಾವ ಯಜ್ಞ ಯಾಗಾದಿಗಳನ್ನು ಮಾಡಿದರೂ ಫಲವಿಲ್ಲ. ತಾಯಿ ವಾತ್ಸಲ್ಯ ನೀಡಿದರೆ, ಗುರು ಜೀವಕ್ಕೆ ದೃಷ್ಟಿ ಕೊಡುತ್ತಾನೆ ಎಂದರು.

ADVERTISEMENT

ಶಂಕರಾಚಾರ್ಯರ ಹುಟ್ಟೂರಾದ ಕಾಲಟಿಯಲ್ಲಿ ತಾಯಿ ಸರಸ್ವತಿಯ ಸೇವೆ ಮಾಡುತ್ತಿರುವ ಪಂಡಿತರಿಗೆ ಬಾರಿಯ ಪಾಂಡಿತ್ಯ ಪುರಸ್ಕಾರ ಸಂದಿರುವುದು ವಿಶೇಷ ಎಂದರು. ವಾರಣಾಸಿ ರಾಮಕೃಷ್ಣ ಭಟ್ ಅವರಿಗೆ ಈ ಬಾರಿಯ ಶ್ರೀ ರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.

ಹಟ್ಟಿಯಂಗಡಿ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್.ರಾಮಚಂದ್ರ ಭಟ್, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪ್ರಧಾನ ಕಾರ್ಯದರ್ಶಿ ಪಿದಮಲೆ ನಾಗರಾಜ ಭಟ್, ಉಪಾಧ್ಯಕ್ಷೆ ಶೈಲಜಾ ಭಟ್, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಸರಸ್ವತಿ ಶ್ರೀಧರ ಅಡಿಗ, ವಿಘ್ನೇಶ್ ಅಡಿಗ ಇದ್ದರು.

ಶ್ವೇಶ್ವರ ಅಡಿಗ ದಂಪತಿ ಸಭಾಪೂಜೆ ನೆರವೇರಿಸಿದರು. ಸೇವಾಕರ್ತ ಅರ್ಚಕ ಶ್ರೀಧರ ಅಡಿಗ ಮಾತನಾಡಿದರು. ಪಂಚಕೋಟಿ ಪಂಚಾಕ್ಷರಿ ಜಪದ ರುದ್ರಾಕ್ಷಿ ಮಾಲೆ ಲೋಕಾರ್ಪಣೆ ಮಾಡಲಾಯಿತು. ಹೊಸ ಸಂವತ್ಸರದ ಪಂಚಾಂಗ ಬಿಡುಗಡೆ ಮಾಡಲಾಯಿತು.

ಮಿತ್ತೂರು ಕೇಶವ ಭಟ್, ಶ್ರೀಮಠದ ಲೋಕ ಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು ಪ್ರಾಸ್ತಾವಿಕವಾಗಿ ಮಾತನಾಡಿದರು. ದಾ.ನ.ಶ್ರೀನಿವಾಸ ಭಟ್ ಪ್ರಶಸ್ತಿಪತ್ರ ವಾಚಿಸಿದರು. ಶ್ರೀಪಾದ ಭಟ್ ಪರಿಚಯಿಸಿದರು, ವಿನಾಯಕ ಶಾಸ್ತ್ರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.