
ಉಡುಪಿ: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಬೇಕೆಂಬುದು ಈ ಭಾಗದ ರೈಲು ಪ್ರಯಾಣಿಕರ ಪ್ರಮುಖ ಬೇಡಿಕೆಯಾಗಿದ್ದು, ಕೇಂದ್ರ ಬಜೆಟ್‌ನಲ್ಲಿ ಈ ಕುರಿತು ಘೋಷಣೆಯಾಗುವುದೊ ಎಂಬ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ಜನರು.
ವಿಲೀನಕ್ಕಾಗಿ ಈಗಾಗಲೇ ಹಲವು ರಾಜ್ಯಗಳು ಒಪ್ಪಿಗೆಯನ್ನು ನೀಡಿದ್ದರೂ ಪ್ರಕ್ರಿಯೆ ಮಾತ್ರ ವಿಳಂಬವಾಗುತ್ತಿದೆ ಎನ್ನುತ್ತಾರೆ ಜನರು.
ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯೊಂದಿಗೆ ವಿಲೀನವಾದರೆ, ಹೆಚ್ಚು ಅನುದಾನ ಸಿಗುವ ಮೂಲಕ ರೈಲು ನಿಲ್ದಾಣಗಳ ಅಭಿವೃದ್ಧಿಯೂ ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವ ಹಲವು ಯೋಜನೆಗಳು ಜಾರಿಯಾಗಬಹುದು ಎನ್ನುವುದು ರೈಲು ಪ್ರಯಾಣಿಕರ ನಿರೀಕ್ಷೆಯಾಗಿದೆ.
ಕೊಂಕಣ ರೈಲ್ವೆ ನಿಗಮವು ಸ್ವತಂತ್ರವಾಗಿ ಬಜೆಟ್ ಬೆಂಬಲವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಕಾರಣ ಹಳಿ ದ್ವಿಗುಣಗೊಳಿಸುವಿಕೆ ಸೇರಿದಂತೆ ಹಲವು ಯೋಜನೆಗಳಿಗೆ ಸಮರ್ಪಕ ಅನುದಾನವಿಲ್ಲದೆ ಹಿನ್ನಡೆಯಾಗಿದೆ ಎನ್ನುವುದು ರೈಲು ಪ್ರಯಾಣಿಕರ ಅಭಿಪ್ರಾಯವಾಗಿದೆ.
ಭಾರತೀಯ ರೈಲ್ವೆಯೊಂದಿಗೆ ವಿಲೀನವಾದರೆ ರೈಲು ಮಾರ್ಗಗಳನ್ನು ಆಧುನೀಕರಿಸಲು ಮತ್ತು ಪ್ರಯಾಣಿಕರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಬಹುದು. ಪ್ರಯಾಣಿಕರ ಸುರಕ್ಷತೆ, ಭದ್ರತೆಗಾಗಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬಹುದು ಎನ್ನುತ್ತಾರೆ ಜನರು.
ಕೊಂಕಣ ರೈಲ್ವೆಯು ಪಶ್ಚಿಮ ಕರಾವಳಿಯ ಪ್ರಮುಖ ರೈಲು ಮಾರ್ಗವಾಗಿದ್ದು, ದೇಶದ ಪ್ರಮುಖ ಪ್ರವಾಸೋದ್ಯಮ ಸ್ಥಳಗಳಿಗೂ ಸಂಪರ್ಕ ಕಲ್ಪಿಸುತ್ತದೆ.
ವಿಲೀನ ಪ್ರಕ್ರಿಯೆಗೆ ಸಂಬಂಧಿಸಿ ಷೇರು ಹಂಚಿಕೆ ಮತ್ತು ಹಣಕಾಸಿನ ಮರುಪಾವತಿಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೊಂಕಣ ರೈಲ್ವೆಯ ಅಧೀನದಲ್ಲಿ ಬರುವ ಬಾರ್ಕೂರು ರೈಲು ನಿಲ್ದಾಣದಲ್ಲಿ ಒಂದೇ ಫ್ಲಾಟ್‌ಫಾರಂ ಇರುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಇಲ್ಲಿ ಇನ್ನೊಂದು ಫ್ಲಾಟ್‌ಫಾರಂ ನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬಂದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಜನರು.
ವಂದೇ ಭಾರತ್ ರೈಲು ಸೇವೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆಯೂ ಜಿಲ್ಲೆಯ ರೈಲು ಪ್ರಯಾಣಿಕರಿಂದ ಕೇಳಿಬಂದಿದೆ.
ಬೆಂಗಳೂರಿನಿಂದ ಕಾರವಾರದ ವರೆಗೆ ಮತ್ತು ಮಂಗಳೂರಿನಿಂದ ಮುಂಬೈವರೆಗೆ ವಂದೇ ಭಾರತ್ ರೈಲು ಸೇವೆ ಆರಂಭಿಸಿದರೆ ಉಡುಪಿ ಬಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ಪ್ರಯಾಣಿಕರು.
ಉಡುಪಿ, ಕುಂದಾಪುರ ಭಾಗದ ಸಾಕಷ್ಟು ಜನರು ಮುಂಬೈನಲ್ಲಿ ನೆಲೆಸಿದ್ದು, ವಂದೇ ಭಾರತ್ ರೈಲು ಸೇವೆ ಆರಂಭಿಸಿದರೆ ಅವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸದ್ಯ ಬೆಂಗಳೂರು– ಮಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲನ್ನಾದರೂ ಕಾರವಾರದ ವರೆಗೆ ವಿಸ್ತರಿಸಬೇಕೆಂದು ರೈಲ್ವೆ ಹೋರಾಟಗಾರರು ಒತ್ತಾಯಿಸಿದ್ದಾರೆ.
ಶೀಘ್ರ ವಿಲೀನವಾಗಲಿ
‘ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯೊಂದಿಗೆ ಅದಷ್ಟು ಶೀಘ್ರ ವಿಲೀವಾಗಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಕೇಂದ್ರ ಬಜೆಟ್‌ನಲ್ಲಿ ಘೋಷಿಸಬೇಕು’ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಹೇಳಿದ್ದಾರೆ. ‘ವಿಲೀನಗೊಳಿಸುವ ಕುರಿತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಸ್ತಾವ ಸಲ್ಲಿಸಿದ್ದು ಈ ಭಾಗದ ಜನಪ್ರತಿನಿಧಿಗಳೂ ಬೆಂಬಲ ನೀಡಿದ್ದಾರೆ. ವಿಲೀನ ಪ್ರಕ್ರಿಯೆ ನಡೆಯುತ್ತಿದ್ದರೂ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿರುವ ಬಹುತೇಕ ರೈಲು ನಿಲ್ದಾಣಗಳಲ್ಲಿ ಸಮರ್ಪಕ ಸೌಲಭ್ಯಗಳಿಲ್ಲದೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ವಿಲೀನವಾದರೆ ಮಾತ್ರ ಅದಕ್ಕೆ ಪರಿಹಾರ ಸಿಗಬಹುದು’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.