ADVERTISEMENT

ಬ್ರಹ್ಮಾವರ| ಕೊರಗರ ಮೇಲೆ ದೌರ್ಜನ್ಯ ಆರೋಪ: ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 4:31 IST
Last Updated 9 ಡಿಸೆಂಬರ್ 2025, 4:31 IST
ಗರಿಕೆಮಠ, ಅಚ್ಲಾಡಿಯ ಕೊರಗ ಕುಟುಂಬದವರು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಸಹಕಾರದಲ್ಲಿ ಬ್ರಹ್ಮಾವರ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು
ಗರಿಕೆಮಠ, ಅಚ್ಲಾಡಿಯ ಕೊರಗ ಕುಟುಂಬದವರು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಸಹಕಾರದಲ್ಲಿ ಬ್ರಹ್ಮಾವರ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು   

ಬ್ರಹ್ಮಾವರ: ಕೊರಗ ಕುಟುಂಬಗಳು ಹಲವು ದಶಕದಿಂದ ನಡೆಸಿಕೊಂಡು ಬಂದಿರುವ ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆಯನ್ನು ಅನ್ಯರು‌ ಕಬಳಿಸಲು ಯತ್ನಿಸುತ್ತಿದ್ದು, ಕೊರಗರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ‌ ಕೋಟ ಸಮೀಪದ ಗರಿಕೆಮಠ, ಅಚ್ಲಾಡಿಯ ಕೊರಗ ಕುಟುಂಬದವರು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಸಹಕಾರದಲ್ಲಿ ಬ್ರಹ್ಮಾವರ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಸುಜಾತಾ ಮಾತನಾಡಿ, ಉಡುಪಿ ಜಿಲ್ಲೆಯ ಯಡ್ತಾಡಿ ಗ್ರಾಮದ ಸರ್ವೆ ನಂಬರ್ 145ರಲ್ಲಿ 1.84 ಎಕರೆ ಜಾಗದಲ್ಲಿ ಪರಿಶಿಷ್ಟ ಪಂಗಡದ ರಮಣಿ, ನರ್ಸಿ, ಐತ, ಚಂದ್ರ, ಭಾಸ್ಕ ಅವರು ಪಾರಂಪರಿಕವಾಗಿ ಕಲ್ಲು ಗಣಿಗಾರಿಕೆ ಮಾಡಿಕೊಂಡು ಬಂದಿದ್ದಾರೆ. ಅಲ್ಲದೆ ಅದೇ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಆದರೆ, ಈಗ ಈ ಜಾಗದಲ್ಲಿ ಕಟ್ಟಡ ಕಲ್ಲು ಯಥೇಚ್ಛವಾಗಿ ಸಿಗುತ್ತಿರುವುದರಿಂದ ಸ್ಥಳೀಯ ಒಂದಷ್ಟು ಮಂದಿ ರಾಜಕೀಯ ಪ್ರಭಾವ ಬಳಸಿ ಆ ಜಾಗವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಅವರು ಸರ್ಕಾರಕ್ಕೆ ಕಲ್ಲುಕೋರೆಯ ಪರವಾನಗಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಈ ಜಾಗದಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಟ್ಟರೆ ಮೂಲ ನಿವಾಸಿಗಳಾದ ನಮಗೆ ಅನ್ಯಾಯವಾಗುತ್ತದೆ. ಜಿಲ್ಲಾಧಿಕಾರಿ ಯಾವುದೇ ಕಾರಣಕ್ಕೂ ಅವರಿಗೆ ಕಲ್ಲು ಗಣಿಗಾರಿಕೆ ಮಾಡಲು ಅವಕಾಶ ನೀಡಬಾರದು ಎಂದು ಹೇಳಿದರು.

ADVERTISEMENT

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಮಾತನಾಡಿ, ಕೊರಗ ಸಮಾಜದ ಮೇಲೆ ಬಲಾಢ್ಯರು, ರಾಜಕೀಯ ಪ್ರಾಬಲ್ಯರಿಂದ‌ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅದರ ಮುಂದುವರಿದ ಭಾಗ ಎನ್ನುವಂತೆ ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆ ಕಾರ್ಮಿಕರನ್ನು ಒಕ್ಕಲೆಬ್ಬಿಸುವ ‌ಹುನ್ನಾರ ಗರಿಕೆ ಮಠದಲ್ಲಿ ನಡೆಯುತ್ತಿದೆ. ಪ್ರಭಾವಿಗಳಿಗೆ ಮಣಿದು ಕೊರಗ ಕುಟುಂಬ ಹೊರತುಪಡಿಸಿ ಇತರರಿಗೆ ಪರವಾನಗಿ ನೀಡಿದಲ್ಲಿ ಆಮರಣಾಂತ ಉಪವಾಸ ನಡೆಸಲಾಗುವುದು ಎಂದರು.

ಪ್ರತಿಭಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸುದರ್ಶನ್ ಭೇಟಿ ನೀಡಿ ಮಾತುಕತೆ ನಡೆಸಿದರು.

ಕೊರಗ ಸಮಾಜದ ಪ್ರಮುಖರಾದ ಬೋಗ್ರ ಕೊಕ್ಕರ್ಣೆ, ಶೀನ ಕೊರಗ ಇನ್ನಾ, ದಿವಾಕರ ಕಳ್ತೂರು, ವೆಂಕಟೇಶ ಮಧುವನ, ಸಂತ್ರಸ್ತರಾದ ರಮಣಿ, ಚಂದ್ರ, ನರ್ಸಿ, ಮಂಜುಳಾ ಇದ್ದರು.

ಅಧಿಕಾರಿ ಭೇಟಿ ಮನವೊಲಿಕೆ

ಪ್ರತಿಭಟನಾ ಸ್ಥಳಕ್ಕೆ ಇಲಾಖೆಯ ಅಧಿಕಾರಿ ಹಾಜೀರ ಭೇಟಿ ನೀಡಿ ಮಾತುಕತೆ ನಡೆಸಿದರು. ಆಕ್ಷೇಪಣೆ ಕುರಿತು ಈಗಾಗಲೇ ತಹಶೀಲ್ದಾರರ ಮೂಲಕ ವರದಿ ಪಡೆದಿದ್ದು ಹೇಳಿಕೆ ದಾಖಲಿಸಲಾಗಿದೆ. ವಸ್ತುಸ್ಥಿತಿ ಬಗ್ಗೆ ಕೂಡ ಉಲ್ಲೇಖ ಮಾಡಲಾಗಿದೆ. ಮುಂದೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಮೂಲ ನಿವಾಸಿಗಳಾದರೂ ಕೂಡ ಅರ್ಜಿ ಹಾಕಿ‌ ಪರವಾನಗಿ ಪಡೆದೇ ಗಣಿಗಾರಿಕೆ ನಡೆಸಬೇಕು.‌ ಕೊರಗ ಕುಟುಂಬಗಳು ಕೂಡ ಅರ್ಜಿ ಸಲ್ಲಿಸಿ ಎಂದು ಹೇಳಿದರು. ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.