ADVERTISEMENT

ಪಡುಬಿದ್ರಿ: ಕೊರಗರ ಹಕ್ಕೊತ್ತಾಯ ಸಮಾವೇಶ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 4:43 IST
Last Updated 10 ನವೆಂಬರ್ 2025, 4:43 IST
ನಿವೃತ್ತ ಪ್ರಾಧ್ಯಾಪಕ ರಾಜೇಂದ್ರ ಉಡುಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು
ನಿವೃತ್ತ ಪ್ರಾಧ್ಯಾಪಕ ರಾಜೇಂದ್ರ ಉಡುಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು   

ಪಡುಬಿದ್ರಿ: ‘ಕರಾವಳಿ ಕರ್ನಾಟಕದ ಮೂಲ ನಿವಾಸಿಗಳಾಗಿರುವ ಕೊರಗ ಸಮುದಾಯದ ವಂಶವಾಹಿ ಕೊರಗರಲ್ಲಿ ಮಾತ್ರವಲ್ಲದೆ ಎಲ್ಲರಲ್ಲಿಯೂ ಇದೆ’ ಎಂದು ನಿವೃತ್ತ ಪ್ರಾಧ್ಯಾಪಕ ಕೆ. ರಾಜೇಂದ್ರ ಉಡುಪ ಅಭಿಪ್ರಾಯಪಟ್ಟರು.

ಅಡ್ವೆ ಆನಂದಿ ಸಭಾಭವನದಲ್ಲಿ ಕೊರಗ ಸಮುದಾಯದ ಜನಸಂಖ್ಯೆ ಕುಸಿತ, ನಿರುದ್ಯೋಗ, ಹಸಿವು, ಬಡತನ, ವಸತಿ ಮತ್ತು ಆರೋಗ್ಯ ಸಮಸ್ಯೆ ವಿರುದ್ಧ, ಒಳಮೀಸಲಾತಿ, ಮಹಮ್ಮದ್ ಪೀರ್ ವರದಿ ಅನುಷ್ಠಾನ, ಜಾತಿ ತಾರತಮ್ಯ, ಶೋಷಣೆ ತಡೆಯಲು ಸಾಮೂಹಿಕ ಜನಾಂದೋಲನಕ್ಕಾಗಿ ಭಾನುವಾರ ನಡೆದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪಡುಬಿದ್ರಿ ವಲಯದ ಪ್ರಥಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.  

ನಮ್ಮೆಲ್ಲರ ನಾಗರಿಕ ಬದುಕಿನ ಕಾರಣಕರ್ತರಾಗಿರುವ ಕೊರಗ ಸಮುದಾಯಕ್ಕೆ ಚಾರಿತ್ರಿಕ ಅನ್ಯಾಯ ಎಸಗಲಾಗಿದೆ. ಅ ಅಪರಾಧಿ ಭಾವನೆಗೆ ನಾವು ಬೆಲೆತೆರಬೇಕಾದ ಕಾಲ ಬಂದಿದೆ. ಪೆರಿಯಾರ್ ಅವರ ಸೆಲ್ಫ್ ರೆಸ್ಪೆಕ್ಟ್ ಚಳವಳಿಯಿಂದ ಸ್ಫೂರ್ತಿ ಪಡೆಯಬೇಕಿದೆ ಎಂದರು.

ADVERTISEMENT

ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡಿ, ಮಹಮ್ಮದ್ ಪೀರ್ ವರದಿಯ ಸಮಗ್ರ ಅನುಷ್ಠಾನ ಮತ್ತು ಒಳಮೀಸಲಾತಿಗೆ ಕೊರಗ ಸಮುದಾಯ ಮಾತ್ರವಲ್ಲದೆ ನಾಗರೀಕ ಸಮುದಾಯ ಹೋರಾಟಕ್ಕೆ ಇಳಿಯುವ ಅವಶ್ಯಕತೆ ಇದೆ ಎಂದರು.

ಹಕ್ಕೊತ್ತಾಯ: ಕೊರಗ ಸಮುದಾಯದ ಭೂಮಿ ಹಕ್ಕು, ವಸತಿ, ಶಿಕ್ಷಣ, ನಿರುದ್ಯೋಗ ಪರಿಸ್ಥಿತಿ, ಒಳಮೀಸಲಾತಿ ಜಾರಿ, ಕೊರಗ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರ್ಣಯಗಳ ಹಕ್ಕೊತ್ತಾಯ ಮಂಡಿಸಲಾಯಿತು. ಈ ನಿರ್ಣಯಗಳನ್ನು ಜಿಲ್ಲಾಡಳಿತ, ಸರ್ಕಾರಕ್ಕೆ ಕಳುಹಿಸಿಕೊಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಜನಪರ, ಸಮುದಾಯದ ಅಭ್ಯುದಯಕ್ಕಾಗಿ ವಿಚಾರ ಸಂಕಿರಣಗಳು ನಡೆಯಿತು.

ಕರಿಯ ಕೆ., ಮಹಿಳಾ ಪರ ಹೋರಾಟಗಾರ್ತಿ ಕೀರ್ತಿ ಸಾಲ್ಯಾನ್, ದೀಪಕ್ ಕಾಮತ್ ಮಾತನಾಡಿದರು. ಸಂಘಟನೆಯ ನಾಯಕ ಶಶಿಧರ ಕೆರೆಕಾಡು ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಪದಾಧಿಕಾರಿಗಳಾದ ಟಿ. ಪ್ರಾನಿಸ್ ಸಲ್ದಾನ, ಟಿ. ಉಮರಬ್ಬ, ಉಮ್ಮರ್ ಕಾಸಿಂ ಭಾಗವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಐ. ಲಕ್ಷ‌್ಮೀಕಾಂತ ರಾವ್ ಇನ್ನಾ ಸ್ವಾಗತಿಸಿದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಇನ್ನಾ, ಪ್ರಮೀಳಾ ಕೆ. ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.