ಕೋಟ(ಬ್ರಹ್ಮಾವರ): ಕೋಟತಟ್ಟು ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಕೋಟತಟ್ಟು ವ್ಯಾಪ್ತಿಯ ಚಿಟ್ಟಿಬೆಟ್ಟು ಪರಿಸರದ ಎಂಟು ಕೊರಗ ಕಟುಂಬಕ್ಕೆ ಮನೆ ನಿರ್ಮಿಸಿಕೊಡುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಹಲವಾರು ವರ್ಷಗಳಿಂದ ಗುಡಿಸಲಿನಲ್ಲಿ ವಾಸ್ತವ್ಯವಿರುವ ಈ ಕುಟುಂಬಗಳಿಗೆ ಸೂರು ಕಲ್ಪಿಸುವ ಪಂಚಾಯಿತಿ ಹಾಗೂ ಇಲ್ಲಿನ ದಾನಿಗಳ ಕೊಡುಗೆಯನ್ನು ಜಿಲ್ಲಾಧಿಕಾರಿ ಪ್ರಶಂಸಿಸಿದರು. ಇಂತಹ ಯೋಜನೆಗಳು ಕಾರ್ಯಾಂಗದ ಮೇಲೆ ನಂಬಿಕೆ ಹಾಗೂ ಜನಸಮುದಾಯವನ್ನು ಮತ್ತಷ್ಟು ಹತ್ತಿರಗೊಳಿಸುತ್ತದೆ ಎಂದು ಹೇಳಿದರು.
ನಿರ್ಮಾಣಗೊಳ್ಳುತ್ತಿರುವ ಎಂಟು ಮನೆಗಳನ್ನು ವೀಕ್ಷಿಸಿ ಅಲ್ಲಿನ ಕೊರಗ ಸಮುದಾಯದವರ ಮಾಹಿತಿ ಪಡೆದುಕೊಂಡು, ಮನೆ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ದೊರಕಿಸುವ ಭರವಸೆ ಮತ್ತು ದಾನಿಗಳಿಂದ ಆರ್ಥಿಕ ಧನ ಸಹಾಯ ದೊರಕಿಸುವತ್ತ ಶ್ರಮಿಸುವುದಾಗಿ ತಿಳಿಸಿದರು.
ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್, ಪಂಚಾಯಿತಿ ಸದಸ್ಯರಾದ ಪ್ರಕಾಶ ಹಂದಟ್ಟು, ವಿದ್ಯಾ ಸಾಲಿಯಾನ್, ಸೀತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್, ಮಾಜಿ ಸದಸ್ಯ ರಾಜೇಶ ಪೂಜಾರಿ, ಕೊರಗ ಸಮುದಾಯದ ಮುಖಂಡರಾದ ಗಣೇಶ ಕುಂಭಾಶಿ, ಗಣೇಶ ಬಾರ್ಕೂರು, ಪಂಚಾಯಿತಿ ಸಿಬ್ಬಂದಿ ರವಿ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.