ADVERTISEMENT

ಕಾಲ್ನಡಿಗೆಯಲ್ಲೇ ಕಾಮಗಾರಿ ಪರಿಶೀಲನೆ

ಮಲ್ಪೆ –ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ: ಭೂಸ್ವಾಧೀನ ಪ್ರಕ್ರಿಯೆಗಾಗಿ ಸಂಸದರಿಂದ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 16:11 IST
Last Updated 3 ಮಾರ್ಚ್ 2025, 16:11 IST
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸೋಮವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿದರು
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸೋಮವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿದರು   

ಉಡುಪಿ: ಮಲ್ಪೆ– ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಕಾರಣ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸೋಮವಾರ ಮಲ್ಪೆಯಿಂದ ಕರಾವಳಿ ಬೈಪಾಸ್‌ವರೆಗೆ ಸುಮಾರು 4 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿ ಕಾಮಗಾರಿ ಪರಿಶೀಲನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಾದ ಸ್ಥಳಗಳನ್ನು ಸಂಸದರು ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ರಾಷ್ಟ್ರೀಯ ಹೆದ್ದಾರಿ 169 ಎ ನಲ್ಲಿ ಮಲ್ಪೆ - ಆಗುಂಬೆ ಚತುಷ್ಪತ ಕಾಮಗಾರಿ ಪ್ರಗತಿಯಲ್ಲಿದ್ದು, ಅಲ್ಲಲ್ಲಿ ಕೆಲವೊಂದು ಕಾರಣಗಳಿಂದ ಭೂಸ್ವಾಧೀನ ಪ್ರಕ್ರಿಯೆಗೆ ತಡೆಯುಂಟಾಗಿದೆ. ಈ ರಸ್ತೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರಿಂದಲೂ ಒತ್ತಡ ಉಂಟಾಗಿದೆ.

ADVERTISEMENT

ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಮಲ್ಪೆಯಿಂದ ಕರಾವಳಿ ಬೈಪಾಸ್ ವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 500 ಮೀ.ನಷ್ಟು ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿದೆ. 227 ಪ್ರಕರಣ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಒಳಪಟ್ಟಿದೆ. ಅದರಲ್ಲಿ 133 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 25 ಪ್ರಕರಣಗಳಿಗೆ ಶುಕ್ರವಾರದೊಳಗೆ ಪರಿಹಾರ ನೀಡಲಾಗುವುದು. ಸುಮಾರು 40 ಪ್ರಕರಣಗಳಲ್ಲಿ ನೋಟಿಸ್ ನೀಡುವ ಪ್ರಕ್ರಿಯೆ ನಡೆಯಲಿದೆ ಎಂದರು.

ಮಲ್ಪೆಯ ಮೊಗವೀರ ಸಭಾಭವನದಿಂದ ಕಲ್ಮಾಡಿವರೆಗೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಕಡೆಗಳಲ್ಲಿ ಇದೇ 4 ರಿಂದ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಲ್ಲಿಯಾದರೂ ಸಮಸ್ಯೆ ಉಂಟಾದಲ್ಲಿ ಕಾನೂನು ಪ್ರಕಾರ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ಈ ಪರಿಸರದಲ್ಲಿ ಪ್ರಸ್ತುತ ಪ್ರತಿ ಸೆಂಟ್ಸ್‌ ಜಾಗಕ್ಕೆ ₹7 ರಿಂದ ₹8 ಲಕ್ಷದ ವರೆಗೆ ಮೌಲ್ಯವಿದೆ. ಸರ್ಕಾರ ನಿಗದಿ ಪಡಿಸಿದ ₹1 ಲಕ್ಷ ಪರಿಹಾರವನ್ನು ಹೇಗೆ ಪಡೆದುಕೊಳ್ಳುವುದು ಎಂದು ಭೂಮಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಕೋಟ ತಿಳಿಸಿದರು.

ಗರಿಷ್ಠ ಪರಿಹಾರ ಒದಗಿಸುವ ಬಗ್ಗೆ ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿ, ಹೆಚ್ಚಿನ ಪರಿಹಾರ ದೊರಕಿಸಿಕೊಡಲು ನಾನು ಮತ್ತು ಶಾಸಕ ಯಶ್‌ಪಾಲ್ ಸುವರ್ಣ ಪ್ರಯತ್ನಿಸುತ್ತೇವೆ. ಅದಕ್ಕೆ ಹೆಚ್ಚಿನ ಭೂಮಾಲೀಕರು ಒಪ್ಪಿಕೊಂಡಿದ್ದಾರೆ ಎಂದರು.

ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಉಪವಿಭಾಗಧಿಕಾರಿ ಮಹೇಶ್ಚಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್, ಗುತ್ತಿಗೆದಾರರು ಉಪಸ್ಥಿತರಿದ್ದರು.

ಮಲ್ಪೆ ಬೀಚ್‌ ಹಾಗೂ ಮೀನುಗಾರಿಕಾ ಬಂದರಿಗೆ ತೆರಳುವ ಈ ರಸ್ತೆ ತೀರಾ ಹದಗೆಟ್ಟಿರುವುದರಿಂದ ವಾಹನ ಸವಾರರಿಗೆ ಸಾಕಷ್ಟು ತೊಂದರೆಗಳಾಗುತ್ತಿವೆ. ಆದಿ ಉಡುಪಿ, ಮಲ್ಪೆ ಮೊದಲಾದೆಡೆ ಈ ರಸ್ತೆಯು ಸಂಪೂರ್ಣ ಹೊಂಡಮಯವಾಗಿದೆ. ಇದರಲ್ಲಿ ಸಂಚರಿಸಲು ದ್ವಿಚಕ್ರವಾಹನ ಸವಾರರು ಹರಸಾಹಸ ಪಡಬೇಕಾಗಿದೆ.

ಈ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿರುವುದರಿಂದ ಮಲ್ಪೆ ಬೀಚ್‌ಗೆ ತೆರಳುವ ಪ್ರವಾಸಿಗರಿಗೆ ಮತ್ತು ಬಂದರಿನಿಂದ ಮೀನು ಸಾಗಿಸುವ ವಾಹನಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ.

ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಅಲ್ಲಿ ಭೂಸ್ವಾಧೀನದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಬಂದರೆ ಪರಿಶೀಲಿಸಲಾಗುವುದು
ಕೋಟ ಶ್ರೀನಿವಾಸ ಪೂಜಾರಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.