ADVERTISEMENT

ಪಡುಬಿದ್ರಿ | 2ನೇ ಹಂತದ ಸರ್ವಿಸ್ ರಸ್ತೆ ಅನುಮೋದನೆಗೆ ಯತ್ನ: ಕೋಟಾ ಪೂಜಾರಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:41 IST
Last Updated 17 ಫೆಬ್ರುವರಿ 2026, 2:41 IST
ಸರ್ವಿಸ್ ರಸ್ತೆ ಕಾಮಗಾರಿ ಪರಿಶೀಲಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳೊಂದಿಗೆ ಚರ್ಚಿಸಿದರು
ಸರ್ವಿಸ್ ರಸ್ತೆ ಕಾಮಗಾರಿ ಪರಿಶೀಲಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳೊಂದಿಗೆ ಚರ್ಚಿಸಿದರು   

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿಯ ಎರ್ಮಾಳು ಮಸೀದಿ ಬಳಿಯಿಂದ ನಾರಾಳ್ತಾಯ ಗುಡಿ ವರೆಗೆ ನಿರ್ಮಿಸುತ್ತಿರುವ ಸರ್ವಿಸ್ ರಸ್ತೆ ಕಾಮಗಾರಿಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು ಮೊದಲ ಹಂತದಲ್ಲಿ ಕೈಗೆತ್ತಿಕೊಂಡಿರುವ ಸರ್ವಿಸ್ ರಸ್ತೆಗಳಲ್ಲಿ ಶೇಕಡ 75ರಷ್ಟು ಕಾಮಗಾರಿ ಪೂರ್ಣಗೊಂಡ ಬಳಿಕ  ಎರಡನೇ ಹಂತದಲ್ಲಿ ಬಾಕಿ ಇರುವ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಲಾಗುವುದು ಎಂದರು.

ಮಳೆಗಾಲ ಆರಂಭವಾಗುವ ಮೊದಲು ಜಿಲ್ಲೆಯ ಮೊದಲ ಹಂತದ ಸರ್ವಿಸ್ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿದೆ. ಹೆಜಮಾಡಿಯಿಂದ ಕೋಟೇಶ್ವರ ವರೆಗೆ ನಡೆಯುತ್ತಿರುವ 26 ಕಿಮೀ ಉದ್ದದ ಸರ್ವೀಸ್ ರಸ್ತೆಯ ಅಡೆತಡೆಗಳನ್ನು ನಿವಾರಿಸಲು ಫೆ.17ರಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದರು.

ADVERTISEMENT

ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಫ್ಲೈ ಓವರ್: ಪಡುಬಿದ್ರಿ, ಬ್ರಹ್ಮಾವರ, ಕೋಟ, ತೆಕ್ಕಟ್ಟೆಯಲ್ಲಿ ಮೇಲ್ಸೇತುವೆ ಹಾಗೂ ಜಿಲ್ಲೆಯ ಬ್ಲ್ಯಾಕ್‌ಸ್ಪಾಟ್‌ಗಳ ವಿವರಕ್ಕಾಗಿ ಡಿಪಿಆರ್ ತಯಾರಿಸಲು ಕೇಂದ್ರ ಸರ್ಕಾರ ಏಜನ್ಸಿಯೊಂದನ್ನು ಗೊತ್ತುಮಾಡಿದೆ. ಅದರ ವರದಿಯ ಬಳಿಕ ಈ ಕಾಮಗಾರಿಗಳು ನಡೆಯಲಿವೆ. ಬ್ರಹ್ಮಾವರ ಮತ್ತು ಉಡುಪಿಯ ನಿಟ್ಟೂರಿನಲ್ಲಿ ಸ್ಕೈವಾಕ್ ಕಾಮಗಾರಿ ನಡೆಯಲಿದ್ದು ಎರ್ಮಾಳು ಬದಲಿಗೆ ಉಚ್ಚಿಲದಲ್ಲಿ ಸ್ಕೈ ವಾಕ್ ನಿರ್ಮಿಸಲಾಗುವುದು. ಕಾಮಗಾರಿಗಳು ತಿಂಗಳೊಳಗೆ ಆರಂಭವಾಗಲಿವೆ ಎಂದು ಸಂಸದರು ತಿಳಿಸಿದರು.

ಹೆದ್ದಾರಿಯ ಬಡಾ ಗ್ರಾಮದಲ್ಲಿ ತಡೆಯುಂಟುಮಾಡುತ್ತಿರುವ ಅನಧಿಕೃತ ನಿರ್ಮಾಣಗಳನ್ನು ಕೆಡವಲು, ಹೆಜಮಾಡಿಯ ಅನಧಿಕೃತ ಹೆದ್ದಾರಿ ಎಂಟ್ರಿಗಳನ್ನು ಪರಿಶೀಲಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬಡಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮೆಂಡನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಜಿ ನೀತಾ ಗುರುರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಮೇಶ್ ಪೂಜಾರಿ, ಶಾರದಾ ಪೂಜಾರಿ, ಎರ್ಮಾಳು ತೆಂಕ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಶ್ರೀ ಹರೀಶ್ ಕೋಟ್ಯಾನ್, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಬಡಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕೋಟ್ಯಾನ್, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್, ಸೈಟ್ ಎಂಜಿನಿಯರ್ ನಾಸಿರ್, ಗುತ್ತಿಗೆದಾರರಾದ ನ್ಯಾಷನಲ್ ಇನ್‌ಫ್ರಾದ ಪಾಲುದಾರ ಅಬ್ದುಲ್ ಕಲಾಂ ಪಾಲ್ಗೊಂಡಿದ್ದರು.

ವಿಮಾನ ನಿಲ್ದಾಣಕ್ಕೆ ಪ್ರಸ್ತಾವನೆ

ಎಲ್ಲೂರಿನ 950 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳ ನಿರ್ಮಾಣಕ್ಕೆ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವರು ರಾಜ್ಯ ಸರ್ಕಾರದ ಸಹಕಾರ ಕೋರಿದ್ದಾರೆ. ಜಿಲ್ಲಾಡಳಿತ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದು ಸಂಸದ ಕೋಟ ತಿಳಿಸಿದರು. ರಾಜ್ಯ ಸರ್ಕಾರದ ಅನುಮೋದನೆ ಪಡೆದ ಬಳಿಕ ಪ್ರಸ್ತಾವನೆಯನ್ನು ಕೇಂದ್ರಕ್ಕೆ ರವಾನಿಸಲಾಗುವುದು ಎಂದ ಅವರು ವಿಮಾನ ನಿಲ್ದಾಣ ಹಾಗೂ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.