ADVERTISEMENT

ಉಡುಪಿ: ಸುವರ್ಣ ತೊಟ್ಟಿಲಲ್ಲಿ ಕಂಗೊಳಿಸಿದ ಕೃಷ್ಣ

ಸರಳ ಕೃಷ್ಣ ಜನ್ಮಾಷ್ಟಮಿ, ಮಧ್ಯರಾತ್ರಿ 12.16ಕ್ಕೆ ಅರ್ಘ್ಯ ಸಮರ್ಪಣೆ, ಶುಕ್ರವಾರ ವಿಟ್ಲಪಿಂಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 14:32 IST
Last Updated 10 ಸೆಪ್ಟೆಂಬರ್ 2020, 14:32 IST
ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಗುರುವಾರ ಕೃಷ್ಣನಿಗೆ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು.
ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಗುರುವಾರ ಕೃಷ್ಣನಿಗೆ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು.   

ಉಡುಪಿ: ಕೋವಿಡ್‌ ಸೋಂಕಿನ ಕಾರಣದಿಂದ ಇದೇ ಮೊದಲ ಬಾರಿಗೆ ಭಕ್ತರ ಅನುಪಸ್ಥಿತಿಯಲ್ಲಿ ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ನಡೆಯುತ್ತಿದೆ. ಗುರುವಾರ ಮಠದಲ್ಲಿ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳು ನಡೆದವು.

ಬಾಲಗೋಪಾಲನ ಅಲಂಕಾರ:ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಬಾಲಗೋಪಾಲನ ಅಲಂಕಾರ ಮಾಡಿದ್ದರು. ಸುವರ್ಣ ತೊಟ್ಟಿಲಲ್ಲಿ ಕಡೆಗೋಲು ಹಿಡಿದು ನಿಂತಿದ್ದ ಕೃಷ್ಣ ಕಣ್ಮನ ಸೆಳೆಯುತ್ತಿದ್ದ. ಬಳಿಕ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಲಕ್ಷ ತುಳಸಿ ಅರ್ಚನೆ ಮಾಡಿ ಮಹಾ ಪೂಜೆ ನೆರವೇರಿಸಿದರು.

ಜನ್ಮಾಷ್ಟಮಿ ಅಂಗವಾಗಿ ರಾತ್ರಿ ನಡೆಯುವ ವಿಶೇಷ ಮಹಾ ಪೂಜೆಗೆ ಕೃಷ್ಣನಿಗೆ ನೈವೇದ್ಯವಾಗಿ ಭಕ್ಷ್ಯಗಳನ್ನು ಅರ್ಪಿಸಲು ಅಷ್ಟಮಠದ ಯತಿಗಳು ಸ್ವತಃ ಬಗೆಬಗೆಯ ಲಡ್ಡುಗಳನ್ನು ಕಟ್ಟಿ ಲಡ್ಡುಕಟ್ಟುವ ಶಾಸ್ತ್ರ ನೇರವೇರಿಸಿದರು.

ADVERTISEMENT

ರಾತ್ರಿ ಮಹಾಪೂಜೆ ನೇರವೇರಿದ ಬಳಿಕ ಜನ್ಮಾಷ್ಟಮಿಯ ಪ್ರಮುಖ ಘಟ್ಟವಾದ ಅರ್ಘ್ಯ ಸಮರ್ಪಣೆ ನಡೆಯಲಿದೆ. ಮಧ್ಯರಾತ್ರಿ 12.16ರ ಶುಭ ಮುಹೂರ್ತದಲ್ಲಿ ಕೃಷ್ಣನಿಗೆ ಯತಿಗಳು ಅರ್ಘ್ಯ ಸಮರ್ಪಿಸಲಿದ್ದಾರೆ. ಈ ಸಂದರ್ಭ ಅಷ್ಟಮಠದ ಯತಿಗಳು, ವಿದ್ವಾಂಸರು ಹಾಗೂ ಸಿಬ್ಬಂದಿ ಉಪಸ್ಥಿತರಿರಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ:ಜನ್ಮಾಷ್ಟಮಿ ಅಂಗವಾಗಿರಾಜಾಂಗಣದಲ್ಲಿ ದಾಮೋದರ ಶೇರಿಗಾರ್ ಹಾಗೂ ಬಳಗದಿಂದ ಸ್ಯಾಕ್ಸೊಫೋನ್ ವಾದನ ನಡೆಯಿತು.ಪಾವನ ಬಿ.ಆಚಾರ್ಯ ಅವರ ವೀಣಾ ವಾದನ, ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್‌ನ ಕಲಾವಿದರಿಂದ ‘ಉಷಾ ಪರಿಣಯ’ ಪ್ರಸಂಗದ ಯಕ್ಷಗಾನ ನಡೆಯಿತು.

ವಿಟ್ಲಪಿಂಡಿ ಮಹೋತ್ಸವ:ಶುಕ್ರವಾರ ರಥಬೀದಿಯಲ್ಲಿ ವಿಟ್ಲಪಿಂಡಿ ಉತ್ಸವ ನಡೆಯಲಿದೆ.ಚಿನ್ನದ ರಥದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯನ್ನಿಟ್ಟು ರಥಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ.ವಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ. ಈಗಾಗಲೇ ಕೃಷ್ಣನ ಆಕರ್ಷಕ ಮೃಣ್ಮಯ ಮೂರ್ತಿ ಸಿದ್ಧವಾಗಿದೆ.

ಮೊಸರು ಕುಡಿಕೆ ಪ್ರಮುಖ ಆಕರ್ಷಣೆ:ಸಂಪ್ರದಾಯದಂತೆ ಈ ವರ್ಷವೂ ರಥಬೀದಿಯಲ್ಲಿ ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆ ನಡೆಯಲಿದೆ. ಇದಕ್ಕಾಗಿ ಹಲವು ಕಡೆಗಳಲ್ಲಿ ಗೋಪುರಗಳನ್ನು ನಿರ್ಮಾಣ ಮಾಡಲಾಗಿದೆ. ಗೊಲ್ಲರು ಮೊಸರು ತುಂಬಿದ ಮಡಿಕೆಗಳನ್ನು ಒಡೆಯುವುದನ್ನು ವೀಕ್ಷಿಸುವುದು ಬಲು ಸೊಗಸು.

ಲಕ್ಷ ಉಂಡೆ ಚಕ್ಕುಲಿ ತಯಾರಿ:ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ಚಕ್ಕುಲಿ ಹಾಗೂ ಉಂಡೆಗಳನ್ನು ತಲಾ ಲಕ್ಷ ಸಂಖ್ಯೆಯಲ್ಲಿ ತಯಾರಿಸಲಾಗಿದೆ. ಚಕ್ಕುಲಿ ಹಾಗೂ ಉಂಡೆಗಳನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.