ADVERTISEMENT

ಗೀತೆಯ ಸಂದೇಶ ಸಮಾಜಕ್ಕೆ ದಾರಿದೀಪ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್

ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವಕ್ಕೆ ರಾಜ್ಯಪಾಲರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 18:34 IST
Last Updated 25 ಜುಲೈ 2025, 18:34 IST
ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಮಡಿಕೆ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಮಡಿಕೆ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು   

ಉಡುಪಿ: ‘ಸಮಾಜದಲ್ಲಿ ಅಸಹಿಷ್ಣುತೆ, ಆತ್ಮವಿಸ್ಮೃತಿಯ ಭಾವನೆ ಹೆಚ್ಚಾಗುತ್ತಿದ್ದು, ಇದರಿಂದ ಹೊರಬರಲು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ನೀಡಿರುವ ಸಂದೇಶ ನಮಗೆ ದಾರಿದೀಪವಾಗಿದೆ’ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.

ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಹಮ್ಮಿಕೊಂಡಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ರಾಜಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಯೋಗ, ಧ್ಯಾನಯೋಗ, ಭಕ್ತಿಯೋಗ ಮಾಧ್ಯಮದ ಮೂಲಕ ಶ್ರೀಕೃಷ್ಣನು ನಮಗೆ ನಿಷ್ಕಾಮ ಭಾವದಿಂದ ಕರ್ತವ್ಯ ನಿರ್ವಹಿಸುವಂತೆ ಸಂದೇಶ ನೀಡಿದ್ದಾನೆ ಎಂದರು.

ADVERTISEMENT

ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ಸನಾತನ ಧರ್ಮದ ಪ್ರಚಾರ ಮಾಡುತ್ತ ವಿಶ್ವವನ್ನು ಭಾರತೀಯ ಸಂಸ್ಕೃತಿಯೊಂದಿಗೆ ಜೋಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ‘ಸಂಸ್ಕೃತವು ಇಂಗ್ಲಿಷ್‌ ಸೇರಿದಂತೆ ಸರ್ವ ಭಾಷೆಗಳ ಮೂಲ ಭಾಷೆಯಾಗಿದೆ. ಕನ್ನಡವು ರಾಜ್ಯ ಭಾಷೆಯಾದರೆ, ಹಿಂದಿ ರಾಷ್ಟ್ರ ಭಾಷೆಯಾಗಿದೆ. ಇಂಗ್ಲಿಷ್‌ ಅಂತರರಾಷ್ಟ್ರೀಯ ಭಾಷೆಯಾಗಿದೆ. ಉತ್ತರ ಭಾರತವು ದೇವರ ನಾಡಾದರೆ, ದಕ್ಷಿಣ ಭಾರತವು ಭಕ್ತರ ನಾಡಾಗಿದೆ’ ಎಂದರು.

ಪುತ್ತಿಗೆ ಪರ್ಯಾಯ ಮಠದ ಕಿರಿಯ ಯತಿ ಸುಶ್ರೀಂದ್ರತೀರ್ಥ ಸ್ವಾಮೀಜಿ, ಶಾಸಕ ಯಶ್‌ಪಾಲ್ ಸುವರ್ಣ, ಮಣಿಪಾಲದ ಮಾಹೆಯ ಸಹ ಕುಲಾಧಿಪತಿ ಎಚ್.ಎಸ್. ಬಲ್ಲಾಳ್, ಉದ್ಯಮಿ ಬಾಳೆಕುದ್ರು ರಾಮಚಂದ್ರ ಉಪಾಧ್ಯಾಯ, ಉದ್ಯಮಿ ರಾಘವೇಂದ್ರ ರಾವ್ ಉಪಸ್ಥಿತರಿದ್ದರು. ಬಿ. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಾದ್ಯಮೇಳಗಳೊಂದಿಗೆ ರಾಜ್ಯಪಾಲರಿಗೆ ಸ್ವಾಗತ ಮಹಿಳೆಯರಿಂದ ಭಜನಾ ಕಾರ್ಯಕ್ರಮ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.