ADVERTISEMENT

ಉಡುಪಿ| ಕೃಷ್ಣಮಠಕ್ಕೆ ಭಕ್ತರ ದಂಡು: ಉತ್ಸವಕ್ಕೆ ಮೆರುಗು ತಂದ ಮುದ್ದು ಕೃಷ್ಣರು

ರಥಬೀದಿಯಲ್ಲಿ ಗಮನ ಸೆಳೆದ ವೇಷಧಾರಿಗಳು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 4:41 IST
Last Updated 15 ಸೆಪ್ಟೆಂಬರ್ 2025, 4:41 IST
ಉಡುಪಿಯ ಕೃಷ್ಣ ಮಠದ ರಥಬೀದಿಯಲ್ಲಿ ಭಾನುವಾರ ಉತ್ಸವದ ಕಳೆ ಮೂಡಿತ್ತು
ಉಡುಪಿಯ ಕೃಷ್ಣ ಮಠದ ರಥಬೀದಿಯಲ್ಲಿ ಭಾನುವಾರ ಉತ್ಸವದ ಕಳೆ ಮೂಡಿತ್ತು   

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಉಡುಪಿಯಲ್ಲಿ ಭಾನುವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಉಡುಪಿಯ ಕೃಷ್ಣ ಮಠಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿದರು.

ಉಡಪಿಯಲ್ಲಿ ಸೌರ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿದ್ದು, ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಮೇಳೈಸಿದ್ದವು.

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಭಕ್ತರು ಬೆಳಗ್ಗಿನಿಂದಲೇ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು, ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ರಥ‌ಬೀದಿ ಹಾಗೂ ಕೃಷ್ಣಮಠವನ್ನು ಹೂವು, ವಿದ್ಯುತ್‌ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ADVERTISEMENT

ಪರ್ಯಾಯ ಪುತ್ತಿಗೆ ಮಠದ ಸುಶ್ರೀಂದ್ರತೀರ್ಥ ಸ್ವಾಮೀಜಿ ಕೃಷ್ಣನಿಗೆ ಬಾಲಗೋಪಾಲ ಅಲಂಕಾರ‌ ಮಾಡಿದ್ದರು. ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ದೇವರಿಗೆ ಮಹಾಪೂಜೆ ನಡೆಸಿದರು.

ರಥಬೀದಿಯುದ್ಧಕ್ಕೂ ಹೂವು, ಆಟಿಕೆ ಸಾಮಗ್ರಿಗಳ ಮಾರಾಟ ಗರಿಗೆದರಿತ್ತು, ಹುಲಿವೇಷ ಸೇರಿದಂತೆ ವಿವಿಧ ವೇಷಧಾರಿಗಳು ಪ್ರದರ್ಶನ ನೀಡುವ ಮೂಲಕ ಜನರ ಗಮನ ಸೆಳೆದರು.

ಜನ್ಮಾಷ್ಟಮಿ ಅಂಗವಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ‘ಸ್ವಾಮಿ ಶ್ರೀ ಕೃಷ್ಣಾಯ ನಮಃ’ 1008 ಬಾರಿ ಮಂತ್ರ ಪಠಣ ಕಾರ್ಯಕ್ರಮಕ್ಕೆ ಸುಗುಣೇಂದ್ರ ತೀರ್ಥ ಶ್ರೀಪಾದರು ಚಾಲನೆ ನೀಡಿದರು.

ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಹಾಗೂ ಪತಂಜಲಿ ಜಿಲ್ಲಾ ಪ್ರಭಾರಿಗಳಾದ ಕೆ. ರಾಘವೇಂದ್ರ ಭಟ್, ವೆಂಕಟೇಶ ಮೆಹಂದಳೆ, ಜಗದೀಶ್ ಕುಮಾರ್, ಲೀಲಾ ಆರ್.ಅಮೀನ್ ಭಾಗಿಯಾದರು.

ಉಂಡೆ ತಯಾರಿ:

ಜನ್ಮಾಷ್ಟಮಿಯ ಪ್ರಯುಕ್ತ ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ ಪರ್ಯಾಯ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಲಾಡು ಕಟ್ಟುವ ಸಾಂಪ್ರದಾಯಿಕ ಕಾರ್ಯಕ್ರಮವೂ ನೆರವೇರಿತು.

ವಿಟ್ಲಪಿಂಡಿ ಉತ್ಸವಕ್ಕಾಗಿ ಬಾಣಸಿಗರು ಚಕ್ಕುಲಿ, ಉಂಡೆ ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಚಕ್ಕುಲಿ, ಉಂಡೆಗಳನ್ನು ಪಿಟ್ಲಪಿಂಡಿಯ ದಿವಸ ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ.

ಮಹಿಳಾ ಹುಲಿವೇಷಧಾರಿಗಳು ಉಡುಪಿ ನಗರದಲ್ಲಿ ಪ್ರದರ್ಶನ ನೀಡಿದರು
ಕೃಷ್ಣಮಠದ ರಾಜಾಂಗಣದಲ್ಲಿ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು
ಉಡುಪಿಯಲ್ಲಿ ಗಮನ ಸೆಳೆದ ಅಷ್ಟಮಿ ವೇಷ
ಉಡುಪಿಯ ಕೃಷ್ಣ ಮಠಕ್ಕೆ ಹೂವಿನಿಂದ ಅಲಂಕಾರ ಮಾಡಲಾಗಿತ್ತು

ಮೆರುಗು ನೀಡಿದ ಮುದ್ದು ಕೃಷ್ಣರು

ಜನ್ಮಾಷ್ಟಮಿ ಅಂಗವಾಗಿ ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಚಿಣ್ಣರಿಗೆ ಹಮ್ಮಿಕೊಂಡಿದ್ದ ಮುದ್ದು ಕೃಷ್ಣ ಸ್ಪರ್ಧೆಯು ಹಬ್ಬಕ್ಕೆ ಕಳೆ ತಂದುಕೊಟ್ಟಿತ್ತು. ಕೃಷ್ಣನ ವೇಷ ತೊಟ್ಟು ಕೊಳಲು ಮೊಸರಿನ ಗಡಿಗೆ ಹಿಡಿದು ಅತ್ತಿತ್ತ ಓಡಾಡುವ ಮಕ್ಕಳು ಜನರಿಗೆ ಮುದ ನೀಡಿದರು. ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕಿರಿಯ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರು ವೇದಿಕೆಗೆ ಬಂದು ಮಕ್ಕಳನ್ನು ಹರಸಿದರು.

ಇಂದು ವಿಟ್ಲಪಿಂಡಿ ಮಹೋತ್ಸವ

ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕೃಷ್ಣಮಠದಲ್ಲಿ ಇದೇ 15ರಂದು ವಿಟ್ಲಪಿಂಡಿ ಮಹೋತ್ಸವ ನೆರವೇರಲಿದೆ. ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಗೆ ಷೋಡಷೋಪಚಾರ ಪೂಜೆ ನೆರವೇರಿಸಿ ಮಧ್ಯಾಹ್ನ 3 ಗಂಟೆಯ ಬಳಿಕ ಮೃಣ್ಮಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ ರಥಬೀದಿಗೆ ತಂದು ಬಳಿಕ ಆ ಮೂರ್ತಿಯನ್ನು ಸ್ವರ್ಣ ರಥದಲ್ಲಿರಿಸಿ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಮೆರವಣಿಗೆಯ ಬಳಿಕ ಮಧ್ವ ಸರೋವರದಲ್ಲಿ ಮೃಣ್ಮಯ ಮೂರ್ತಿಯ ವಿಸರ್ಜನೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.