ADVERTISEMENT

ಪ್ರತ್ಯರ್ಪಣವೇ ಜಗತ್ತಿನ ಮೂಲ ತತ್ವ: ಸುಗುಣೇಂದ್ರ ತೀರ್ಥ ಸ್ವಾಮೀಜಿ

ಶ್ರೀಕೃಷ್ಣ ಮಠದಲ್ಲಿ ವೇಣು ,ಜ್ಞಾನ, ಸಾಂಸ್ಕೃತಿಕ ಮಂಡಲೋತ್ಸವಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:47 IST
Last Updated 2 ಆಗಸ್ಟ್ 2025, 6:47 IST
ಶ್ರೀಕೃಷ್ಣ ಮಠದಲ್ಲಿ ವೇಣು ,ಜ್ಞಾನ, ಸಾಂಸ್ಕೃತಿಕ ಮಂಡಲೋತ್ಸವಗಳಿಗೆ ಚಾಲನೆ ನೀಡಲಾಯಿತು
ಶ್ರೀಕೃಷ್ಣ ಮಠದಲ್ಲಿ ವೇಣು ,ಜ್ಞಾನ, ಸಾಂಸ್ಕೃತಿಕ ಮಂಡಲೋತ್ಸವಗಳಿಗೆ ಚಾಲನೆ ನೀಡಲಾಯಿತು   

ಉಡುಪಿ: ನಾವು ಯಾರಿಂದಲಾದರೂ ಏನನ್ನಾದರೂ ಪಡೆದರೆ ಅದನ್ನು ತಿರುಗಿ ಕೊಡಬೇಕು. ಸಮಾಜದಿಂದ ಪಡೆದದ್ದನ್ನು ಮತ್ತೆ ಪ್ರಜೆಗಳಿಗೆ ಕೊಡುವುದು ಸರ್ಕಾರದ ಕರ್ತವ್ಯ. ಸರ್ಕಾರದಿಂದ ಪಡೆದದ್ದನ್ನು ತೆರಗೆಯ ರೂಪದಲ್ಲಿ ಮತ್ತೆ ಕೊಡುವುದು ಪ್ರಜೆಗಳ ಕರ್ತವ್ಯ. ಹೀಗೆ ಪ್ರತ್ಯಾರ್ಪಣ ಜಗತ್ತಿನ ಮೂಲ ತತ್ವ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ ಪ್ರಯುಕ್ತ ಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ನಡೆದ ವೇಣು ಮಂಡಲೋತ್ಸವ, ಜ್ಞಾನ ಮಂಡಲೋತ್ಸವ ಹಾಗೂ ಸಾಂಸ್ಕೃತಿಕ ಮಂಡಲೋತ್ಸವಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತು ಕೃಷ್ಣನಿಂದ ಅನುಗ್ರಹವನ್ನು ಪಡೆದಿದೆ, ಆದ್ದರಿಂದ ಕೃಷ್ಣನಿಗೆ ನಮ್ಮ ಕೃತಜ್ಞತೆಯನ್ನು ಸಮರ್ಪಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ADVERTISEMENT

ಶ್ರೀಕೃಷ್ಣ, ಶ್ರೀರಾಮರ ಆದರ್ಶಗಳು ನಮ್ಮ ದೇಶದ ಸಾಂಸ್ಖೃತಿಕ ಮೌಲ್ಯಗಳ ತಿರುಳಾಗಿದೆ. ಆದ್ದರಿಂದಲೇ ಜಗತ್ತಿನಲ್ಲಿ ಭಾರತದ ಸಾಂಸ್ಕೃತಿಕತೆಗೆ ವಿಶೇಷ ಮಹತ್ವವಿದೆ ಎಂದು ಅಭಿಪ್ರಾಯಪಟ್ಟರು.

ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌, ಚಿಂತಕ ದಾಮೋದರ ಶರ್ಮ, ಅರವಿಂದ ಆಚಾರ್ಯ ಉಪಸ್ಥಿತರಿದ್ದರು.

ಶ್ರೀಕೃಷ್ಣ ಮಂತ್ರೋಪದೇಶ

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಪ್ರಯುಕ್ತ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ಶುಕ್ರವಾರ ಬೆಳಿಗ್ಗೆ ಶ್ರೀಕೃಷ್ಣ ಭಕ್ತರಿಗೆ ಸಾಮೂಹಿಕ ಶ್ರೀಕೃಷ್ಣ ಮಂತ್ರೋಪದೇಶ ನೀಡಿದರು. ಶ್ರೀಪಾದರ ಉಪದೇಶದ ನಂತರ ನೆರೆದಿದ್ದ ಭಕ್ತರು 108 ಬಾರಿ ಶ್ರೀ ಕೃಷ್ಣ ಮಂತ್ರ ಪಠಿಸಿದರು. ಅದಕ್ಕೂ ಮುನ್ನ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು ದೀಪ ಬೆಳಗುವುದರ ಮೂಲಕ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿವಿಧ ಯೋಗ ಸಂಸ್ಥೆಗಳ ಯೋಗಾರ್ಥಿಗಳು 48 ಸೂರ್ಯ ನಮಸ್ಕಾರ ಮಾಡಿದರು. ರಾಘವೇಂದ್ರ ಭಟ್ ಪಣಿಯಾಡಿ ಸ್ವಾಗತಿಸಿದರು. ವಿದ್ವಾನ್ ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಭಟ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.