ಕುಂದಾಪುರ: ಮೂರು ದಿನಗಳಿಂದ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗದ ಊರುಗಳಲ್ಲಿ ಬೀಡು ಬಿಟ್ಟಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವ ಅರಣ್ಯ ಇಲಾಖೆಯ ಪ್ರಯತ್ನಗಳು ಫಲ ನೀಡಿದ್ದು, ಗುರುವಾರ ಸಂಜೆ 6ಗಂಟೆಯ ವೇಳೆಗೆ ಸಿದ್ದಾಪುರ ಸಮೀಪದ ಹೆನ್ನಾಬೈಲಿನ ಉರಪಾಲ್ ಎಂಬಲ್ಲಿ ಇಲಾಖೆಯ ಅರಿವಳಿಕೆ ತಜ್ಞರು ನೀಡಿದ್ದ, ಅರಿವಳಿಕೆ ಮದ್ದಿಗೆ ಸ್ಪಂದಿಸಿದ ಆನೆ ವಿಶ್ರಾಂತಿಗಾಗಿ ಧರಶಾಹಿಯಾಗಿದೆ.
ಮಂಗಳವಾರ ಸಂಜೆಯ ಬಳಿಕ ಬಾಳೆಬರೆ-ಸಿದ್ದಾಪುರ ಮಾರ್ಗವಾಗಿ ಘಾಟಿಯಿಂದ ಕೆಳಕ್ಕೆ ಬಂದಿದ್ದ ಕಾಡಾನೆಯ ಚಲನವಲನಗಳನ್ನು ರೆಡಿಯೋ ಕಾಲರ್ ಹಾಗೂ ಜಿಪಿಎಸ್ ತಂತ್ರಜ್ಞಾನದ ಮೂಲಕ ಕ್ಷಣ ಕ್ಷಣಕ್ಕೂ ತಿಳಿದುಕೊಳ್ಳುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ, ಕಾಡಾನೆಯನ್ನು ಸೆರೆ ಹಿಡಿಯಲು ಕಾರ್ಯತಂತ್ರವನ್ನು ರೂಪಿಸಿ, ಸೂಕ್ತ ಸಮಯಾವಕಾಶಕ್ಕಾಗಿ ಕಾಯುತ್ತಿದ್ದರು.
ಶಿವಮೊಗ್ಗದ ಸಕ್ರೆಬೈಲಿನಿಂದ ಬಂದಿದ್ದ ಕಾರ್ಯಪಡೆಯ ಮಾರ್ಗದರ್ಶನದಲ್ಲಿ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿ ಆನೆಯನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆಗೆ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದರು.
ಗುರುವಾರ ಮಧ್ಯಾಹ್ನ ವೇಳೆಗೆ ಕಾರ್ಯಾಚರಣೆಗಾಗಿ ಮೂರು ವಾಹನಗಳ ಮೂಲಕ ಸಿದ್ದಾಪುರಕ್ಕೆ ತಂದಿದ್ದ ಬಾಲಣ್ಣ, ಸೋಮಣ್ಣ ಹಾಗೂ ಬಹದ್ದೂರು ಹೆಸರಿನ ಮೂರು ಪಳಗಿಸಿದ ಗಜಪಡೆಯ ಸವಾರಿ ನೋಡಲು ಸಿದ್ದಾಪುರ ಪೇಟೆ ಹಾಗೂ ಆಸುಪಾಸಿನಲ್ಲಿ ಸಾಕಷ್ಟು ಜನ ಸೇರಿದ್ದರು.
ಮಧ್ಯಾಹ್ನದ ನಂತರ ಕಾರ್ಯಾಚರಣೆಗೆ ವೇಗ: ಸಿದ್ದಾಪುರ ಪೇಟೆಯಿಂದ ಸುಮಾರು 1.2 ಕಿ.ಮೀ ದೂರದ ಹೆನ್ನಾಬೈಲು ಎಂಬಲ್ಲಿ ಆನೆ ಇರುವ ಮಾಹಿತಿ ಪಡೆದುಕೊಂಡಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ, ಆನೆಯ ನಡೆಯನ್ನು ಗಮನಿಸುತ್ತಿದ್ದರು.
ಮಂಗಳವಾರ ಹೆನ್ನಾಬೈಲಿಗೆ ಬಂದ ಬಳಿಕ ಆನೆ ದೂರ ಪ್ರಯಾಣ ಮಾಡಿರಲಿಲ್ಲ. ಬುಧವಾರ ರಾತ್ರಿಯೂ ಇಲ್ಲಿನ ಜಯ ಶೆಟ್ಟಿ ಎನ್ನುವವರ ತೋಟದ ಸಮೀಪದಲ್ಲಿ ಆನೆಯ ಇರುವಿಕೆ ಪತ್ತೆಯಾಗಿತ್ತು. ರಾತ್ರಿಯ ವೇಳೆ ಪರಿಸರದಲ್ಲಿ ಸಂಚಾರ ನಡೆಸಿದ್ದ ಆನೆಯ ನಡಿಗೆ ಮೊಬೈಲ್ ಹಾಗೂ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.
ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಲನ್ ಕಾರ್ಯಾಚರಣೆಯ ನೇತೃತ್ವದಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ಮುಂದಾದ ತಂಡ, ಮೊದಲಿಗೆ ಸಕ್ರೆಬೈಲಿನ ಎರಡು ಪಳಗಿದ ಆನೆಗಳನ್ನು ತಿರುಗಾಟಕ್ಕೆ ಬಿಟ್ಟು, ಹೆನ್ನಾಬೈಲಿನಿಂದ ಗೆದ್ದೋಡಿಗೆ ಸಾಗುವ ಮತ್ತಿಬೇರು ಎಂಬಲ್ಲಿ ಸಂಜೆಯ ವೇಳೆ ಆನೆಯ ಇರುವಿಕೆಯನ್ನು ಪತ್ತೆ ಮಾಡಿ, ಕಾರ್ಯಾಚರಣೆಗೆ ಇಳಿದಿದೆ.
ಸಿದ್ದಾಪುರದಿಂದ ಹೆನ್ನಾಬೈಲ್ ಮೂಲಕ ಗೆದ್ದೋಡಿಗೆ ಸಾಗುವ ದಾರಿಯನ್ನು ಸಾರ್ವಜನಿಕ ಪ್ರವೇಶ ನಿರ್ಬಂಧ ಮಾಡಿ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ರಾಜ್ಯ ಹೆದ್ದಾರಿಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಸಂಚಾರ ನಿರ್ಬಂಧಿಸಲಾಗಿತ್ತು. ಕಾರ್ಯಾಚರಣೆ ನಡೆಯುವ ಪರಿಸರದಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿತ್ತು.
ಸಂಜೆ ವೇಳೆಗೆ ಮತ್ತಿಬೇರು ಸಮೀಪದ ಉರಾಪಾಲ್ ಎಂಬಲ್ಲಿ ಆನೆಯ ಇರುವಿಕೆ ಪತ್ತೆ ಮಾಡಿದ್ದ ಶಿವಮೊಗ್ಗದ ಡಾ.ಎಸ್.ಕಲ್ಲಪ್ಪ, ನಾಗರಹೊಳೆಯ ಡಾ.ರಮೇಶ್ ಹಾಗೂ ಮಂಗಳೂರಿನ ಡಾ.ಯಶಸ್ವಿ ಅವರಿದ್ದ ವೈದ್ಯರ ತಂಡ ನೀಡಿದ್ದ ಅರಿವಳಿಕೆ ಮದ್ದಿಗೆ ಆನೆ ನಿದ್ರಾವಸ್ಥೆಗೆ ಜಾರಿದೆ.
ಆನೆಯ ಸಾಮಾನ್ಯ ತೂಕವನ್ನು ಗಮನಿಸಿ ಅರಿವಳಿಕೆ ಔಷಧ ನೀಡುವ ಕ್ರಮವಿದ್ದು, ಇಲ್ಲಿ ಎಟಾರ್ಫಿನ್ ಔಷಧಿಯನ್ನು 1.2 ಎಂ.ಎಲ್‌ನಷ್ಟು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಔಷಧಿ ನೀಡಿದ 20 ನಿಮಿಷದ ನಂತರ ಆನೆ ನಿದ್ರಾವಸ್ಥೆಗೆ ತಲುಪಿದೆ.
ಸಂಜೆ 7.30ರ ಸುಮಾರಿಗೆ ಹೆಚ್ಚುವರಿಯಾಗಿ ನಾಗರಹೊಳೆ ಮತ್ತಿಗೋಡು ಅರಣ್ಯ ವಲಯದಿಂದ ಭೀಮ, ಮಹೇಂದ್ರ ಹಾಗೂ ಏಕಲವ್ಯ ಎನ್ನುವ ಹೆಸರಿನ ಮೂರು ಪಳಗಿದ ಆನೆಗಳನ್ನು ಕಾರ್ಯಾಚರಣೆಗೆ ಕರೆಸಲಾಗಿತ್ತು. ಭೀಮನ ನೇತೃತ್ವದಲ್ಲಿ ನಾಲ್ಕು ಆನೆಗಳ ತಂಡ ಹಾಗೂ ಕ್ರೇನ್ ಸಹಾಯದಿಂದ ಕಾಡಾನೆಯನ್ನು ಎತ್ತಿ ವಾಹನಕ್ಕೆ ಹಾಕುವ ಕಾರ್ಯಾಚರಣೆ ಮುಂದುವರೆಸಲಾಗಿದೆ. ಆನೆಯನ್ನು ಸಕ್ರೆಬೈಲಿನ ಆನೆ ಬಿಡಾರಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ.
ಕುದುರೆಮುಖ ಅರಣ್ಯ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು, ಕುಂದಾಪುರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಕಾಶ್ ಪೂಜಾರಿ, ದಿನೇಶ್, ಸಕ್ರೆಬೈಲು ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ವಿನಯ್ ಜಿ.ಆರ್., ಶಂಕರನಾರಾಯಣ ವಲಯಾರಣ್ಯಾಧಿಕಾರಿ ಜಿ.ವಿ.ನಾಯಕ್, ಜ್ಯೋತಿ, ಶಂಕರನಾರಾಯಣ ಪೊಲೀಸ್ ಠಾಣೆಯ ಎಸ್‌ಐ ನಾಸೀರ್ ಹುಸೇನ್ ಇದ್ದರು.
ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರಿನಿಂದ ಬಂದಿದ್ದ ಎಟಿಎಫ್ ತಂಡದ ಸೇವೆಯನ್ನು ಬಳಸಿಕೊಳ್ಳಲಾಗಿತ್ತು. ಹಾಸನದಿಂದ ಅರಣ್ಯ ವಿಭಾಗದಿಂದ ಔಷಧಿಗಳನ್ನು ತರಿಸಿಕೊಳ್ಳಲಾಗಿತ್ತು. ಕಾರ್ಯಾಚರಣೆಯಲ್ಲಿ ಸುಮಾರು 150 ಸಿಬ್ಬಂದಿ ಭಾಗಿಯಾಗಿದ್ದರು.
ಸಿಸಿಎಫ್ ನೇತೃತ್ವದಲ್ಲಿ ಕಾರ್ಯಾಚರಣೆ
ಅನೆಯ ವೀಕ್ಷಣೆಗೆ ಜನಸಾಗರ
6 ಅನೆಗಳ ಸಹಾಯದಿಂದ ಕಾರ್ಯಾಚರಣೆ
ದೊಡ್ಡ ಗುಂಪಿನ ಜೊತೆ ಸೇರಿಕೊಂಡಿದ್ದ ಗಂಡಾನೆ ಯಾವುದೋ ಗಲಾಟೆಯಿಂದ ಗುಂಪಿನಿಂದ ಬೇರೆಯಾಗಿದೆ. ಕತ್ತಲೆಯಾಗುವ ಮೊದಲೇ ಅರಿವಳಿಕೆ ಮದ್ದು ನೀಡಲಾಗಿದೆ. 6 ಅನೆಗಳ ಸಹಾಯದಿಂದ ರಕ್ಷಣಾ ಕಾರ್ಯ ನಡೆಯಲಿದೆಕರಿಕಾಲನ್, ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ
ಗುರುವಾರವೂ ಶಾಲೆಗಳಿಗೆ ರಜೆ
ಅರಣ್ಯ ಇಲಾಖೆಯ ಮನವಿಗೆ ಸ್ಪಂದಿಸಿ ಹೊಸಂಗಡಿ ಸಿದ್ದಾಪುರ ಹಾಗೂ ಕಮಲಶಿಲೆ ಭಾಗದ ಅಂಗನವಾಡಿ ಕೇಂದ್ರ ಹಾಗೂ ಎಸ್‌ಎಸ್‌ಎಲ್‌ಸಿವರೆಗಿನ ಶಾಲೆಗಳಿಗೆ ಬುಧವಾರ ಹಾಗೂ ಗುರುವಾರ ರಜೆ ನೀಡಲಾಗಿತ್ತು. ಸಿದ್ದಾಪುರದಲ್ಲಿ ಬುಧವಾರ ವಾರದ ಸಂತೆಯನ್ನು ರದ್ದು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.