ಕುಂದಾಪುರ: ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 21 ವರ್ಷಗಳ ಹಿಂದೆ ನಡೆದಿದ್ದ ಅಪರಾಧ ಪ್ರಕರಣವೊಂದರ ಆರೋಪಿಯನ್ನು ಅಮಾಸೆಬೈಲು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2004ರ ಡಿಸೆಂಬರ್ 25ರಂದು ಶೌಕತ್ ಅಲಿ ಎಂಬುವರು ನೀಡಿದ ದೂರಿನಂತೆ ಅಂದಿನ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ನಿವಾಸಿ ಫಾರೂಕ್ ಎಂಬುವವನನ್ನು ಆರೋಪಿಯನ್ನಾಗಿ ಹೆಸರಿಸಲಾಗಿತ್ತು. 2004 ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ಈತ ತಲೆಮರೆಸಿಕೊಂಡಿದ್ದು, ಈತನ ವಿರುದ್ದ ಎಲ್.ಪಿ.ಸಿ. ವಾರಂಟ್ ಹೊರಡಿಸಲಾಗಿತ್ತು.
ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಲು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ಎಸ್. ನಾಯ್ಕ ಅವರ ಮಾರ್ಗದರ್ಶನದಲ್ಲಿ, ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಹೆಚ್.ಡಿ.ಕುಲಕರ್ಣಿ ಹಾಗೂ ಕುಂದಾಪುರ ಗ್ರಾಮಾಂತರ ಪೊಲೀಸ್ ವೃತ್ತದ ಸಿಪಿಐ ಜಯರಾಮ್ ಗೌಡ ಅವರ ನಿರ್ದೇಶನದಂತೆ, ಅಮಾಸೆಬೈಲು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಅಶೋಕ್ ಕುಮಾರ್ ಹಾಗೂ ಚಂದ್ರ ಎ.ಕೆ ಅವರ ನೇತೃತ್ವದ ತಂಡ ಆರೋಪಿಯನ್ನು ರಾಮನಗರ ಜಿಲ್ಲೆ ಮಾಗಡಿಯಲ್ಲಿ ಬಂಧಿಸಿದೆ.
ಕಾರ್ಯಾಚಣೆಯಲ್ಲಿ ಅಮಾಸೆಬೈಲು ಪೊಲೀಸ್ ಠಾಣೆಯ ಸಿಬ್ಬಂದಿ ರಾಘವೇಂದ್ರ, ಪರಮೇಶಪ್ಪ ಹೆಬಸೂರು, ಸುಧಾಕರ್ ಪಿಸಿ, ದರ್ಶನ್, ಮಲ್ಲೇಶ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ದಿನೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.