
ಕುಂದಾಪುರ (ಉಡುಪಿ): ನಗರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ರಥಬೀದಿಯ ಕಟ್ಟಡವೊಂದರಲ್ಲಿ ಭಾನುವಾರ ಮಧ್ಯರಾತ್ರಿ ಅಗ್ನಿ ಅನಾಹುತ ಸಂಭವಿಸಿ, ಹಲವು ಅಂಗಡಿಗಳು ಭಸ್ಮವಾಗಿವೆ.
ರಥಬೀದಿಯಲ್ಲಿನ ಪೂಜಾ ಸಾಮಗ್ರಿ ಹಾಗೂ ಡ್ರೈ ಫ್ರೂಟ್ಸ್ ಮಾರಾಟ ಮಾಡುತ್ತಿದ್ದ ಅಂಗಡಿ, ಪುಸ್ತಕದ ಅಂಗಡಿ, ಪಟಾಕಿ ಅಂಗಡಿ ಹಾಗೂ ಎಲೆಕ್ಟ್ರಾನಿಕ್ಸ್ ಅಂಗಡಿಗಳು ಉರಿದು ಭಸ್ಮವಾಗಿವೆ. ಕೆಲವು ಅಂಗಡಿಗಳಿಗೆ ಭಾಗಶಃ ಹಾನಿಯಾಗಿದೆ.
ಅಂಗಡಿಯೊಂದರಲ್ಲಿ ಅಗ್ನಿ ಅಕಸ್ಮಿಕ ಸಂಭವಿಸಿ, ಬೆಂಕಿಯು ಉಳಿದ ಅಂಗಡಿಗಳಿಗೂ ವ್ಯಾಪಿಸಿರಬಹುದು ಎಂದು ಮೂಲಗಳು ತಿಳಿಸಿವೆ. ಸೋಮವಾರ ಮಧ್ಯಾಹ್ನದವರೆಗೂ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಅಗ್ನಿ ಅನಾಹುತ ಪರಿಣಾಮವಾಗಿ ಅಂಗಡಿಯೊಂದರಲ್ಲಿ ಸಂಗ್ರಹಿಸಿದ್ದ ಪಟಾಕಿಗಳು ಹೊತ್ತಿ ಉರಿದು ರಾತ್ರಿಯಿಡೀ ಪಟಾಕಿ ಸದ್ದು ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಂಗಡಿಗಳಲ್ಲಿ ತುಪ್ಪ, ಮರದ ವಸ್ತು, ಪುಸ್ತಕ, ಕರ್ಪೂರ, ಡ್ರೈ ಫ್ರೂಟ್ಸ್ ಹಾಗೂ ಪಟಾಕಿ ಇದ್ದು, ಬೆಂಕಿಯ ಸ್ಪರ್ಶಕ್ಕೆ ಅವು ಸ್ಪೋಟಿಸಿವೆ. ಆದ್ದರಿಂದ ಗಾಢ ನಿದ್ರೆಯಲ್ಲಿದ್ದ ಪೇಟೆಯ ನಿವಾಸಿಗಳು ಶಬ್ದಕ್ಕೆ ಎಚ್ಚರವಾಗಿದ್ದರೂ, ಕಾರ್ಯಕ್ರಮದ ಅಂಗವಾಗಿ ಯಾರೋ ಸುಡುಮದ್ದು ಸುಡುತ್ತಿದ್ದಾರೆ ಎಂದು ಸುಮ್ಮನಾಗಿದ್ದರು.
ಪೂಜಾ ವಸ್ತು ಹಾಗೂ ಡ್ರೈ ಫ್ರೂಟ್ಸ್ ಮಾರಾಟ ಮಾಡುತ್ತಿದ್ದ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಪೂಜಾ ವಸ್ತು, ದಿನಸಿ ಹಾಗೂ ಕಟ್ಲೇರೆ ವಸ್ತು ಮಾರಾಟ ಮಾಡುತ್ತಿದ್ದ ಬಾಲಾಜಿ ಹೆಸರಿನ ಅಂಗಡಿಗೆ ಭಾಗಶಃ ಹಾನಿಯಾಗಿದೆ. ಉಳಿದ ಮೂರು ಅಂಗಡಿಗಳು ಬಹುತೇಕ ಅಗ್ನಿಯ ಕೆನ್ನಾಲಿಗೆಗೆ ಹೊತ್ತಿ ಉರಿದಿದೆ. ಅವಘಡದಿಂದ ಒಟ್ಟು ₹3 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಹೊತ್ತಿ ಉರಿದ ಅಂಗಡಿಗಳ ಸಾಲಿನಲ್ಲಿ ಇದ್ದ ಪಟಾಕಿ ಅಂಗಡಿಯ ಸಂಗ್ರಹದ ಒಂದಷ್ಟು ಪಟಾಕಿಗಳು ಸುಟ್ಟು ಭಸ್ಮವಾಗಿದೆ. ಗೋದಾಮಿನಲ್ಲಿ ಇದ್ದ ದೊಡ್ಡ ಸಂಗ್ರಹಕ್ಕೆ ಬೆಂಕಿ ತಗುಲಿದ ಕಾರಣ ದೊಡ್ಡ ದುರಂತ ತಪ್ಪಿದೆ. ಅಗ್ನಿ ಹೊತ್ತಿ ಉರಿಯಲು ಕಾರಣವಾದ ಅಂಶಗಳ ಕುರಿತು ತನಿಖೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.
ರಾತ್ರಿ ಸುಮಾರು 3 ಗಂಟೆ ವೇಳೆ ದಾರಿಹೋಕರು ಅಂಗಡಿಯ ಮಾಡಿನಲ್ಲಿ ಬೆಂಕಿ ಉರಿಯುತ್ತಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಕುಂದಾಪುರ ಘಟಕದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಪರಿಸ್ಥಿತಿ ಕೈಮೀರಿದಾಗ ಬೈಂದೂರು, ಉಡುಪಿಯಿಂದ ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಕರೆಯಿಸಿಕೊಂಡು ಕಾರ್ಯಾಚರಣೆ ಮುಂದುವರೆಸಲಾಗಿತ್ತು.
ಘಟನಾ ಸ್ಥಳಕ್ಕೆ ಶಾಸಕ ಎ. ಕಿರಣ್ ಕುಮಾರ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್, ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಪೊಲೀಸ್ ನಿರೀಕ್ಷಕ ಜಯರಾಂ ಗೌಡ ಭೇಟಿ ನೀಡಿದ್ದಾರೆ.
ಭಾನುವಾರ ಮಧ್ಯರಾತ್ರಿ ಸಂಭವಿಸಿದ ಅನಾಹುತ ರಾತ್ರಿ 3 ಗಂಟೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ದಾರಿಹೋಕರು
ಪಟಾಕಿ ಅಂಗಡಿಯ ಪರವಾನಗಿಯನ್ನು ಈ ತಿಂಗಳ 16ರಂದೇ ರದ್ದುಪಡಿಸಲಾಗಿದ್ದು ಅಕ್ರಮ ಸಂಗ್ರಹದ ಬಗ್ಗೆ ಅಂಗಡಿಯವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು
-ಹರಿರಾಂ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.