ಕುಂದಾಪುರ: ಗೃಹಲಕ್ಷ್ಮಿ ಅನುದಾನ ಜೂನ್ ತಿಂಗಳಲ್ಲಿ ಬಿಡುಗಡೆ ಆಗಿಲ್ಲ. ಉಳಿದ ಗ್ಯಾರಂಟಿ ಯೋಜನೆಗಳ ₹9.75 ಕೋಟಿ ಅನುದಾನ ಬಿಡುಗಡೆ ಆಗಿದೆ’ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್– 19 ಸಂದರ್ಭದಲ್ಲಿ ನಿಲ್ಲಿಸಲಾಗಿದ್ದ ಸರ್ಕಾರಿ ಬಸ್‌ಗಳ ಪಟ್ಟಿ ನೀಡುವಂತೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ ಸೂಚಿಸಿದರು. ಅವರಿಗೆ ಉತ್ತರಿಸಿದ ಕೆಎಸ್‌ಆರ್‌ಟಿಸಿ ಸಹಾಯಕ ಸಂಚಾರ ನಿಯಂತ್ರಕ ಬಿ.ಟಿ.ನಾಯ್ಕ್ ಅವರು, ತೊಂಬೊಟ್ಟು ಬಸ್ ಪುನರಾರಂಭ ಮಾಡುವುದರೊಂದಿಗೆ ಕೋವಿಡ್ ಸಂದರ್ಭ ನಿಲ್ಲಿಸಲಾಗಿದ್ದ ಎಲ್ಲ ಬಸ್‌ಗಳೂ ಸಂಚಾರ ಆರಂಭಿಸಿದಂತಾಗಿದೆ ಎಂದರು. ಗಂಗೊಳ್ಳಿಯಲ್ಲಿ ಬಸ್ ಸಮಸ್ಯೆ ನಿವಾರಿಸಿ, ಗಂಗೊಳ್ಳಿ– ಬೈಂದೂರು ಬಸ್ ಆರಂಭಿಸಿ ಎಂದು ಝಹೀರ್ ಅಹಮದ್ ಒತ್ತಾಯಿಸಿದರು. ಹೇರಿಕುದ್ರುವಿನಲ್ಲಿ ಇನ್ನೂ ಬಸ್‌ಗಳ ನಿಲುಗಡೆಯಾಗುತ್ತಿಲ್ಲ ಎಂದು ಅಭಿಜಿತ್ ಪೂಜಾರಿ ತಿಳಿಸಿದರು.
ಮೈಸೂರು- ಕೊಲ್ಲೂರು ಬಸ್ ಪುನರಾರಂಭಕ್ಕೆ ಪ್ರಯತ್ನ ಮುಂದುವರಿಸಬೇಕು ಎಂದು ಹೇಳಿದ ಅಧ್ಯಕ್ಷರು, ಶಾಸ್ತ್ರಿ ಸರ್ಕಲ್‌ನಿಂದ ಉಡುಪಿ ಕಡೆಗೆ ಹೋಗುವವರಿಗೆ ಅನುಕೂಲವಾಗುವಂತೆ ಸೂಕ್ತ ಸ್ಥಳದಲ್ಲಿ ಸರ್ಕಾರಿ ಬಸ್ ನಿಲುಗಡೆಗೆ ಫಲಕ ಅಳವಡಿಸುವಂತೆ ಸೂಚಿಸಿದರು. ಮುದೂರು, ಕೆರಾಡಿ, ಹಕ್ಲಾಡಿಗೆ ಬಸ್ ಬೇಕು ಎಂದು ಬೇಡಿಕೆ ವ್ಯಕ್ತವಾಯಿತು.
ಕೊಲ್ಲೂರಿನ ಬಸ್ ನಿಲ್ದಾಣದಲ್ಲಿ ನಿಲುಗಡೆಗೆ ಕೆಎಸ್‌ಆರ್‌ಟಿಸಿ ಬಸ್‌ಗೂ ಹಣ ವಸೂಲಿ ಮಾಡಲಾಗುತ್ತಿದ್ದು, ನಿರ್ವಾಹಕರ ಕೈಯಿಂದ ಹಣ ನೀಡಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಈ ಕುರಿತು ದೇವಸ್ಥಾನ ಸಮಿತಿಗೆ ಪತ್ರ ಬರೆದು, ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಯೊಂದಿಗೆ ಮಾತನಾಡಿ ವಿನಾಯಿತಿ ನೀಡಲು ಮನವಿ ಮಾಡಲಾಗಿತ್ತು ಎಂದು ಅಧ್ಯಕ್ಷರು ಹೇಳಿದರು.
ಸಾರಿಗೆ ಇಲಾಖೆಯಿಂದ ಮಾಹಿತಿ ಪಡೆದುಕೊಂಡ ಬಳಿಕವೇ ಪಡಿತರ ಚೀಟಿ ರದ್ದತಿ ಪ್ರಕ್ರಿಯೆ ನಡೆಯುತ್ತದೆ. ದುಬಾರಿ ಬೆಲೆಯ ಕಾರುಗಳಿದ್ದ 370 ಮಂದಿಯ ಬಿಪಿಎಲ್ ಚೀಟಿ ರದ್ದಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಯುವನಿಧಿ ಯೋಜನೆ ಪ್ರಚಾರಕ್ಕೆ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸುವ ಕುರಿತು ಚರ್ಚಿಸಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು, ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.