
ಕುಂದಾಪುರ: ಮುಂಬರುವ ಮಾರ್ಚ್ ಒಳಗೆ ಮರವಂತೆ ಮೀನುಗಾರಿಕಾ ಹೊರ ಬಂದರಿನಲ್ಲಿ ₹15 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ 2ನೇ ಹಂತದ ಕಾಮಗಾರಿ ಪ್ರಗತಿ ಆಗಬೇಕು ಎಂದು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಸೋಮವಾರ ಮರವಂತೆ ಹೊರಬಂದರಿನ 2ನೇ ಹಂತದ ಕಾಮಗಾರಿ, ತ್ರಾಸಿ ಬೀಚ್ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಬಿಜೆಪಿ ಸರ್ಕಾರವಿದ್ದಾಗ ₹45 ಕೋಟಿ ವೆಚ್ಚದಲ್ಲಿ ಮರವಂತೆ ಹೊರ ಬಂದರಿನ ಮೊದಲ ಹಂತದ ಕಾಮಗಾರಿ ನಡೆದಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2ನೇ ಹಂತದ ಕಾಮಗಾರಿಗೆ ₹85 ಕೋಟಿ ಅನುದಾನ ಘೋಷಿಸಿದ್ದರು ಎಂದರು.
ತ್ರಾಸಿ ಬೀಚ್‌ನಲ್ಲಿ ₹9.95 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಸಂಸದರು, ಹಳೆ ಪ್ರವಾಸಿ ಬಂಗಲೆ ಬಳಿ ನಿರ್ಮಾಣವಾಗುತ್ತಿರುವ ರೆಸ್ಟೋರೆಂಟ್ ಕಾಮಗಾರಿ ಬಗ್ಗೆ ಗರಂ ಆದರು. ಇಲ್ಲಿ ಉಪ್ಪು ನೀರಿನ ಪ್ರಭಾವ ಜಾಸ್ತಿಯಿದ್ದು, ಕಳಪೆ ಸಾಮಗ್ರಿಗಳನ್ನು ಬಳಸಿದ್ದೀರಿ ಎಂದು ಆಕ್ಷೇಪಿಸಿದರು. ಗುಣಮಟ್ಟದ ಪೀಠೋಪಕರಣಗಳನ್ನು ಬಳಸುವಂತೆ ಸೂಚಿಸಿದರು. ಬಾಕಿ ಇರುವ ಅನುದಾನವನ್ನು ಶೀಘ್ರ ಮಂಜೂರು ಮಾಡಿಸುವುದಾಗಿ ತಿಳಿಸಿದರು.
ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುವುದರಿಂದ, ಸಿಆರ್‌ಜಡ್ ಅನುಮತಿ ಬಾಕಿ ಇರುವ ಕಾಮಗಾರಿಯನ್ನು ಬಿಟ್ಟು, ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದರು. ಸಾರ್ವಜನಿಕರಿಗೆ ಕುಳಿತುಕೊಳ್ಳಲು ಶೆಲ್ಟರ್ ವ್ಯವಸ್ಥೆ ಇಲ್ಲದಿರುವುದರಿಂದ, ಅದನ್ನು ಕೂಡ ಕಾಮಗಾರಿಯಲ್ಲಿ ಸೇರಿಸಿಕೊಳ್ಳಲು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ತ್ರಾಸಿ ಬಸ್ ನಿಲ್ದಾಣ ಉದ್ಘಾಟನೆ: ಸಂಸದರ ಪ್ರದೇಶಾಭಿವೃದ್ಧಿ ಅನುದಾನದಡಿ ತ್ರಾಸಿ ಬೀಚ್ ಬಳಿ ನಿರ್ಮಾಣವಾದ ನೂತನ ಬಸ್ ನಿಲ್ದಾಣವನ್ನು ಸಂಸದ ಉದ್ಘಾಟಿಸಿದರು. ತ್ರಾಸಿ ಜಂಕ್ಷನ್ ಅಭಿವೃದ್ಧಿ, ಫ್ಲೈಓವರ್ ನಿರ್ಮಾಣಕ್ಕೆ ₹20 ಕೋಟಿ ಮಂಜೂರಾಗಿದೆ ಎಂದು ತಿಳಿಸಿದರು. ಇಲ್ಲಿ ಬಸ್ ನಿಲುಗಡೆಗೆ ಮನವಿ ಮಾಡಿದ ಸ್ಥಳೀಯರಿಗೆ ಸ್ಪಂದಿಸಿದ ಅವರು, ಸಂಬಂಧಪಟ್ಟವರಲ್ಲಿ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶಾಸಕ ಗುರುರಾಜ್ ಗಂಟಿಹೊಳೆ, ಹೆದ್ದಾರಿ ಪ್ರಾಧಿಕಾರದ ಹೊನ್ನಾವರ ವಿಭಾಗದ ಯೋಜನಾ ನಿರ್ದೇಶಕ ಶಿವಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಉಪಾಧ್ಯಕ್ಷ ಸುರೇಶ್ ಬಟವಾಡಿ, ತ್ರಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ, ಪ್ರಮುಖರಾದ ಶರತ್ ಶೆಟ್ಟಿ ಉಪ್ಪುಂದ, ಕರಣ್ ಪೂಜಾರಿ ತಲ್ಲೂರು, ದೀಪಕ್ ಕುಮಾರ್ ಶೆಟ್ಟಿ ನೆಲ್ಯಾಡಿ, ಗೋಪಾಲ್ ವಸ್ರೆ, ರವೀಂದ್ರ ಖಾರ್ವಿ, ರವಿ ಶೆಟ್ಟಿಗಾರ್, ಅಂಥೋನಿ ಡಿಸೋಜ, ಪಾಂಡುರಂಗ ದೇವಾಡಿಗ, ಪ್ರವಾಸೋದ್ಯಮ ಇಲಾಖೆಯ ಮುತ್ತುರಾಜ್, ಗುತ್ತಿಗೆದಾರ ಅರ್ಜುನ್ ಹೆಗ್ಡೆ, ಮೀನುಗಾರಿಕೆ ಮತ್ತು ಬಂದರು ಇಲಾಖೆ ಅಧಿಕಾರಿಗಳು, ಮೀನುಗಾರ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.