
ಕುಂದಾಪುರ: ‘ತಂತ್ರಜ್ಞಾನ, ಆಧುನಿಕತೆ ಬದಲಾವಣೆಯೊಂದಿಗೆ ಜಗತ್ತು ಬೆಳೆಯುತ್ತಿದ್ದರೂ, ಸನಾತನ ಧರ್ಮ, ಪರಂಪರೆ, ಭಕ್ತಿ ಮಾರ್ಗ, ಧಾರ್ಮಿಕ ನಂಬಿಕೆಗಳಲ್ಲಿ ಬದಲಾವಣೆ ಆಗದೇ ಇರುವುದೇ ನಿಜವಾದ ಧಾರ್ಮಿಕ ಶ್ರದ್ಧೆ’ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ ಮತ್ತು ಕುಟುಂಬದವರು ಸೇವಾರ್ಥವಾಗಿ ದೇವಳಕ್ಕೆ ನೀಡಿದ ನೂತನ ಶಿಲಾಮಯ ಓಲಗ ಮಂಟಪದ ಲೋಕಾರ್ಪಣೆ ಮಾಡಿ ಅವರು ಆಶೀರ್ವಚನ ನೀಡಿದರು.
ಭಕ್ತಿ ಮತ್ತು ಭಾವನೆ ಸಮ್ಮಿಲನವಾದಾಗ ನಂಬಿಕೆಗಳು ಜಾಗೃತವಾಗುತ್ತವೆ. ಧಾರ್ಮಿಕ ಶ್ರದ್ಧೆ ಉದ್ದೀಪನವಾಗುತ್ತದೆ. ಶೃಂಗೇರಿ ಮಠಕ್ಕೂ ಕೊಲ್ಲೂರು ಕ್ಷೇತ್ರಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಶೃಂಗೇರಿ ಪೀಠದ ಹೆಚ್ಚಿನ ಯತಿಗಳು ಮೂಕಾಂಬಿಕೆಯ ದರ್ಶನ ಭಾಗ್ಯ ಪಡೆದು ಅನುಗ್ರಹಿತರಾಗಿದ್ದರು ಎಂದರು.
ಕೊಲ್ಲೂರು ಕ್ಷೇತ್ರದ ಉಗಮಕ್ಕೆ ಕಾರಣರಾದ ಕೋಲ ಮಹರ್ಷಿ, ಶಂಕರಾಚಾರ್ಯರ ಮೂರ್ತಿಗಳನ್ನು ಸ್ಥಾಪನೆ ಮಾಡುವುದರ ಮೂಲಕ ದೇವಿಯ ಓಲಗ ಮಂಟಪದ ವೈಭವ ಇನ್ನಷ್ಟು ಹೆಚ್ಚಾಗಿದೆ. ಇದನ್ನು ಸೇವಾರೂಪವಾಗಿ ನೀಡಿದ ಮಹಾಲಿಂಗ ನಾಯ್ಕ ಅವರ ಕುಟುಂಬಿಕರು ದೇವರ ಅನುಗ್ರಹಕ್ಕೆ
ಪಾತ್ರರಾಗುತ್ತಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಲ್ಲೂರು ಕ್ಷೇತ್ರದ ಅರ್ಚಕ ಕೆ.ಎನ್. ಸುಬ್ರಹ್ಮಣ್ಯ ಅಡಿಗ ಅವರು, ಶೃಂಗೇರಿ ಪೀಠದ ಜಗದ್ಗುರುಗಳ ಪಾದಸ್ಪರ್ಶದಿಂದ ಊರು ಪುನೀತವಾಗುತ್ತದೆ. ಶತಮಾನಗಳ ಇತಿಹಾಸವಿರುವ ಶ್ರೀಕ್ಷೇತ್ರ ಕೊಲ್ಲೂರಿನ ಆರಾಧ್ಯ ದೇವತೆ ಮೂಕಾಂಬಿಕಾ ಅಮ್ಮನವರು ವಿಶೇಷ ಉತ್ಸವಗಳಲ್ಲಿ ವಿರಾಜಮಾನರಾಗುವ ಓಲಗ ಮಂಟಪವನ್ನು ಶಿಲೆಯಿಂದ ಸುಂದರವಾಗಿ ಪುನರ್ ನಿರ್ಮಾಣ ಮಾಡುವುದರ ಮೂಲಕ ಮಹಾಲಿಂಗ ನಾಯ್ಕ ಕುಟುಂಬಿಕರು ಭಕ್ತಿಯ ಸೇವೆ ಜಗನ್ಮಾತೆಗೆ ಅರ್ಪಿಸಿದ್ದಾರೆ ಎಂದರು.
ಶಾಸಕ ಗುರುರಾಜ ಗಂಟಿಹೊಳೆ, ಮುಖಂಡ ಕೆ. ಗೋಪಾಲ ಪೂಜಾರಿ, ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ ಬಡಾಕೆರೆ, ಶಮಂತ್ ಭಟ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಣಾ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಪಿ.ವಿ. ಅಭಿಲಾಷ್, ಯು. ರಾಜೇಶ್ ಕಾರಂತ, ರಘುರಾಮ ದೇವಾಡಿಗ ಆಲೂರು, ಸುರೇಂದ್ರ ಶೆಟ್ಟಿ, ಧನಾಕ್ಷಿ ವಿ. ಪೂಜಾರಿ, ಅರ್ಚಕರಾದ ಎನ್. ನರಸಿಂಹ ಅಡಿಗ, ಶ್ರೀಧರ ಅಡಿಗ, ರಾಮಚಂದ್ರ ಅಡಿಗ, ಕಾಳಿದಾಸ ಭಟ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ಡಾ.ಅತುಲ್ ಕುಮಾರ್ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು, ಉದ್ಯಮಿಗಳಾದ ಕೃಷ್ಣಮೂರ್ತಿ ತೀರ್ಥಹಳ್ಳಿ, ನಿತೀಶ್ ಬಾಯ್ ಗಾಂಧಿ ಸೂರತ್, ಭೋಜ ನಾಯ್ಕ, ನಾರಾಯಣ ನಾಯ್ಕ ಬ್ರಹ್ಮೇರಿ, ಚಂದ್ರಶೇಖರ ನಾಯ್ಕ ಸೆಳ್ಕೋಡು, ಉಪನ್ಯಾಸಕ ಉದಯ ನಾಯ್ಕ ಭಾಗವಹಿಸಿದ್ದರು. ರಾಜೇಶ್ ಕುಂದಾಪುರ ನಿರೂಪಿಸಿದರು. ಜಗದ್ಗುರು ಶಂಕರಾಚಾರ್ಯ ಜಯೇಂದ್ರ ಸರಸ್ವತಿ ವೇದ ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ ಪಠಿಸಿದರು.
ಓಲಗ ಮಂಟಪದ ಸೇವಾಕರ್ತರಾದ ಮಹಾಲಿಂಗ ನಾಯ್ಕ, ಮಲ್ಲಿಕಾ ಎಂ. ನಾಯ್ಕ ದಂಪತಿಯನ್ನು ದೇವಸ್ಥಾನದ ವತಿಯಿಂದ ಸ್ವಾಮೀಜಿ ಗೌರವಿಸಿದರು.
ದೇವಸ್ಥಾನದಿಂದ ಓಲಗ ಮಂಟಪದವರೆಗೆ ವಿಧುಶೇಖರ ಭಾರತಿ ಸ್ವಾಮೀಜಿಯನ್ನು ಮೆರವಣಿಗೆಯ ಮೂಲಕ ಕರೆತರಲಾಯಿತು. ಮರಾಟಿ ನಾಯ್ಕ ಸಮುದಾಯದವರ ಪಾರಂಪರಿಕ ಭಜನಾ ಕುಣಿತ, ಕಳಶ ಹಿಡಿದ ಮಹಿಳೆಯರು, ಚೆಂಡೆ ವಾದನ, ಪಂಚವಾದ್ಯಗಳು ಮೆರುಗು ನೀಡಿದವು. ಕೋಲ ಮಹರ್ಷಿ, ಶಂಕರಾಚಾರ್ಯರ ಮೂರ್ತಿಗಳನ್ನು ಅನಾವರಣ ಮಾಡಿದ ಸ್ವಾಮೀಜಿ, ಕಲಾಶಾಭಿಷೇಕ ನೆರವೇರಿಸಿ ಓಲಗ ಮಂಟಪದಲ್ಲಿ ಮಂಗಳಾರತಿ ಮಾಡಿದರು.
ಬದುಕಿನಲ್ಲಿ ಗಳಿಸಿದ್ದೆಲ್ಲವನ್ನು ಅನುಭವಿಸುತ್ತೇವೆ ಎನ್ನುವುದು ಭ್ರಮೆ. ಕಾರ್ಯ ಸಾಧನೆಗೆ ದೇವರ ಅನುಗ್ರಹವಿರಬೇಕು. ಜಗನ್ಮಾತೆಯ ಆರಾಧನೆಯಿಂದ ಅಭೀಷ್ಟಗಳು ನೆರವೇರುತ್ತವೆವಿಧುಶೇಖರ ಭಾರತಿ ಸ್ವಾಮೀಜಿ ಶೃಂಗೇರಿ ಶಾರದಾ ಪೀಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.