ಕುಂದಾಪುರ: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಕುಂದಾಪುರ ತಾಲ್ಲೂಕಿನ ಬೀಜಾಡಿಯ ಯೋಧ ಅನೂಪ್ ಪೂಜಾರಿ ಹುತಾತ್ಮರಾಗಿರುವ ವಿಚಾರ ತಿಳಿದು ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ.
ಅನೂಪ್ ಅವರೊಂದಿಗೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಳಿಯಾಳದ ಆಂಜನೇಯ ಪಾಟೀಲ ಅವರು ಬುಧವಾರ ಬೆಳಿಗ್ಗೆ ಬೀಜಾಡಿಗೆ ಬಂದು, ಮನೆಯವರಿಗೆ ಮಾಹಿತಿ ನೀಡಿದ್ದರು.
ಮೃತದೇಹದ ಮರಣೋತ್ತರ ಪರೀಕ್ಷೆ ಹಾಗೂ ಸೇನೆಯ ಕೆಲವೊಂದು ವಿಧಿಗಳು ನಡೆದ ಬಳಿಕ, ಮೃತದೇಹ ಮಂಗಳೂರಿಗೆ ಬಂದು ಹುಟ್ಟೂರಿಗೆ ಗುರುವಾರ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವೀರ ಯೋಧನ ಮೃತದೇಹವನ್ನು ಬರಮಾಡಿಕೊಂಡು, ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತವು ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದೆ.
ತೆಕ್ಕಟ್ಟೆಯಿಂದ ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಒಳಪೇಟೆಗೆ ಬಂದು ಅಲ್ಲಿಂದ ಬೀಜಾಡಿ ಫಿಶರೀಸ್ ರಸ್ತೆಯ ಮೂಲಕ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಂದು ಸಕಲ ವಿಧಿಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ. ಅನೂಪ್ ಕಲಿತ ಶಾಲೆಯಾದ ಬೀಜಾಡಿ ಪಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆಗೆ ಕಲ್ಪಿಸಲಾಗಿದೆ. ಬಾಲ್ಯದಲ್ಲಿ ಆಟವಾಡಿ ಬೆಳೆದ ಬೀಜಾಡಿ ಕಡಲ ತೀರದಲ್ಲಿನ ಸರ್ಕಾರಿ ಸ್ಥಳದಲ್ಲಿ ಯೋಧನ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ, ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ, ತಹಶೀಲ್ದಾರ್ ಎಚ್.ಎಸ್. ಶೋಭಾಲಕ್ಷ್ಮಿ ಸೇರಿದಂತೆ ಹಲವರು ಅನೂಪ್ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಬೀಜಾಡಿಯ ಚಂದು ಪೂಜಾರಿ ಹಾಗೂ ನಾರಾಯಣ ಪೂಜಾರಿ ದಂಪತಿ ಪುತ್ರ ಅನೂಪ್ ಅವರು ಕೋಟ ವಿವೇಕ ಜ್ಯೂನಿಯರ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಮುಗಿಸಿ, ದೇಶಸೇವೆ ಕನಸುಗಳೊಂದಿಗೆ ಭಾರತೀಯ ಸೇನೆಗೆ ಸೇರಿದ್ದರು. ಮರಾಠ ರೆಜಿಮೆಂಟ್‌ನಲ್ಲಿ ಲೈಟ್ ಇನ್ಫೆಂಟ್ರಿ ಬೆಟಾಲಿಯನ್‌ಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಕೆಲ ದಿನಗಳ ಹಿಂದೆ ರಜೆಯಲ್ಲಿ ಊರಿಗೆ ಬಂದಿದ್ದ ಅವರು, ಕೋಟೇಶ್ವರದ ಕೊಡಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಪುತ್ರಿಯ ಹುಟ್ಟುಹಬ್ಬವನ್ನು ಆಚರಿಸಿ ಕೆಲಸಕ್ಕೆ ಮರಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಅಶ್ರುತರ್ಪಣ ಹಾಗೂ ಕಂಬನಿಯ ಮಹಾಪೂರವೇ ಬರುತ್ತಿದೆ. ಯೋಧ ಅನೂಪ್‌ಗೆ ಶೃದ್ಧಾಂಜಲಿ ಸಲ್ಲಿಸುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.