ಉಡುಪಿ: ಕೇಂದ್ರ ಸರ್ಕಾರವು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸದಂತೆ ಆಗ್ರಹಿಸಿ ಬುಧವಾರ ನಡೆದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ನಗರದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ಪ್ರತಿಭಟನೆ ನಡೆಯಿತು.
ಉಡುಪಿಯ ಕೆಎಸ್‌ಆರ್‌ಟಿಸಿ ಹಳೆ ಬಸ್ ನಿಲ್ದಾಣದ ಬಳಿಯ ಸಿಐಟಿಯು ಕಚೇರಿಯಿಂದ ಪ್ರಧಾನ ಅಂಚೆ ಕಚೇರಿವರೆಗೆ ಕಾರ್ಮಿಕರು ಮೆರವಣಿಗೆ ನಡೆಸಿದರು.
ಬಳಿಕ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಇಂದಿನ ಸರ್ಕಾರಗಳು ದೊಡ್ಡ ದೊಡ್ಡ ಕಾರ್ಪೊರೆಟ್ ಕಂಪನಿಗಳಿಗೆ, ಮಾಲಕರಿಗೆ ಸಹಕಾರ ನೀಡುವ ನೀತಿ ಅನುಸರಿಸುತ್ತಿದ್ದು, ಕಾರ್ಮಿಕರನ್ನು ತುಳಿಯುತ್ತಿರುವ ಪರಿಸ್ಥಿತಿ ಇದೆ ಎಂದರು.
ದೇಶದಲ್ಲಿ ಕೋವಿಡ್‌ನಿಂದ ಜನರು ಸಾಯುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅನುಮೋದನೆ ಪಡೆದಿದೆ. ಆದರೆ, ಇದುವರೆಗೆ ಜಾರಿಗೊಳಿಸಿರಲಿಲ್ಲ. ಈಗ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಈ ಸಂಹಿತೆಗಳನ್ನು ಜಾರಿ ಮಾಡಲು ಹೊರಟಿದೆ ಎಂದು ಹೇಳಿದರು.
ಕಾರ್ಮಿಕ ಸಂಹಿತೆಗಳ ವಿರುದ್ಧದ ಹೋರಾಟವು ಕಾರ್ಮಿಕರ ಅಳಿವು ಉಳಿವಿನ ಹೋರಾಟವಾಗಿದೆ. ಇಂದು ಮಾಲೀಕರ ಲಾಭದ ಪಾಲು ಹೆಚ್ಚಾಗಿದೆ. ಕಾರ್ಮಿಕರ ವೇತನದ ಪಾಲು ಕಡಿಮೆಯಾಗಿದೆ ಎಂದರು.
ರಾಜ್ಯ ಸರ್ಕಾರ ಕೂಡ ವಸತಿ ಶಾಲೆಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ₹1,125 ಕೋಟಿಯನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ತೆಗೆಯಲು ಪ್ರಯತ್ನಿಸುತ್ತಿದೆ. ಇದು ಸಲ್ಲದು ಎಂದು ಹೇಳಿದರು.
ಬ್ಯಾಂಕ್ ನೌಕರರ ಸಂಘದ ಮುಖಂಡ ನಾಗೇಶ್ ಮಾತನಾಡಿ, ರೈತರನ್ನು ದೇಶದ ಬೆನ್ನೆಲು ಎನ್ನುತ್ತಾರೆ. ಆದರೆ ಈಗಿನ ಕೇಂದ್ರ ಸರ್ಕಾರವು ರೈತರನ್ನು ದಮನಿಸಲು ಹೊರಟಿದೆ ಎಂದರು.
ಕೇಂದ್ರ ಸರ್ಕಾರವು ಬ್ಯಾಂಕ್‌ಗಳನ್ನು ವಿಲೀನ ಮಾಡುವ ಮೂಲಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗದಂತೆ ಮಾಡಿದೆ. ಅಲ್ಲದೆ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಲಾಗುತ್ತಿದೆ. ಇದರಿಂದ ಬ್ಯಾಂಕ್‌ಗಳಿಗೂ ಲಾಭವಿಲ್ಲ. ಕಾರ್ಮಿಕರಿಗೂ ಲಾಭವಿಲ್ಲ ಎಂದರು.
ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಉಡುಪಿ ಸಂಚಾಲಕ ಕವಿರಾಜ್ ಎಸ್. ಕಾಂಚನ್, ಪ್ರಮುಖರಾದ ಕೆ. ವಿಶ್ವನಾಥ್, ಯು. ಶಿವಾನಂದ, ಉಮೇಶ್ ಕುಂದರ್, ಶಶಿಧರ ಗೊಲ್ಲ, ಸುನಿತಾ ಶೆಟ್ಟಿ, ರಾಮ ಕಾರ್ಕಡ, ಕಿರಣ್ ಹೆಗ್ಡೆ , ಸುಶೀಲಾ ನಾಡ, ಯಶೋದಾ, ಪ್ರೇಮಾ ಇದ್ದರು.
ಉಡುಪಿಯಲ್ಲಿ ಕಾರ್ಮಿಕರಿಂದ ಪ್ರತಿಭಟನಾ ಮೆರವಣಿಗೆ ಸಾರ್ವತ್ರಿಕ ಮುಷ್ಕರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಭಾಗಿ
ಯಾವುದೇ ಸರ್ಕಾರಗಳು ಬಂದರೂ ಕಾರ್ಪೊರೆಟ್ ಪರ ನೀತಿಗಳನ್ನು ಅನುಸರಿಸಿದರೆ ನಾವು ಅದನ್ನು ವಿರೋಧಿಸುತ್ತೇವೆ ಮತ್ತು ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತೇವೆಬಾಲಕೃಷ್ಣ ಶೆಟ್ಟಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.