ADVERTISEMENT

ಉಡುಪಿ: ಜೀವಜಲಕ್ಕಾಗಿ ಕೆರೆ, ಮದಗಗಳಿಗೆ ಬೇಕು ಕಾಯಕಲ್ಪ

ಕುಡಿಯುವ ನೀರು, ಕೃಷಿಗೆ ಪೂರಕವಾಗಿವೆ ಚಾಂತಾರು, ಶಿರಿಯಾರ ಮದಗ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 7:32 IST
Last Updated 21 ಏಪ್ರಿಲ್ 2025, 7:32 IST
ಹಂದಾಡಿಯಲ್ಲಿರುವ ಕೆರೆ
ಹಂದಾಡಿಯಲ್ಲಿರುವ ಕೆರೆ   

ಬ್ರಹ್ಮಾವರ: ಬ್ರಹ್ಮಾವರ ವ್ಯಾಪ್ತಿಯ 27 ಗ್ರಾಮ ಪಂಚಾಯಿತಿಗಳಲ್ಲಿ ಹಲವು ಕೆರೆ, ಮದಗಗಳು ಇದ್ದು ಅವುಗಳು ಸಾಂಪ್ರದಾಯಿಕ ನೀರಿಂಗಿಸುವಿಕೆಯ ಪ್ರಮುಖ ಮೂಲಗಳಾಗಿವೆ.

ಚಾಂತಾರು ಮದಗ ಈ ವ್ಯಾಪ್ತಿಯ ಬಹು ದೊಡ್ಡ ನೀರಿನ ಮೂಲವಾಗಿದ್ದು, ಕುಡಿಯುವ ನೀರು ಮತ್ತು ಕೃಷಿಗೆ ಪೂರಕವಾಗಿದೆ. ಶಿರಿಯಾರ ಮದಗ ಕೂಡ ಇದಕ್ಕೆ ಹೊರತಾಗಿಲ್ಲ.

ಹೆಚ್ಚಿನ ಮದಗಗಳಲ್ಲಿ ಡಿಸೆಂಬರ್‌– ಜನವರಿವರೆಗೆ ನೀರಿನ ಸಂಗ್ರಹವಿದ್ದು ನಂತರ ಬರಿದಾಗುತ್ತವೆ. ಮದಗ ಹಾಗೂ ಕೆರೆಗಳ ಹೂಳೆತ್ತಿ ಅಭಿವೃದ್ಧಿ ಪಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹಕ್ಕೆ ಅವಕಾಶವಿದೆ. ಯೋಜನೆಗಳ ಅನುಷ್ಠಾನ ಮತ್ತು ಇಚ್ಛಾಶಕ್ತಿಗೆ ಸ್ಥಳೀಯ ಆಡಳಿತಗಳು ಮನಸ್ಸು ಮಾಡಬೇಕಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ADVERTISEMENT

ಸಣ್ಣ ಪ್ರಮಾಣದ ಕೆರೆಗಳನ್ನು ಸ್ಥಳೀಯ ಆಡಳಿತಕ್ಕೆ ಹಸ್ತಾಂತರಿಸಲಾಗಿದ್ದು, ದೊಡ್ಡ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.

ಪಾರಂಪರಿಕ ತೋಡುಗಳು ಕರಾವಳಿಯಾದ್ಯಂತ ತುಂಬಾ ಇವೆ. ಈ ತೋಡುಗಳ ನಿರ್ಲಕ್ಷ್ಯದಿಂದಾಗಿ ಪ್ರಸ್ತುತ ಸ್ಥಿತಿ ಆಶಾದಾಯಕವಾಗಿಲ್ಲ. ಮಳೆಗಾಲ ಮುನ್ನ ಮತ್ತು ಮಳೆಗಾಲದ ನಂತರ ನಿರ್ದಿಷ್ಟ ತೋಡುಗಳನ್ನು ಸ್ಥಳೀಯ ಆಡಳಿತವೇ ನಿರ್ವಹಣೆ ಮಾಡುವ ಅಗತ್ಯ ತುಂಬಾ ಇದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಇದಕ್ಕೆ ವರದಾನವಾಗಿದ್ದು ಕೆಲವು ಗ್ರಾ.ಪಂಗಳು ವಿಶೇಷ ಆಸಕ್ತಿ ವಹಿಸಿ ತೋಡುಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಾಗಿದೆ.

ಬ್ರಹ್ಮಾವರ ವ್ಯಾಪ್ತಿಯ ನಾಲ್ಕೂರು, ಜಿಲ್ಲಾಡಿ, ಕಾಡೂರು ಸೇರಿದಂತೆ ಅನೇಕ ಗ್ರಾ.ಪಂಗಳು ಈ ಬಗ್ಗೆ ಆದ್ಯತೆ ನೀಡಿವೆ. ಆದರೂ ಬಹುತೇಕ ಪಂಚಾಯಿತಿಗಳಲ್ಲಿ ತೋಡುಗಳ ಸ್ಥಿತಿ ಉತ್ತಮವಾಗಿಲ್ಲ ಮತ್ತು ಮಳೆಗಾಲದ ಸಂದರ್ಭ ನೆರೆಗೆ ಕಾರಣವಾಗುತ್ತಿವೆ.

ಕೆರೆ ಅಭಿವೃದ್ಧಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ವಿಪುಲ ಅವಕಾಶಗಳಿದ್ದು ಕೋಡಿ, ನಾಲ್ಕೂರು, ಕಾಡೂರು, ಆವರ್ಸೆ, ಬಿಲ್ಲಾಡಿ ಸೇರಿದಂತೆ ಹಲವು ಪಂಚಾಯಿತಿಗಳು ಈ ಯೋಜನೆಯಡಿ ತಮ್ಮ ವ್ಯಾಪ್ತಿಯ ಕೆರೆ ಹಾಗೂ ಮದಗಗಳ ಅಭಿವೃದ್ಧಿಗೆ ಆಸಕ್ತಿ ವಹಿಸಿವೆ.

ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಸ್ಥಳೀಯಾಡಳಿತಗಳು ವಿವಿಧ ಯೋಜನೆಗಳಡಿ ಅನುದಾನ ಮೀಸಲಿರಿಸಿವೆ. ಸ್ಥಳೀಯ ಆಡಳಿತದ ಹಂತದಲ್ಲಿ ನೀರಿನ ಬಜೆಟ್ ಮೂಲಕ ನಿರ್ವಹಣೆಗೆ ಕ್ರಮ ಕೈಗೊಳ್ಳುವುದು ಆದ್ಯತೆಯಾಗಬೇಕಾಗಿದೆ.

ಹೊಸ ಕೆರೆ ನಿರ್ಮಾಣಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅವಕಾಶವಿದೆ. ಈ ಅವಕಾಶ ಸದುಪಯೋಗ ಪಡಿಸಿಕೊಂಡಲ್ಲಿ ಕೆರೆಗಳ ಅಭಿವೃದ್ಧಿಯಾಗಿ ಅಂತರ್ಜಲ ಮಟ್ಟ ಏರಿಕೆಯಾಗಿ ಬೇಸಿಗೆಯ ನೀರಿನ ಸಮಸ್ಯೆ ಪರಿಹಾರವಾಗಬಹುದು ಎನ್ನುವುದು ಜನರ ಅಭಿಪ್ರಾಯವಾಗಿದೆ.

ಗ್ರಾ.ಪಂ ಹಂತದಲ್ಲಿ 15ನೇ ಹಣಕಾಸು, ಸ್ವಂತ ಅನುದಾನ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನ ಮತ್ತು ವಿಶೇಷ ಅನುದಾನಗಳು ಲಭ್ಯವಿದ್ದು, ಸ್ಥಳೀಯ ಆಡಳಿತಗಳು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಶ್ರಮದಾನ ಹಾಗೂ ಸಾಮೂಹಿಕ ಕಾಮಗಾರಿಗಳ ಅನುಷ್ಠಾನ ಮಾಡುವುದು ಅಗತ್ಯವಿದೆ.

ಬಾರ್ಕೂರಿನ ಕೆರೆ
ಕಾಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಈವರೆಗೆ 16 ಮದಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ದೊಡ್ಡ ಪ್ರಮಾಣದ ಅಭಿವೃದ್ಧಿಗೆ ಅನುದಾನ ಅಗತ್ಯವಿರುವ ಕೆರೆಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ಕೆರೆ ಮದಗ ಹಾಗೂ ತೋಡುಗಳ ಅಭಿವೃದ್ಧಿ ಅಗತ್ಯವಿದೆ.
– ಜಲಂಧ‌ರ್ ಶೆಟ್ಟಿ ಅಧ್ಯಕ್ಷರು ಕಾಡೂರು ಗ್ರಾ.ಪಂ

ಬತ್ತುತ್ತಿವೆ ಬಾರ್ಕೂರಿನ‌ ಕೆರೆಗಳು

ತಾಲ್ಲೂಕಿನ ಬಾರ್ಕೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಕೆರೆಗಳು ಹೂಳು ತುಂಬಿ ಮುಚ್ಚಿ ಹೋಗುವ ಪರಿಸ್ಥಿತಿ ಬಂದೊದಗಿದೆ. ಪಾಚಿ ಅಂತರಗಂಗೆಯಿಂದಲೂ ಕೆರೆಗಳ ನೀರು ಬಳಸಲು ಯೋಗ್ಯವಾಗದ ಸ್ಥಿತಿಯಲ್ಲಿ ಇದೆ. ಗ್ರಾಮ ಪಂಚಾಯಿತಿ ಕೆರೆಗಳ ಅಭಿವೃದ್ಧಿಗೆ‌ ಶ್ರಮಿಸಿದಲ್ಲಿ ಈ ಪರಿಸರದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸ್ಥಳೀಯರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.