ADVERTISEMENT

ಮರಳು ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಪತ್ರ: ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 16:22 IST
Last Updated 23 ಅಕ್ಟೋಬರ್ 2018, 16:22 IST
ಪ್ರಿಯಾಂಕ ಮೇರಿ ಫ್ರಾನ್ಸಿಸ್‌
ಪ್ರಿಯಾಂಕ ಮೇರಿ ಫ್ರಾನ್ಸಿಸ್‌   

ಉಡುಪಿ: ಲಾರಿ ಮಾಲೀಕರ ಸಂಘದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸ್ಪಂದಿಸಲಿದ್ದು, ಈ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದ್ದಾರೆ.

ಸಧ್ಯ ಸಿ.ಆರ್.ಝೆಡ್ ಪ್ರದೇಶದಲ್ಲಿ ಗುರುತಿಸಿರುವ 7 ಮರಳು ದಿಬ್ಬಗಳಿಂದ ಕೇವಲ 17,526 ಮೆಟ್ರಿಕ್ ಟನ್‌ ಲಭ್ಯವಿದ್ದು, ಈ ಪ್ರಮಾಣದ ಮರಳು ಬೇಡಿಕೆಗೆ ಸಾಲುವುದಿಲ್ಲ. ಜತೆಗೆ, ಮರಳು ದುಬಾರಿಯಾಗಲಿದ್ದು, ಸಾಮಾನ್ಯರಿಗೆ ಹೊರೆಯಾಗಲಿದೆ ಎಂದು ಲಾರಿ ಮಾಲೀಕರ ಸಂಘ ಮನವಿ ಮಾಡಿದೆ.

ಸಿ.ಆರ್.ಝಡ್ ಮತ್ತು ನಾನ್ ಸಿ.ಆರ್.ಝಡ್ ಪ್ರದೇಶದಲ್ಲಿ ಹೊಸದಾಗಿ ಮರಳು ದಿಬ್ಬ ಹಾಗೂ ಬ್ಲಾಕ್‌ಗಳನ್ನು ಗುರುತಿಸಿ ಏಕಕಾಲದಲ್ಲಿ ಸಾರ್ವಜನಿಕರಿಗೆ ಮರಳು ನೀಡಬೇಕು ಎಂದು ಸಂಘ ಮನವಿ ಮಾಡಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ADVERTISEMENT

ಜತೆಗೆ, ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿಗೆ ಮರಳನ್ನು ಪೂರೈಸಲು ಕ್ರಮ ತೆಗೆದುಕೊಳ್ಳುವಂತೆ ಸಂಘದ ಮುಖಂಡರು ಆಗ್ರಹಿಸಿದ್ದು, ನಿಯಮಾವಳಿಯಂತೆ ಮರಳು ಪೂರೈಸಲು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ನಾನ್ ಸಿ.ಆರ್.ಝೆಡ್ ನದಿ ಪಾತ್ರಗಳಲ್ಲಿ ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ಮರಳು ಬ್ಲಾಕ್‌ಗಳನ್ನು ಗುರುತಿಸಲು ನಿಯಮಾವಳಿಯಲ್ಲಿ ತಿದ್ದುಪಡಿ ತರುವ ಕುರಿತು ಹಾಗೂ ಕುಂದಾಪುರ ಮತ್ತು ಬೈಂದೂರು ತಾಲ್ಲೂಕಿನ ಸಿ.ಆರ್.ಝೆಡ್ ಪ್ರದೇಶದ ನದಿ ಪಾತ್ರಗಳಲ್ಲಿ ಬರುವ ಜೈವಿಕ ಸೂಕ್ಷ್ಮ ಪ್ರದೇಶಗಳ ಮಿತಿಯನ್ನು ಕಡಿಮೆಗೊಳಿಸುವ ಬಗ್ಗೆಯೂ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.

ತಾಲ್ಲೂಕು ಕೇಂದ್ರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಟೆಂಡರ್ ಪ್ರಕ್ರಿಯೆ ಕೈಬಿಟ್ಟು, ಐದು ವರ್ಷಗಳ ಹಿಂದೆ, ಪರವಾನಗಿಯನ್ನು ಸ್ಥಳೀಯ ಪಂಚಾಯತ್ ವ್ಯಾಪ್ತಿಯಲ್ಲಿ ನೀಡುತ್ತಿದ್ದಂತೆ ಕ್ರಮ ತೆಗೆದುಕೊಳ್ಳಬೇಕು ಎಂಬ ಮವಿ ಸಂಬಂಧ, ಕೆಎಂಎಂಸಿಆರ್ ಕಾಯ್ದೆಗೆ ತಿದ್ದುಪಡಿ ತರಲು ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.