ಉಡುಪಿ: ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರು ಮಹತ್ವದ ಪಾತ್ರವಹಿಸುತ್ತಾರೆ. ಶಿಕ್ಷಕರು ಕೇವಲ ಪರೀಕ್ಷಾ ಕೇಂದ್ರಿತ ಶಿಕ್ಷಣಕ್ಕೆ ಮಾತ್ರ ಒತ್ತು ನೀಡದೆ ವಿದ್ಯಾರ್ಥಿಗಳಿಗೆ ಜೀವನ ಕೌಶಲವನ್ನೂ ಕಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸುವ ಕೆಲಸ ಕೂಡ ಶಾಲೆಗಳಲ್ಲಿ ನಡೆಯಬೇಕು. ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಿದರೆ ಅವರು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂದರು.
ನಮ್ಮ ಗುಣ ನಡತೆ ಉತ್ತಮವಾಗಿಲ್ಲದಿದ್ದರೆ ಎಷ್ಟೇ ಶಿಕ್ಷಣ ಪಡೆದರೂ ಅದಕ್ಕೆ ಬೆಲೆ ಇರುವುದಿಲ್ಲ. ಮಕ್ಕಳಲ್ಲಿ ಉತ್ತಮ ಸಂಸ್ಖಾರ ಬೆಳೆಸುವ ಕೆಲಸವನ್ನು ಶಿಕ್ಷಕ ವೃಂದ ಮಾಡಬೇಕು ಎಂದು ಹೇಳಿದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ದೇಶದ ಭವಿಷ್ಯವು ತರಗತಿಯೊಳಗೆ ರೂಪುಗೊಳ್ಳುತ್ತದೆ. ವಿದ್ಯಾರ್ಥಿಗಳು ದೇಶದ ಭವಿಷ್ಯ, ಅವರನ್ನು ರೂಪುಗೊಳಿಸುವವರು ಶಿಕ್ಷಕರು. ಶಿಕ್ಷಕರು ಭವ್ಯ ಭಾರತವನ್ನು ನಿರ್ಮಿಸುವ ಶಿಲ್ಪಿಗಳು ಎಂದರು.
ಶ್ಯಾಮಿಲಿ ಜಿ.ಶಂಕರ್ ಮಾತನಾಡಿ, ಶಿಕ್ಷಕರಿಗೆ ನೀಡುವ ಗೌರವ ಇಡೀ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಗೌರವವಾಗಿದೆ. ಶಿಕ್ಷಕರು ಕೇವಲ ಪಾಠ ಮಾಡುವವರಷ್ಟೇ ಅಲ್ಲ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವವರು ಎಂದರು.
ಲೆಕ್ಕ ಪರಿಶೋಧಕ ಕಮಲಾಕ್ಷ ಕಾಮತ್ ವಿಶೇಷ ಉಪನ್ಯಾಸ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಲ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ಅಶೋಕ್ ಕಾಮತ್, ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ. ಸ್ವಾಗತಿಸಿದರು. ಒಳಕಾಡು ಶಾಲೆಯ ಅಧ್ಯಾಪಕ ಗಣಪತಿ ಭಟ್ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ವಂದಿಸಿದರು.
ಮಣ್ಣಿನಿಂದ ಸುಂದರವಾದ ಮೂರ್ತಿಯನ್ನು ರೂಪಿಸುವಂತೆ ಶಿಕ್ಷಕರು ಕೂಡ ಮಕ್ಕಳನ್ನು ತಿದ್ದಿ ತೀಡಿ ದೇಶದ ಆಸ್ತಿಯನ್ನಾಗಿ ರೂಪಿಸುವಲ್ಲಿ ತಮ್ಮ ಕೊಡುಗೆ ನೀಡುತ್ತಾರೆಯಶ್ಪಾಲ್ ಸುವರ್ಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.