ADVERTISEMENT

ಲೋಕಾಯುಕ್ತ: ಮೂರು ಅರ್ಜಿ ಸಲ್ಲಿಕೆ

ಕಾಪುವಿನಲ್ಲಿ ಸಾರ್ವಜನಿಕ ಅಹವಾಲು ಮತ್ತು ಲೋಕಾಯುಕ್ತ ಜನ ಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 5:34 IST
Last Updated 11 ಜುಲೈ 2025, 5:34 IST
ಕಾಪು ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಮತ್ತು ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಲೋಕಾಯುಕ್ತ ಪ್ರಭಾರಿ ಡಿವೈಎಸ್‌ಪಿ ಮಂಜುನಾಥ್ ಸಾರ್ವಜನಿಕರ ದೂರು ಸ್ವೀಕರಿಸಿದರು
ಕಾಪು ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಮತ್ತು ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಲೋಕಾಯುಕ್ತ ಪ್ರಭಾರಿ ಡಿವೈಎಸ್‌ಪಿ ಮಂಜುನಾಥ್ ಸಾರ್ವಜನಿಕರ ದೂರು ಸ್ವೀಕರಿಸಿದರು   

ಕಾಪು (ಪಡುಬಿದ್ರಿ): ಕಾಪು ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆದ ಲೋಕಾಯುಕ್ತ ಸಾರ್ವಜನಿಕ ಅಹವಾಲು ಮತ್ತು ಜನ ಸಂಪರ್ಕ ಸಭೆಯಲ್ಲಿ ಮೂರು ಅರ್ಜಿಗಳು ಸಲ್ಲಿಕೆಯಾದವು.

ಉಡುಪಿ ಲೋಕಾಯುಕ್ತ ವಿಭಾಗದ ವತಿಯಿಂದ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ರಸ್ತೆ, ಕಂದಾಯ ಇಲಾಖೆ ಹಾಗೂ ಮಾಹಿತಿ ಕೇಳಿ ಅರ್ಜಿಗಳನ್ನು ಸಲ್ಲಿಸಲಾಯಿತು. ಅಯಾಯಾ ದೂರುಗಳಿಗೆ ಸಂಬಂಧಿಸಿ ಲೋಕಾಯುಕ್ತ ಪ್ರಭಾರಿ ಡಿವೈಎಸ್‌ಪಿ ಮಂಜುನಾಥ್ ಅರ್ಜಿಗಳ ವಿಚಾರಣೆ ನಡೆಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಶಾರದಾ ಪೂಜಾರ್ತಿ ಮಾತನಾಡಿ, ಜನರಿಗೆ ಹಲವಾರು ಸಮಸ್ಯೆಗಳಿವೆ. ಆದರೆ, ದೂರು ಸಲ್ಲಿಸಲು ಮಾಹಿತಿ ಇರುವುದಿಲ್ಲ. ಸಭೆಯ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಮೂಲಕ ಜನರಿಗೆ ತಿಳಿಸಬೇಕು ಎಂದರು.

ADVERTISEMENT

ಈ ಬಗ್ಗೆ ಮಾತನಾಡಿದ ಇನ್‌ಸ್ಪೆಕ್ಟರ್ ಮಂಜುನಾಥ್, ಈಗಾಗಲೇ ಮಾಧ್ಯಮಗಳು ಹಾಗೂ ಪಂಚಾಯಿತಿ ಮೂಲಕ ಪ್ರಚುರ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿ ಕಚೇರಿ ಮುಂಭಾಗ ಬ್ಯಾನರ್ ಅಳವಡಿಸಿ ಪ್ರಚಾರ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಲೋಕಾಯುಕ್ತ ಅಹವಾಲು ಸ್ವೀಕಾರದ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಅಂಟಿಸಿದರೆ ಜನರಿಗೆ ಹೇಗೆ ತಿಳಿಯುತ್ತದೆ ಎಂದು ಅಧಿಕಾರಿಗಳನ್ನು ಮಂಜುನಾಥ್ ಪ್ರಶ್ನಿಸಿದರು.

ತಹಶೀಲ್ದಾರ್ ಪ್ರತಿಭಾ ಆರ್. ಮಾತನಾಡಿ, ಕಾಪು ತಾಲ್ಲೂಕಿನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿದ್ದೇವೆ. ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಜನರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವಲ್ಲಿ ಜನಸಂಪರ್ಕ ಸಭೆ ಮತ್ತು ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ ಅಗತ್ಯವಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಉಡುಪಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ರಾಜೇಂದ್ರ ನಾಯ್ಕ್ ಇದ್ದರು.

- ‘ನೇರ ದೂರು ನೀಡಬಹುದು’

ಲೋಕಾಯುಕ್ತ ಅಧಿಕಾರಿಗಳು ಯಾರಿಗೂ ಕರೆ ಮಾಡುವುದಿಲ್ಲ. ನಮಗೆ ಯಾವುದೇ ದೂರು ಬಂದಲ್ಲಿ ನೇರ ಕಚೇರಿಗೆ ತೆರಳಿ ದಾಳಿ ನಡೆಸುತ್ತೇವೆ. ಪೂರ್ವಭಾವಿಯಾಗಿ ಯಾರಿಗೂ ಮಾಹಿತಿ ನೀಡುವುದಿಲ್ಲ. ಲೋಕಾಯುಕ್ತ ಹೆಸರಿನಲ್ಲಿ ಕರೆ ಮಾಡಿ ಬೆದರಿಸಿ ಮೋಸ ಮಾಡಬಹುದು. ಇಂತಹ ಸಂದರ್ಭದಲ್ಲಿ ನೇರ ದೂರು ನೀಡಬಹುದು. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ನ್ಯಾಯಯುತವಾಗಿ ಸರ್ಕಾರಿ ಸೇವೆ ನಡೆಸಲು ಯಾವುದೇ ಭಯ ಬೇಡ ಎಂದು ಮಂಜುನಾಥ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.