ADVERTISEMENT

ಅಹಿಂಸೆ ಸಹನಾ ಗುಣಗಳಿಂದ ಶಾಂತಿಯುತ ಸಮಾಜ: ಸಚಿವ ಅಂಗಾರ

ಭಗವಾನ್ ಮಹಾವೀರ ಜಯಂತಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 14:45 IST
Last Updated 14 ಏಪ್ರಿಲ್ 2022, 14:45 IST
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಭಗವಾನ್ ಮಹಾವೀರ ಜಯಂತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಭಗವಾನ್ ಮಹಾವೀರ ಜಯಂತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.   

ಉಡುಪಿ: ಯಾವುದೇ ಮತ, ಪಂಗಡ, ಸಮುದಾಯ, ಪಂಥಗಳ ಆಚರಣೆಯಲ್ಲಿ ಭಗವಾನ್ ಮಹಾವೀರರು ಪ್ರತಿಪಾದಿಸಿದ ಅಹಿಂಸೆ ಮತ್ತು ಸಹನಾ ಗುಣಗಳು ಇದ್ದಲ್ಲಿ ಸಮಾಜ ಶಾಂತಿಯುತವಾಗಿರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಗವಾನ್ ಮಹಾವೀರ ಜಯಂತಿ ಉದ್ಘಾಟಿಸಿ ಮಾತನಾಡಿ, ಮತ, ಪಂಗಡ, ಧರ್ಮಗಳ ಆಚರಣೆಯ ಮೂಲ ಉದ್ದೇಶ ಮುಕ್ತಿ ಪಡೆಯುವುದಾಗಿದೆ. ಮುಕ್ತಿಯ ಹಾದಿಯಲ್ಲಿ ಅಹಿಂಸೆ ಮತ್ತು ಸಹನಾ ಗುಣಗಳು ಅತ್ಯಗತ್ಯ ಎಂದರು.

ಅಹಿಂಸೆಯನ್ನು ಹೊರತುಪಡಿಸಿ ಯಾವುದೇ ಮಾರ್ಗದಿಂದ ದೊರೆಯುವ ನೆಮ್ಮದಿಯು ಕೇವಲ ತಾತ್ಕಾಲಿಕ. ಮಾನವನ ಬದುಕಿಗೆ ಪ್ರೇರಣೆಯಾಗುವ ಗುಣಗಳನ್ನು ಭಗವಾನ್ ಮಹವೀರರು ನೀಡಿದ್ದಾರೆ. ಅದರಂತೆ ನಡೆಯಬೇಕು ಎಂದರು.

ADVERTISEMENT

ಭಗವಾನ್ ಮಹಾವೀರರ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದ, ಉದ್ಯಾವರ ಎಸ್‌ಡಿಎಂ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾದ್ಯಾಪಕ ಡಾ.ಅರ್ಹಂತ ಕುಮಾರ್, ಜೈನಧರ್ಮ ವೈಜ್ಞಾನಿಕ ಶಾಸ್ತ್ರ ಹಾಗೂ ಜೀವಿಗಳಿಗೆ ಹಿಂಸಿಸದೆ ಶಿಸ್ತಿನಿಂದ ಬದುಕುವ ವಿಧಾನವಾಗಿದೆ.

ಮಹಾವೀರರು ಇಂದ್ರಿಯ ಮತ್ತು ಮನಸ್ಸನ್ನು ನಿಗ್ರಹಿಸಿ ಉನ್ನತ ಸ್ಥಾನಕ್ಕೇರಿದ ಜೈನ ಧರ್ಮದ ಕೊನೆಯ ತೀರ್ಥಂಕರರಾಗಿದ್ದಾರೆ. ಅವರ ಮೂರು ಸಂದೇಶಗಳಾದ ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತ ಸಿದ್ದಾಂತಗಳ ಆಚರಣೆಯಿಂದ ವಿಶ್ವ ಶಾಂತಿ, ವಿಶ್ವ ಪ್ರೇಮ ಮತ್ತು ವಿಶ್ವ ಭ್ರಾತೃತ್ವ ಮೂಡಲಿದೆ ಎಂದರು.

ಉಡುಪಿ ಶಾಸಕ ರಘುಪತಿ ಭಟ್ , ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಎಸ್‌ಪಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಜೈನ ಮಿಲನ್ ಅಧ್ಯಕ್ಷ ಸುದೀರ್ ಕುಮಾರ್ ಜೈನ್, ನಿರ್ದೇಶಕ ಪ್ರಸನ್ನ ಕುಮಾರ್, ಕಾರ್ಯಾದ್ಯಕ್ಷ ರಾಜವರ್ಮ ಅರಿಗ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.