ADVERTISEMENT

ಶತಾಯುಷಿ ಮೈಕೆಲ್ ಡಿಸೋಜ ನಿಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 3:08 IST
Last Updated 9 ಸೆಪ್ಟೆಂಬರ್ 2022, 3:08 IST
ಮೈಕೆಲ್ ಡಿಸೋಜ
ಮೈಕೆಲ್ ಡಿಸೋಜ   

ಹಿರಿಯಡಕ: ಪರ್ಕಳದ ಗ್ಯಾಟ್ ಸನ್ ಅಚ್ಯುತ ನಗರ ನಿವಾಸಿ, ನಿವೃತ್ತ ಸೈನಿಕ ಮೈಕಲ್ ಡಿಸೋಜ (108) ಗುರುವಾರ ನಿಧನರಾದರು. ಎರಡು ದಿನಗಳಿಂದ ಅಸ್ವಸ್ಥರಾಗಿದ್ದರು.

ಮೈಕೆಲ್ ಡಿಸೋಜ ಅವರು ಮದ್ರಾಸ್ ಸರ್ಕಾರ ಇರುವಾಗ ಸೈನ್ಯಕ್ಕೆ ಸೇರಿದ್ದರು. ಮೆಕ್ಯಾನಿಕಲ್ ಕಮ್ ಡ್ರೈವರ್ ಆಗಿ ಸೇನೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಮೃತರ ಪತ್ನಿ 98ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಮೈಕಲ್ ಅವರ ತಾಯಿ ಕೂಡ 108 ವರ್ಷ ಕಾಲ ಬದುಕಿದ್ದರು.

ಮಕ್ಕಳಿಲ್ಲದ ಅವರು ಪರ್ಕಳದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಸೈನ್ಯದಲ್ಲಿ 10 ವರ್ಷ ಸೇವೆಯ ನಂತರ ಲೋಕೋಪಯೋಗಿ ಇಲಾಖೆಗೆ ಸೇರಿ ಉಡುಪಿ ರಥಬೀದಿಯ ಕಾಂಕ್ರೀಟ್ ರಸ್ತೆ, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಮಂಗಳೂರಿನ ಕೂಳೂರು ಸೇತುವೆ, ಮಲ್ಪೆ ಕಲ್ಮಾಡಿ ಸೇತುವೆ, ಬೈಂದೂರಿನ ಸೇತುವೆಗಳು, ಉಭಯ ಜಿಲ್ಲೆಗಳ ಅನೇಕ ಹಳೆಯ ಸೇತುವೆಗಳನ್ನು ನಿರ್ಮಿಸುವಾಗ ತಮ್ಮನ್ನು ತೊಡಗಿಸಿಕೊಂಡಿದ್ದರು. ಶತಾಯುಷಿ ಆಗಿದ್ದರೂ ಅವರ ಕಣ್ಣಿನ ದೃಷ್ಟಿ ಉತ್ತಮವಾಗಿತ್ತು. 2024ರ ತನಕ ಮಂಗಳೂರಿನ ಆರ್‌ಟಿಒ ಅವರಿಗೆ (ನಾಲ್ಕು ಚಕ್ರ) ವಾಹನ ಚಾಲನೆ ಪರವಾನಗಿ ನೀಡಿತ್ತು.

ADVERTISEMENT

ಸ್ವಾತಂತ್ರ್ಯದ ಅಮೃತ ಸಂಭ್ರಮದಲ್ಲಿ ಇಂದ್ರಾಳಿಯ ಲಯನ್ಸ್ ಕ್ಲಬ್ ಜಯಸಿಂಹ ಸಭಾಂಗಣದಲ್ಲಿ ಅವರು ಧ್ವಜಾರೋಹಣ ನಡೆಸಿದ್ದರು. ಶುಕ್ರವಾರ ಬೆಳಿಗ್ಗೆ ಪರ್ಕಳದ ಅಚ್ಯುತ ನಗರದ ಮನೆಯಲ್ಲಿ ಅಂತಿಮ ದರ್ಶನ ಮತ್ತು ಗೌರವ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ ಮಂಗಳೂರಿನ ಚರ್ಚ್‌ನಲ್ಲಿ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.