ADVERTISEMENT

ಲೇಖಕಿ ಪಾರ್ವತಿ ಜಿ ಐತಾಳ್‌ಗೆ ‘ಮಲೆಯಾಳ ಮಿತ್ರ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 5:59 IST
Last Updated 19 ನವೆಂಬರ್ 2025, 5:59 IST
ಲೇಖಕಿ ಪಾರ್ವತಿ ಐತಾಳ್ ಅವರನ್ನು ಗೌರವಿಸಲಾಯಿತು
ಲೇಖಕಿ ಪಾರ್ವತಿ ಐತಾಳ್ ಅವರನ್ನು ಗೌರವಿಸಲಾಯಿತು   

ಕುಂದಾಪುರ: ಯಾವುದೇ ಭಾಷೆಯ ಸಾಹಿತ್ಯವು ಬೆಳೆಯಬೇಕಾದರೆ ಇತರ ಭಾಷೆಗಳ ಸಾಹಿತ್ಯದೊಂದಿಗೆ ಸಂಪರ್ಕ ಬೆಳೆಸುವುದು ಅಗತ್ಯ ಎಂದು ಕೇರಳದ ಕೋಝಿಕ್ಕೋಡು ಶಾಸಕ ತೋಟತ್ತಿಲ್ ರವೀಂದ್ರನ್ ಹೇಳಿದರು.

ಕೋಝಿಕ್ಕೋಡಿನ ಗೋಕುಲ ಗ್ರ್ಯಾಂಡ್‌ನಲ್ಲಿ ವರ್ಲ್ಡ್ ಮಲೆಯಾಳಿ ಕೌನ್ಸಿಲ್ ಏರ್ಪಡಿಸಿದ್ದ ಸಮಾರಂಭದಲ್ಲಿ, ಕನ್ನಡ-ಮಲೆಯಾಳಗಳ ನಡುವೆ 38 ಮಹತ್ವದ ಕೃತಿಗಳನ್ನು ಅನುವಾದಿಸಿದ ಕುಂದಾಪುರದ ಡಾ.ಪಾರ್ವತಿ ಜಿ.ಐತಾಳ್ ಅವರಿಗೆ ‘ಮಲೆಯಾಳ ಮಿತ್ರ’ ಪ್ರಶಸ್ತಿ ನೀಡಿ ಅವರು ಮಾತನಾಡಿದರು.

ಒಂದು ಭಾಷೆಗೆ ಹೊಸ ಗಾಳಿ-ಹೊಸ ಬೆಳಕುಗಳನ್ನು ಕೊಡಲು ಸಾಧ್ಯವಾಗುವುದು ಅನುವಾದದ ಮೂಲಕ ಮಾತ್ರ. ಇಂಥ ಭಾಷಾ ಸೌಹಾರ್ದವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಜಗತ್ತಿನಾದ್ಯಂತ 700 ಶಾಖೆಗಳಿರುವ ಮಲೆಯಾಳಿ ಕೌನ್ಸಿಲ್ ಅತ್ಯಂತ ಶ್ಲಾಘನೀಯ ಕೆಲಸ ಮಾಡುತ್ತಿದೆ ಎಂದರು.

ADVERTISEMENT

ವರ್ಲ್ಡ್ ಮಲೆಯಾಳಿ ಕೌನ್ಸಿಲ್‌ ಇಂಡಿಯಾ ರೀಜನಲ್‌ ಚೇರ್ಮನ್ ಮೋಹನ್ ಬಿ. ನಾಯರ್, ಅಧ್ಯಕ್ಷ ಎಂ. ಪದ್ಮಕುಮಾರ್, ಕಾರ್ಯದರ್ಶಿ ರಾಮಚಂದ್ರನ್ ಪೇರಂಬ್ರಾ, ಉಪಾಧ್ಯಕ್ಷೆ ತಂಗಮಣಿ ದಿವಾಕರನ್, ಕೆ. ವಿಜಯಚಂದ್ರನ್, ಮಲಬಾರ್ ಪ್ರಾವಿನ್ಸ್ ಪದಾಧಿಕಾರಿಗಳು ಇದ್ದರು.

ಲೇಖಕಿ ಪಾರ್ವತಿ ಜಿ ಐತಾಳ್ ಅವರಿಗೆ ಶಾಲು-ಫಲಕ ಮತ್ತು ನಗದು, ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಕೋಝಿಕ್ಕೋಡಿನ ಯುವ ಸಿತಾರ್ ವಾದಕ ಇಬ್ರಾಹಿ ಅವರಿಂದ ಸಿತಾರ್ ವಾದನ, ಚಿತ್ರಗೀತೆಗಳ ಗಾಯಕಿ ಸಿಬೆಲ್ಲೋ ಸದಾನಂದ ಅವರಿಂದ ಗಾಯನ, ತಿರುವನಂತಪುರದ ನಾಟ್ಯವೇದ ಪರ್ಫಾರ್ಮಿಂಗ್ ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿನಿಯರಿಂದ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.