ADVERTISEMENT

ಮಲ್ಪೆ ಬೀಚ್‌: ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ಇರಲಿ

ಹೆಚ್ಚುವರಿ ಐವರು ಜೀವರಕ್ಷಕರ ನೇಮಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 14:51 IST
Last Updated 4 ಅಕ್ಟೋಬರ್ 2019, 14:51 IST
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಲ್ಪೆ ಅಭಿವೃದ್ದಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿದರು
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಲ್ಪೆ ಅಭಿವೃದ್ದಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿದರು   

ಉಡುಪಿ: ಮಲ್ಪೆ ಬೀಚ್‍ಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ಐವರು ಜೀವರಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮಲ್ಪೆ ಅಭಿವೃದ್ದಿ ಸಮಿತಿ ಸದಸ್ಯರಿಗೆ ಸೂಚಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಮಲ್ಪೆ ಅಭಿವೃದ್ದಿ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಪ್ರವಾಸಿಗರ ಸುರಕ್ಷತೆ ಪ್ರಥಮ ಆದ್ಯತೆಯಾಗಿರಬೇಕು. ಈ ನಿಟ್ಟಿನಲ್ಲಿ ಈಗಿರುವ ಐದು ಜನ ಜೀವರಕ್ಷಕರ ಜತೆಗೆ ಹೆಚ್ಚುವರಿ ಐದು ಮಂದಿಯನ್ನು ನೇಮಿಸಿ ಎಂದರು.

ನೇಮಕ ಮಾಡುವ ಸಿಬ್ಬಂದಿ ಜೀವ ರಕ್ಷಕ ವೃತ್ತಿ ಹಾಗೂ ಹಸಿರು ಪೋಲಿಸ್ ವೃತ್ತಿಯನ್ನು ನಿಭಾಯಿಸುವಂತೆ ಇರಬೇಕು. ತುರ್ತು ಅವಘಡಗಳು ಎದುರಾದಾಗ ಸ್ಪಂದಿಸಬೇಕು. 10 ಮಂದಿ ಕೂಡ ವರ್ಷ ಪೂರ್ತಿ ಮಲ್ಪೆ ಬೀಚ್ ಪರಿಸರದಲ್ಲೇ ಇದ್ದು, ಅವಘಡಗಳಾದಾಗ ತ್ವರಿತ ಕಾರ್ಯಾಚರಣೆ ಮಾಡಬೇಕು. ಮಲ್ಪೆ ಪೊಲೀಸ್ ಠಾಣೆಯ ಅಧಿಕಾರಿಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಡಿಸಿ ಹೇಳಿದರು.

ADVERTISEMENT

ಬೀಚ್ ಪರಿಸರದಲ್ಲಿರುವ ರಂಗಮಂಟಪದ ಅಳತೆ ಕಿರಿದಾಗಿದ್ದು, ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ನಡೆಸಲು ತೊಂದರೆಯಾಗುತ್ತಿರುವುದಾಗಿ ಶಾಸಕ ರಘುಪತಿ ಭಟ್ ತಿಳಿಸಿದರು. ಇದಕ್ಕೆ ಸ್ಪಂದಿಸಿದಜಿಲ್ಲಾಧಿಕಾರಿ ರಂಗಮಂದಿರದ ಎತ್ತರ ಮತ್ತು ಅಗಲವನ್ನು ಹೆಚ್ಚಿಸಲು ಒಪ್ಪಿಗೆ ಸೂಚಿಸಿದರು. ಜತೆಗೆ ಅಗತ್ಯ ಕಾಮಗಾರಿ ಕೈಗೊಳ್ಳಲು ನಿರ್ದೇಶಿಸಿದರು.‌

ಮಲ್ಪೆ ಬೀಚ್ ಪರಿಸರದಲ್ಲಿ ಶೌಚಾಲಯ ನಿರ್ಮಾಣ, ಕಿತ್ತು ಹೋಗಿರುವ ಟೈಲ್ಸ್‌ಗಳ ಬದಲಾಯಿಸುವಿಕೆ, ಬಯೋ ಡೈಜೆಸ್ಟ್‌ಗಳ ನಿರ್ಮಾಣ, ಇಂಟರ್ ಲಾಕ್ ಅಳವಡಿಕೆ, ಅನಧಿಕೃತ ಶೆಡ್‍ಗಳ ತೆರವು, ಪಾರ್ಕಿಂಗ್‌ ಮತ್ತು ಅಂಗಡಿ ಸಮಸ್ಯೆಗಳ ಬಗ್ಗೆ ಸ್ಥಳ ಪರಿಶೀಲನೆ ನಡಸಲಾಗುವುದು ಎಂದು ತಿಳಿಸಿದರು.

ಮಲ್ಪೆ ಬೀಚ್‍ನಲ್ಲಿ ಚಟುವಟಿಕೆಗಳನ್ನು ನಡೆಸಲು ಗುತ್ತಿಗೆ ಪಡೆದಿರುವವರು ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಅವರ ಗುತ್ತಿಗೆಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಪೌರಾಯುಕ್ತ ಆನಂದ ಕಲ್ಲೋಳಿಕರ್, ಶಾಸಕ ರಘುಪತಿ ಭಟ್, ಯಶ್ ಪಾಲ್ ಸುವರ್ಣ ಮತ್ತು ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.