ಕಾರ್ಕಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಕುಂಟಲ್ಪಾಡಿ ಮುಖ್ಯ ರಸ್ತೆ ಬದಿಯಲ್ಲಿ ಮಂಗಳವಾರ ನಸುಕಿನ ವೇಳೆ ವ್ಯಕ್ತಿಯೊಬ್ಬರನ್ನು ಇರಿದು ಕೊಲೆ ಮಾಡಲಾಗಿದೆ.
ಕುಂಟಲ್ಪಾಡಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಮಂಗಳೂರಿನ ಪಡೀಲ್ ನಿವಾಸಿ ನವೀನ ಪೂಜಾರಿ (50) ಕೊಲೆಯಾದವರು.
ಈ ಸಂಬಂಧ ಕುಂಟಲ್ಪಾಡಿಯ ಧೂಪದಕಟ್ಟೆ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿರುವ ಪರೀಕ್ಷಿತ (44) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ಕುಂಟಲ್ಪಾಡಿಯ ರಸ್ತೆ ಬದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಪರಿಶೀಲಿಸಿದಾಗ ಇರಿದು ಹತ್ಯೆ ಮಾಡಿರುವುದಾಗಿ ಕಂಡು ಬಂದಿದೆ. ಬಳಿಕ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ಆರೋಪಿ ಪರೀಕ್ಷಿತನನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
‘ಆರೋಪಿ ಪರೀಕ್ಷಿತ ಮಂಗಳೂರಿನಲ್ಲಿ ಬಸ್ ಚಾಲಕನಾಗಿದ್ದು ಪತ್ನಿಗೆ ವಿಚ್ಚೇದನ ನೀಡಿ ಒಂಟಿಯಾಗಿ ವಾಸಿಸುತ್ತಿದ್ದ. ಕೊಲೆಯಾದ ನವೀನ ಪೂಜಾರಿ ಕೂಡ ಕಳೆದ ಮೂರ್ನಾಲ್ಕು ವರ್ಷಗಳಿಂದ ಹೆಂಡತಿ, ಮಕ್ಕಳಿಂದ ದೂರವಿದ್ದರು’ ಎಂದು ಹೇಳಿದ್ದಾರೆ.
‘ಪರೀಕ್ಷಿತನ ಸ್ನೇಹಿತೆಯೊಂದಿಗೆ ನವೀನ ಅವರು ಗೆಳೆತನ ಬೆಳೆಸಲು ಪ್ರಯತ್ನಿಸಿದ್ದರು. ಇದು ಆತನಿಗೆ ಇಷ್ಟವಿರಲಿಲ್ಲ. ಈ ಕಾರಣಕ್ಕೆ ವಾಗ್ವಾದ ನಡೆದು ನವೀನ ಅವರನ್ನು ಕೊಲೆ ಮಾಡಲಾಗಿದೆ’ ಎಂದೂ ತಿಳಿಸಿದರು.
ಹತ್ಯೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಎಎಸ್‌ಪಿ ಹರ್ಷ ಪ್ರಿಯಂವದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.