
ಉಡುಪಿ: ಸರ್ಕಾರಿ ಕಚೇರಿ ಹಾಗೂ ಖಾಸಗಿ ಸಂಸ್ಥೆಗಳ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಗೆ ಉದ್ಯೋಗ ಅರಸಿ ಬಂದಿರುವ ಹೊರ ರಾಜ್ಯದ ಅನ್ಯ ಭಾಷಿಕರಿಗೂ ನಮ್ಮ ಭಾಷೆಯನ್ನು ಕಲಿಯುವಂತೆ ಉತ್ತೇಜಿಸಬೇಕು. ಎಲ್ಲಾ ಸರ್ಕಾರಿ ಕಚೇರಿಯ ಆಡಳಿತದಲ್ಲಿ ಕನ್ನಡ ಬಳಸಬೇಕು. ಆಡಳಿತದಲ್ಲಿ ಕನ್ನಡ ತಂತ್ರಾಶದ ಬಳಕೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ರಾಜ್ಯದ ಸರ್ಕಾರಿ ಕಚೇರಿಗಳು, ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಅಂಗಡಿ, ಹೋಟೆಲ್, ಶಾಲಾ-ಕಾಲೇಜು, ಪ್ರವಾಸಿ ಸ್ಥಳಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂಬ ನಿಯಮವಿದೆ. ಅದನ್ನು ಉಲ್ಲಂಘಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕನ್ನಡ ಭಾಷೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇಲಾಖೆಗಳು ಸರ್ಕಾರೇತರ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಸಾಹಿತಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮೊದಲಾದವರ ಕುರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾದ ಊರುಗಳ ಹೆಸರಿರುವ ಫಲಕಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮಾಹಿತಿಯು ಹೊಂದಾಣಿಕೆಯಿಲ್ಲದೆ ಗೊಂದಲದಿಂದ ಕೂಡಿದೆ. ಅದಕ್ಕೆ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲಾಗುತ್ತದೆಯೋ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು. ಕೆಲವು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆ ಮಾತನಾಡುವ ಮಕ್ಕಳ ಮೇಲೆ ದಂಡ ವಿಧಿಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಕನ್ನಡ ಭಾಷೆ, ಕನ್ನಡ ಶಾಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕು. ಶತಮಾನ ಕಂಡ ಶಾಲೆಗಳು ಜಿಲ್ಲೆಯಲ್ಲಿ ಬಹುತೇಕ ಇವೆ. ಅವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಅಗತ್ಯ ಮೂಲ ಸೌಕರ್ಯ, ಗ್ರಂಥಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿ, ಮಕ್ಕಳಲ್ಲಿ ಕನ್ನಡ ಶಾಲೆಯ ಬಗ್ಗೆ ಒಲವು ಮೂಡಿಸಬೇಕು ಎಂದರು.
ಕನ್ನಡ ಜಾಗೃತಿ ಸಮಿತಿಯ ಸದಸ್ಯ ಮುಸ್ತಾಕ ಹೆನ್ನಾಬೈಲ್, ಅವಿನಾಶ್ ಕಾಮತ್, ಗಣೇಶ್ ಮೆಂಡನ್, ವಾಸುದೇವ ಗಂಗೇರ ಹಾಗೂ ಜಮಾಲ್ ಎ., ಪೌರಾಯುಕ್ತ ಮಹಾಂತೇಶ ಹಂಗರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.
‘ಬ್ಯಾಂಕ್ ಸಿಬ್ಬಂದಿಗೆ ಕನ್ನಡ ಕಲಿಸಿ’
ಆಸ್ಪತ್ರೆಗಳಲ್ಲಿ ವೈದ್ಯರು ನೀಡುವ ಚೀಟಿಗಳಲ್ಲಿ ರೋಗಿಗಳ ಹೆಸರುಗಳನ್ನು ಕನ್ನಡ ಭಾಷೆಯಲ್ಲಿ ನಮೂದಿಸಬೇಕು. ಬ್ಯಾಂಕ್‌ಗಳಲ್ಲಿ ನೇಮಕವಾಗಿರುವ ಅಧಿಕಾರಿಗಳು ಬಹುತೇಕರು ಬೇರೆ ರಾಜ್ಯದವರೇ ಆಗಿರುವುದರಿಂದ ಅವರಿಗೆ ಸ್ಥಳೀಯ ಗ್ರಾಹಕರೊಂದಿಗೆ ಸಂವಹನ ಮಾಡಲು ಕಷ್ಟವಾಗುತ್ತಿದೆ. ಇದು ಗ್ರಾಮೀಣ ಭಾಗದ ಜನರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ. ಅದ್ದರಿಂದ ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಕನ್ನಡ ಕಲಿಸುವ ತರಗತಿಗಳನ್ನು ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ದ್ವಿ ಭಾಷಾ ನೀತಿಯನ್ನು ಅನುಷ್ಠಾನ ಮಾಡಿಲಾಗಿದೆ. ನಾಟಕ ಯಕ್ಷಗಾನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಒಲವು ಮೂಡಿಸಬೇಕು.– ಸ್ವರೂಪಾ ಟಿ.ಕೆ., ಜಿಲ್ಲಾಧಿಕಾರಿ