ADVERTISEMENT

ಉಡುಪಿ |ನೆತ್ತಿಯ ಮೇಲೆ ಡೇಂಜರ್ ಸಿಗ್ನಲ್‌ : ಸಾರ್ವಜನಿಕರ ಪ್ರಾಣಕ್ಕೆ ಕುತ್ತು

ರಸ್ತೆಯಿಂದ ಮೇಲೆದ್ದು ಬಂದ ಮ್ಯಾನ್‌ಹೋಲ್‌ಗಳು

ಬಾಲಚಂದ್ರ ಎಚ್.
Published 11 ಡಿಸೆಂಬರ್ 2023, 8:03 IST
Last Updated 11 ಡಿಸೆಂಬರ್ 2023, 8:03 IST
ಉಡುಪಿ ನಗರದಲ್ಲಿರುವ ಅಪಾಯಕಾರಿ ಟ್ರಾಫಿಕ್ ಸಿಗ್ನಲ್‌
ಉಡುಪಿ ನಗರದಲ್ಲಿರುವ ಅಪಾಯಕಾರಿ ಟ್ರಾಫಿಕ್ ಸಿಗ್ನಲ್‌   

ಉಡುಪಿ: ಕೆಟ್ಟುನಿಂತು ಅಪಾಯಕಾರಿ ಸ್ಥಿತಿಯಲ್ಲಿರುವ ಟ್ರಾಫಿಕ್ ಸಿಗ್ನಲ್‌ಗಳು, ರಸ್ತೆಯಿಂದ ಮೇಲೆದ್ದುಬಂದ ಮ್ಯಾನ್‌ಹೋಲ್‌ಗಳು, ಪಾದಚಾರಿ ಮಾರ್ಗಗಳಲ್ಲಿ ಕುಸಿದಿರುವ ಸ್ಲಾಬ್‌ಗಳು ಸಾರ್ವಜನಿಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿವೆ. ನಗರದ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ, ಪಾದಚಾರಿ ಮಾರ್ಗಗಳಲ್ಲಿ ಸಂಚರಿಸುವಾಗ ನಾಗರಿಕರು ಸ್ವಲ್ಪ ಎಚ್ಚರ ತಪ್ಪಿದರೂ ಆಪತ್ತು ಮೈಮೇಲೆ ಎರಗುವುದು ಖಚಿತ.

ದಶಕಗಳ ಹಿಂದೆ ಸಂಚಾರ ದಟ್ಟಣೆ ನಿಯಂತ್ರಿಸಲು ಉಡುಪಿ ನಗರದಲ್ಲಿ ಅಳವಡಿಸಲಾಗಿದ್ದ ಟ್ರಾಫಿಕ್ ಸಿಗ್ನಲ್‌ಗಳು ಕೆಟ್ಟು ಹಲವು ವರ್ಷಗಳೇ ಕಳೆದಿವೆ. ಬಹುತೇಕ ಸಿಗ್ನಲ್‌ಗಳು ತುಕ್ಕುಹಿಡಿದು ಬೀಳುವ ಹಂತ ತಲುಪಿವೆ. ಜೋಡುಕಟ್ಟೆ, ಕೋರ್ಟ್‌ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಈಗಾಗಲೇ ಸಿಗ್ನಲ್‌ಗಳು ಬಿದ್ದು ಆತಂಕ ಸೃಷ್ಟಿಸಿವೆ.

ಕರಾವಳಿ ಬೈಪಾಸ್‌, ಕಲ್ಸಂಕ, ನರ್ಮ್‌ ಹಾಗೂ ಸಿಟಿ ಬಸ್‌ ನಿಲ್ದಾಣದ ಎದುರು, ಕೆಎಂ ಮಾರ್ಗ, ಕೋರ್ಟ್ ಸರ್ಕಲ್‌, ನಗರಸಭೆ ಎದುರು ಹೀಗೆ ನಗರದ ಹಲವು ಕಡೆಗಳಲ್ಲಿರುವ ಟ್ರಾಫಿಕ್ ಸಿಗ್ನಲ್‌ಗಳು ದುಸ್ಥಿತಿಯಲ್ಲಿದ್ದು ಯಾವುದೇ ಕ್ಷಣದಲ್ಲೂ ಸಾರ್ವಜನಿಕರ ಮೇಲೆ ಬೀಳುವ ಅಪಾಯ ಎದುರಾಗಿದೆ.

ADVERTISEMENT

ಕೆಲವು ಕಡೆ ಸಿಗ್ನಲ್‌ಗಳು ಬಾಗಿಕೊಂಡಿದ್ದು ತೀರಾ ಅಪಾಯಕಾರಿ ಸ್ಥಿತಿಯಲ್ಲಿದ್ದು ಆತಂಕ ಸೃಷ್ಠಿಸುತ್ತಿವೆ. ಇಷ್ಟಾದರೂ ನಗರದ ಅಂದಗೆಡಿಸುತ್ತಿರುವ ಟ್ರಾಫಿಕ್ ಸಿಗ್ನಲ್‌ಗಳನ್ನು ನಗರಸಭೆಯಾಗಲಿ, ಪೊಲೀಸ್ ಇಲಾಖೆಯಾಗಲಿ ತೆರವುಗೊಳಿಸಲು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಉಡುಪಿಯ ದುರ್ಗಾ ಇಂಟರ್‌ನ್ಯಾಷನಲ್‌ ಹೋಟೆಲ್ ಎದುರು ದುಸ್ಥಿತಿಯಲ್ಲಿರುವ ಟ್ರಾಫಿಕ್ ಸಿಗ್ನಲ್‌

ನಗರದ ಎಲ್ಲ ಟ್ರಾಫಿಕ್ ಸಿಗ್ನಲ್‌ಗಳು ತುಕ್ಕುಹಿಡಿದಿದ್ದು ಮರುಬಳಕೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಗೆ ತಲುಪಿದ್ದು, ಮಳೆಗಾಳಿಗೆ ಮುರಿದು ಬೀಳುವ ಹಂತಕ್ಕೆ ಮುಟ್ಟಿವೆ. ಮುಂದಿನ ಮಳೆಗಾಲಕ್ಕೆ ಮುನ್ನ ತೆರವುಗೊಳಿಸದಿದ್ದರೆ ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ಆತಂಕ ಹೆಚ್ಚಾಗಿದೆ ಎನ್ನುತ್ತಾರೆ ಸವಾರರು.

ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್‌ ವಿಳಂಬ: ಉಡುಪಿ ಹಾಗೂ ಮಣಿಪಾಲ ನಗರ ವ್ಯಾಪ್ತಿಯ ಕಲ್ಸಂಕ ಜಂಕ್ಷನ್, ಹಳೆ ಡಯಾನ ಸರ್ಕಲ್, ತ್ರಿವೇಣಿ ಜಂಕ್ಷನ್, ಜೋಡುಕಟ್ಟೆ, ಬನ್ನಂಜೆ ಸರ್ಕಲ್‌, ಎಂಜಿಎಂ ಕಾಲೇಜು, ಶಿರಿಬೀಡು, ಕರಾವಳಿ, ಬಲೈಪಾದೆ, ಅಂಬಲಪಾಡಿ, ಅಂಬಾಗಿಲು ಜಂಕ್ಷನ್, ಸಂತೆಕಟ್ಟೆ, ಮಣಿಪಾಲದ ಸಿಂಡಿಕೇಟ್ ಸರ್ಕಲ್‌, ಟೈಗರ್ ಸರ್ಕಲ್‌, ಎಂಐಟಿ ಸರ್ಕಲ್‌ನಲ್ಲಿ ಸ್ಮಾರ್ಟ್‌ ಟ್ರಾಫಿಕ್ ಸಿಗ್ನಲ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು 4 ವರ್ಷ ಕಳೆದರೂ ಪೂರ್ಣಗೊಂಡಿಲ್ಲ.

ನಗರಸಭೆ ಹಾಗೂ ಟೆಂಡರ್‌ ಪಡೆದಿರುವ ಸಂಸ್ಥೆಯ ನಡುವಿನ ತಿಕ್ಕಾಟದಿಂದ ಸದ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳೂ ಕಾಣುತ್ತಿಲ್ಲ. 15 ಟ್ರಾಫಿಕ್ ಸಿಗ್ನಲ್‌ಗಳ ಪೈಕಿ ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಲ್ಲಿ ಒಂದು ಸಿಗ್ನಲ್‌ ಮಾತ್ರ ಕೆಲವು ದಿನಗಳ ಕಾಲ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಿದ್ದು ಬಿಟ್ಟರೆ ಬೇರೆಲ್ಲೂ ಆರಂಭಗೊಂಡಿಲ್ಲ.

ಉಡುಪಿ ಹಾಗೂ ಮಣಿಪಾಲ ನಗರದ ಹಲವು ಕಡೆಗಳಲ್ಲಿ ಸ್ಮಾರ್ಟ್‌ ಟ್ರಾಫಿಕ್‌ ಸಿಗ್ನಲ್‌ಗಳನ್ನು ಅಳವಡಿಸಿದ್ದರೂ ಕಾರ್ಯ ನಿರ್ವಹಿಸದೆ ಇದ್ದೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸಂಚಾರ ದಟ್ಟಣೆ ವಿಪರೀತವಾಗಿದೆ.

ಕಿನ್ನಿಮೂಲ್ಕಿ ಬಳಿ ಪಾದಚಾರಿ ಮಾರ್ಗದ ಸ್ಲಾಬ್ ಮುರಿದುಬಿದ್ದಿರುವುದು

ಹೊರ ರಾಜ್ಯ, ಜಿಲ್ಲೆಗಳಿಂದಲೂ ಜಿಲ್ಲೆಯ ಪ್ರವಾಸಿತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ನಿತ್ಯವೂ ಸಂಚಾರ ಕಿರಿಕಿರಿ ಉಂಟಾಗುತ್ತಿದ್ದು ಶೀಘ್ರ ಸ್ಮಾರ್ಟ್‌ ಸಿಗ್ನಲ್‌ಗಳು ಕಾರ್ಯ ನಿರ್ವಹಿಸಿದರೆ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ. ಜತೆಗೆ, ಅಪಾಯಕಾರಿ ಸ್ಥಿತಿಯಲ್ಲಿರುವ ಹಳೆಯ ಟ್ರಾಫಿಕ್ ಸಿಗ್ನಲ್‌ಗಳನ್ನು ತೆರವುಗೊಳಿಸಬೇಕು ಎನ್ನುತ್ತಾರೆ ಸವಾರ ಶ್ರೀನಿವಾಸ್ ನಾಯಕ್‌.

ಉಡುಪಿ–ಮಣಿಪಾಲ ಮಧ್ಯೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 169 ‘ಎ’ ಹಾಗೂ ನಗರದ ರಸ್ತೆಗಳಲ್ಲಿ ಮ್ಯಾನ್‌ಹೋಲ್‌ಗಳು ರಸ್ತೆಯ ಮೇಲ್ಮೈ ಮಟ್ಟಕ್ಕಿಂತ ಮೇಲೆದ್ದು ಬಂದಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆಯಲ್ಲಿ ಹೋಗುವಾಗ ಏಕಾಏಕಿ ಎದುರಾಗುವ ಮ್ಯಾನ್‌ಹೋಲ್‌ಗಳು ಅಪಘಾತಗಳಿಗೆ ಕಾರಣವಾಗುತ್ತಿವೆ.

ಕೆಲವು ಕಡೆ ಮ್ಯಾನ್‌ಹೋಲ್‌ಗಳು ರಸ್ತೆ ಮೇಲ್ಮೈನಲ್ಲಿದ್ದರೆ, ಕೆಲವು ಕಡೆಗಳಲ್ಲಿ ಗುಂಡಿಗಳ ಒಳಗೆ ಇವೆ. ರಾತ್ರಿಯ ಹೊತ್ತು ಮುಖ್ಯವಾಗಿ ಬೈಕ್‌ನಲ್ಲಿ ಸಾಗುವವರಿಗೆ ಅವೈಜ್ಞಾನಿಕ ಮ್ಯಾನ್‌ಹೋಲ್‌ಗಳು ಮೃತ್ಯು ಗುಂಡಿಗಳಾಗಿ ಕಾಡುತ್ತಿವೆ. ರಸ್ತೆ ಕಾಮಗಾರಿ ಮಾಡುವಾಗ ರಸ್ತೆಯ ಮೇಲ್ಮೈಗೆ ಸರಿಹೊಂದುವಂತೆ ಮ್ಯಾನ್‌ಹೋಲ್‌ಗಳನ್ನು ಅಳವಡಿಸದ ಪರಿಣಾಮ ಸಮಸ್ಯೆ ಸೃಷ್ಟಿಯಾಗಿದೆ.

ಉಡುಪಿಯ ಸ್ವಾದಿಷ್ಟ್ ಹೋಟೆಲ್ ಬಳಿ ಪಾದಚಾರಿ ರಸ್ತೆಗೆ ಅಡ್ಡಲಾಗಿರುವ ವಿದ್ಯುತ್ ಟ್ರಾನ್ಸ್‌ಫರಂ
‘ಪೊಲೀಸ್ ಇಲಾಖೆಯಿಂದ ಅಳವಡಿಕೆ’
ದಶಕಗಳ ಹಿಂದೆ ಪೊಲೀಸ್ ಇಲಾಖೆಯಿಂದ ಉಡುಪಿ ಹಾಗೂ ಮಣಿಪಾಲ ನಗರದ ಹಲವು ಕಡೆಗಳಲ್ಲಿ ಅಳವಡಿಸಿದ್ದ ಟ್ರಾಫಿಕ್ ಸಿಗ್ನಲ್‌ಗಳು ಕೆಟ್ಟುಹೋಗಿವೆ. ಎಲ್ಲ ಟ್ರಾಫಿಕ್ ಸಿಗ್ನಲ್‌ಗಳು ದುಃಸ್ಥಿತಿಯಲ್ಲಿದ್ದು ಅಪಾಯಕಾರಿ ಸ್ಥಿತಿಯಲ್ಲಿರುವುದು ನಗರಸಭೆಯ ಗಮನಕ್ಕೆ ಬಂದಿದ್ದು ಈಗಾಗಲೇ ಕೆಲವು ಸಿಗ್ನಲ್‌ಗಳನ್ನು ತೆರವುಗೊಳಿಸಲಾಗಿದೆ. ಪೊಲೀಸ್ ಇಲಾಖೆ ನಗರಸಭೆಗೆ ಮನವಿ ಸಲ್ಲಿಸಿದರೆ ತಕ್ಷಣ ಎಲ್ಲ ಸಿಗ್ನಲ್‌ಗಳನ್ನು ತೆರವುಗೊಳಿಸಲಾಗುವುದು. ಪರ್ಯಾಯ ಮಹೋತ್ಸವ ಆರಂಭವಾಗುವುದರೊಳಗೆ ತೆರವು ಕಾರ್ಯ ಪೂರ್ಣವಾಗಲಿದೆ.
‘ಅವೈಜ್ಞಾನಿಕ ಕಾಮಗಾರಿ’
ಬೆಳೆಯುತ್ತಿರುವ ಉಡುಪಿ ನಗರಕ್ಕೆ ಸ್ಮಾರ್ಟ್‌ ಟ್ರಾಫಿಕ್ ಸಿಗ್ನಲ್‌ಗಳ ಅಗತ್ಯವನ್ನು ಮನಗಂಡು ಹಿಂದೆ ಯೋಜನೆ ಸಿದ್ಧಪಡಿಸಿ ಉಡುಪಿ ಹಾಗೂ ಮಣಿಪಾಲದ 15 ಕಡೆಗಳಲ್ಲಿ ಎಲ್‌ಇಸಿ ಪರದೆ ಸಹಿತ ಸ್ಮಾರ್ಟ್‌ ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆ ಕಾಮಗಾರಿಗೆ ಮುಂಬೈ ಮೂಲದ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಆದರೆ ಕೆಲವು ಕಡೆ ಅವೈಜ್ಞಾನಿಕವಾಗಿ ಅಗತ್ಯಕ್ಕಿಂತ ದೊಡ್ಡದಾಗಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದ್ದು ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾಗಿವೆ. ಹಾಗಾಗಿ ಯೋಜನೆಯಲ್ಲಿ ಕೆಲವು ಮಾರ್ಪಾಡು ಮಾಡಲಾಗಿದ್ದು ಆಯಾ ಪ್ರದೇಶಕ್ಕೆ ತಕ್ಕಂತೆ ಗಾತ್ರದಲ್ಲಿ ಬದಲಾವಣೆ ಮಾಡಿ ಅಳವಡಿಸುವಂತೆ ಗುತ್ತಿಗೆ ಸಂಸ್ಥೆಗೆ ಸೂಚಿಸಲಾಗಿದೆ. ಶೀಘ್ರ ಕಾಮಗಾರಿ ಮುಕ್ತಾಯವಾಗಲಿದೆ. ರಾಯಪ್ಪ ನಗರಸಭೆ ಪೌರಾಯುಕ್ತ

ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ಕಂಬ ಟ್ರಾನ್ಸ್‌ಫರಂ

ಉಡುಪಿ–ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಪಾದಚಾರಿ ಮಾರ್ಗದ ಮಧ್ಯೆಯೇ ವಿದ್ಯುತ್ ಕಂಬ ಹಾಗೂ ಅಲ್ಲಲ್ಲಿ ಟ್ರಾನ್ಸ್‌ಫರಂ ಅಳವಡಿಕೆ ಮಾಡಲಾಗಿದೆ. ಪರಿಣಾಮ ಪಾದಚಾರಿಗಳು ಮಾರ್ಗಬಿಟ್ಟು ಹೆದ್ದಾರಿ ಮೇಲೆ ನಡೆಯಬೇಕಾಗಿದೆ. ಅಂಗವಿಕಲರು ದೃಷ್ಟಿಮಾಂಧ್ಯರು ಪಾದಚಾರಿ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲದಂತಾಗಿದೆ. ಜೋಡುಕಟ್ಟೆಯಿಂದ ಕಿನ್ನಿಮೂಲ್ಕಿಗೆ ಸಾಗುವ ರಸ್ತೆಯಲ್ಲಿರುವ ಪಾದಚಾರಿ ಮಾರ್ಗದಲ್ಲಿ ಅಲ್ಲಲ್ಲಿ ಸ್ಲಾಬ್‌ಗಳು ಕುಸಿದುಹೋಗಿದ್ದು ನಡೆಯುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಮೂರು ಅಡಿ ಆಳದ ಚರಂಡಿಗೆ ಪಾದಚಾರಿಗಳು ಬೀಳಬೇಕಾಗಿದೆ.

‘ಅವೈಜ್ಞಾನಿಕ ಮ್ಯಾನ್‌ಹೋಲ್‌ ಜೀವಕ್ಕೆ ಸಂಚಕಾರ’

ಕುಂದಾಪುರ ತಾಲ್ಲೂಕಿನಲ್ಲೂ ಹಲವು ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಟ್ರಾಫಿಕ್ ಸಿಗ್ನಲ್‌ಗಳು ಪ್ರಾಯೋಗಿಕವಾಗಿ ಕೆಲವು ದಿನವಷ್ಟೇ ಕಾರ್ಯ ನಿರ್ವಹಿಸಿ ನಂತರ ದುಃಸ್ಥಿತಿಗೆ ಸಿಲುಕಿದ್ದರಿಂದ ತೆರವುಗೊಳಿಸಲಾಗಿದೆ. ನಂತರ ಮರು ಅಳವಡಿಕೆ ಮಾಡಲಾಗಿಲ್ಲ. ಹೆಚ್ಚುತ್ತಿರುವ ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಪಟ್ಟಣ ವ್ಯಾಪ್ತಿಯಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಬೇಕು ಎಂಬ ಬೇಡಿಕೆಗೆ ಸ್ಪಂದನ ದೊರೆತಿಲ್ಲ. ಕುಂದಾಪುರ ತಾಲ್ಲೂಕಿನಲ್ಲೂ ಅವೈಜ್ಞಾನಿಕ ಮ್ಯಾನ್‌ಹೋಲ್‌ಗಳು ಸವಾರರ ಜೀವಕ್ಕೆ ಸಂಚಕಾರವಾಗಿ ಕಾಡುತ್ತಿವೆ. ಹಲವು ವರ್ಷಗಳ ಹಿಂದೆ ಎಡಿಬಿ ಅನುದಾನದಲ್ಲಿ ಕುಂದಾಪುರದ ಚಿಕನ್‌ಸಾಲ್ ರಸ್ತೆ ಸೇರಿದಂತೆ ಹಲವು ಕಡೆ ಸುಸಜ್ಜಿತ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಬಳಿಕ ಒಳಚರಂಡಿ ಕಾಮಗಾರಿಗೆ ರಸ್ತೆಯನ್ನು ಬಗೆದು ಅವೈಜ್ಞಾನಿಕವಾಗಿ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದ ಕೆಲವು ಕಡೆ ರಸ್ತೆಗಿಂತ ಎತ್ತರದಲ್ಲಿ ಕೆಲವು ಕಡೆ ರಸ್ತೆಗಿಂತ ಕೆಳಗೆ ಮ್ಯಾನ್‌ಹೋಲ್‌ಗಳಿದ್ದು ಆಗಾಗ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.