ADVERTISEMENT

ಉಡುಪಿ| ಪರಿಸರ ಜಾಗೃತಿ ಸಂದೇಶ: ಉತ್ಸಾಹದ ಓಟ

ಮಣಿಪಾಲ ಮ್ಯಾರಥಾನ್: 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 7:47 IST
Last Updated 9 ಫೆಬ್ರುವರಿ 2026, 7:47 IST
ಮಣಿಪಾಲ ಮ್ಯಾರಥಾನ್‌ಗೆ ಚಾಲನೆ ನೀಡಲಾಯಿತು
ಮಣಿಪಾಲ ಮ್ಯಾರಥಾನ್‌ಗೆ ಚಾಲನೆ ನೀಡಲಾಯಿತು   

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ (ಮಾಹೆ) ವತಿಯಿಂದ ಭಾನುವಾರ ಜರುಗಿದ 8ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್ ದೇಶ, ವಿದೇಶದ ಕ್ರೀಡಾಪಟುಗಳ ಉತ್ಸಾಹದ ಓಟಕ್ಕೆ ಸಾಕ್ಷಿಯಾಯಿತು.

ಮ್ಯಾರಥಾನ್‌ನಲ್ಲಿ 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಅಥ್ಲೀಟ್‌ಗಳು ಸೇರಿದಂತೆ ಒಟ್ಟು 20 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು ₹25 ಲಕ್ಷಕ್ಕೂ ಅಧಿಕ ಮೊತ್ತದ ನಗದು ಬಹುಮಾನಗಳನ್ನು ನೀಡಲಾಯಿತು.

‘ಹಸಿರು ಭವಿಷ್ಯಕ್ಕಾಗಿ ಹೆಜ್ಜೆಗಳು - ಸುಸ್ಥಿರ ಭವಿಷ್ಯಕ್ಕಾಗಿ ಓಟ’ ಎಂಬ ಧ್ಯೇಯವಾಕ್ಯದೊಂದಿಗೆ ಈ ಮ್ಯಾರಥಾನ್‌ ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಮ್ಯಾರಥಾನ್‌ನ 8ನೇ ಆವೃತ್ತಿಗೆ ವ್ಯಕ್ತವಾಗಿರುವ ಅಭೂತಪೂರ್ವ ಸ್ಪಂದನ ಶಿಕ್ಷಣದ ಜೊತೆಗೆ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಮಾಹೆಯ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ ಎಂದರು.

ಕೇವಲ ವಿದ್ಯಾರ್ಥಿಗಳ ಕಾರ್ಯಕ್ರಮವಾಗಿ ಆರಂಭವಾದ ಮ್ಯಾರಥಾನ್‌, ಭಾರತದ ಅತಿದೊಡ್ಡ ಸಮುದಾಯ ಫಿಟ್‌ನೆಸ್ ಕಾರ್ಯಕ್ರಮಗಳಲ್ಲಿ ಒಂದಾಗಿ ಇಂದು ಬೆಳೆದಿದೆ ಎಂದು ಹೇಳಿದರು.

ದುಬೈ, ಇಂಗ್ಲೆಂಡ್, ಇಥಿಯೋಪಿಯ, ಜರ್ಮನಿ, ಕೀನ್ಯಾ, ಜಪಾನ್, ಮಲೇಷ್ಯಾ, ನೇಪಾಳ, ಶ್ರೀಲಂಕಾ ಮತ್ತು ಅಮೆರಿಕ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳ 100ಕ್ಕೂ ಅಧಿಕ ಅಂತರರಾಷ್ಟ್ರೀಯ ಅಥ್ಲೀಟ್‌ಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸುವ ಮೂಲಕ ಈ ಕ್ರೀಡಾಕೂಟಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದಾರೆ ಎಂದರು.

ಫುಲ್‌ ಮ್ಯಾರಥಾನ್‌ ಅನ್ನು ಕಡಲತೀರದ ಮಾರ್ಗದ ಮೂಲಕ ಹಮ್ಮಿಕೊಳ್ಳಲಾಗಿತ್ತು. 10 ಕಿ.ಮೀ. ಓಟದ ಮಾರ್ಗವು ಮಣಿಪಾಲ ಹಾಸ್ಪಿಸ್ ರೆಸ್ಪೈಟ್ ಸೆಂಟರ್ ದಾರಿಯಾಗಿ ನಡೆದಿದೆ ಎಂದು ತಿಳಿಸಿದರು.

ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ ಎಂ. ಡಿ. ವೆಂಕಟೇಶ್ , ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ. ಶರತ್ ರಾವ್, ಮಂಗಳೂರು ಕ್ಯಾಂಪಸ್‌ನ ಸಹ ಕುಲಪತಿ ಡಾ. ದಿಲೀಪ್ ನಾಯ್ಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್, ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯದ ಕುಲಪತಿ ಡಾ. ಗೋಪಾಲಕೃಷ್ಣ ಪ್ರಭು ಉಪಸ್ಥಿತರಿದ್ದರು.

ಫಲಿತಾಂಶ: 5 ಕೆ ಓಟ: ಪುರುಷರ ವಿಭಾಗ: ನಾಗರಾಜ್‌ ದಿವಾತೆ–1, ಕಾಲ: 16:58, ರಂಗ–2, ಮಂಜುನಾಥ್‌ ಬೇಳೂರಪ್ಪನವರ್‌ –3, ಮಹಿಳಾ ವಿಭಾಗ: ನಾಗಿಣಿ–1. ಕಾಲ: 20:55, ಎಚ್‌.ವಿ. ದೀಕ್ಷಾ –2, ರೇಖಾ ಬಿ.ಪಿ.–3.

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಸೇರಿದ್ದ ಜನ
ಪುರುಷರ ಹಾಫ್‌ ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ ಪಡೆದ ರಿಜ್ವಾನ್‌ ಅಲಿ
ಮಹಿಳೆಯರ ಹಾಫ್‌ ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ ಪಡೆದ ಭಾವನಾ ನೇಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.