ADVERTISEMENT

ವೇಷಗಳು ಹಲವು: ಉದ್ದೇಶ ಒಂದೇ

ಜನ್ಮಾಷ್ಟಮಿಗೆ ಬಗೆಬಗೆಯ ವೇಷ ಹಾಕಿದ ಕಲಾವಿದರು: ಸಾಮಾಜಿಕ ಕಾರ್ಯಗಳಿಗೆ ದೇಣಿಗೆ ಬಳಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 13:49 IST
Last Updated 2 ಸೆಪ್ಟೆಂಬರ್ 2018, 13:49 IST
ಕಾರ್ಕೋಟಕ ವೇಷದಲ್ಲಿ ರಂಗಭೂಮಿಯ ರಾಮಾಂಜಿ
ಕಾರ್ಕೋಟಕ ವೇಷದಲ್ಲಿ ರಂಗಭೂಮಿಯ ರಾಮಾಂಜಿ   

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಉತ್ಸವ ಎಂದರೆ ವೇಷಗಳ ಹಬ್ಬ ಎಂದೇ ಪ್ರಸಿದ್ಧ. ಕೃಷ್ಣನ ಕಣ್ತುಂಬಿಕೊಳ್ಳಲು ಭಕ್ತಸಾಗರ ಒಂದೆಡೆ ಸೇರಿದರೆ, ಬಗೆಬಗೆಯ ವೇಷಧಾರಿಗಳನ್ನು ನೋಡಲು ಜನರು ಮುಗಿಬೀಳುತ್ತಾರೆ. ಅಷ್ಟಮಿಗೆ ಊರಿಗೆ ಊರೇ ವೇಷ ಹಾಕಿದಂತೆ ಕಾಣುತ್ತದೆ.

ಈ ಬಾರಿಯ ಅಷ್ಟಮಿಯಲ್ಲೂ ನಗರದ ಬೀದಿಗಳಲ್ಲಿ ವೇಷಧಾರಿಗಳೇ ತುಂಬಿಕೊಂಡಿದ್ದರು. ವಿಶೇಷ ಅಂದರೆ, ಈ ಬಾರಿ ಬಹುತೇಕ ವೇಷಧಾರಿಗಳು ಸಾಮಾಜಿಕ ಕಳಕಳಿಯ ಸಂದೇಶ ಹೊತ್ತು ವೇಷ ಹಾಕಿದ್ದಾರೆ. ಅಂಥವರ ಸಾಲಿನಲ್ಲಿರುವುದು ‘ನಮ್ಮ ಭೂಮಿ’ ಸಂಸ್ಥೆಯ ರಾಮಾಂಜಿ.

ಕಳೆದ 5 ವರ್ಷಗಳಿಂದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಳಕಳಿಯ ಉದ್ದೇಶವನ್ನಿಟ್ಟುಕೊಂಡು ಅಷ್ಟಮಿಗೆ ವಿವಿಧ ವೇಷ ಹಾಕುತ್ತಿದ್ದಾರೆ ರಾಮಾಂಜಿ. ವೇಷಹಾಕಿ ಗಳಿಸುವ ಆದಾಯವನ್ನು ಬಡ ಮಕ್ಕಳ ಅನಾರೋಗ್ಯ ಹಾಗೂ ಶಿಕ್ಷಣಕ್ಕೆ ನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಇದೇ ಉದ್ದೇಶಕ್ಕೆ ವೇಷ ಹಾಕಿದ್ದಾರೆ. ಆದರೆ, ಸಂದೇಶ ಮಾತ್ರ ವಿಭಿನ್ನ.

ADVERTISEMENT

ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸಲು ‘ಡ್ರಗ್ಸ್‌ ಕಾರ್ಕೋಟಕ’ ಎಂಬ ವೇಷ ಹಾಕಿರುವ ರಾಮಾಂಜಿ ಭಾನುವಾರ ನಗರದ ಎಲ್ಲೆಡೆ ಸುತ್ತಿ ಜಾಗೃತಿ ಮೂಡಿಸಿದರು.‌ ಈವೇಷದಪರಿಕಲ್ಪನೆ ಹಾಗೂ ವಿನ್ಯಾಸ ಉದ್ಯಾವರದ ಪ್ರಶಾಂತ ಅವರದ್ದು.

ವ್ಯಸನಕ್ಕೆ ಬಳಸುವ ಸಿರಿಂಜ್, ಗಾಂಜಾ ಎಲೆ, ಕಾರ್ಕೋಟ ವಿಷ ಬಿಂಬಿಸುವ ಹಾವು, ಸಾವಿನ ಮುಖ, ಮಾದಕ ವ್ಯಸನಕ್ಕೆ ಬಲಿಯಾದರೆ ವ್ಯಕ್ತಿ ಅನುಭವಿಸುವ ವೇದನೆಗೆ ಕಾರ್ಕೋಟಕ ವೇಷದ ರೂಪ ಕೊಡಲಾಗಿದೆ.

ಈ ಬಾರಿ ಸಂಗ್ರಹವಾಗುವ ಹಣವನ್ನು ಶಿರ್ವದ ವಿದ್ಯಾವರ್ಧಕ ಸಂಘದ ಕನ್ನಡ ಮಾಧ್ಯಮ ಶಾಲೆಗೆ ಹಾಗೂ ಕಳತ್ತೂರಿನ ಅಂಗವಿಕಲ ವಿದ್ಯಾರ್ಥಿನಿ ಸೌಂದರ್ಯ ಚಿಕಿತ್ಸೆಗೆ ವ್ಯಯ ಮಾಡಲಿದ್ದಾರೆ.

ಸಾಮಾಜಿಕ ಕಳಕಳಿಯ ಉದ್ದೇಶವನ್ನಿಟ್ಟುಕೊಂಡೇ ವೇಷ ಹಾಕಿರುವ ಮತ್ತೊಬ್ಬ ಕಲಾವಿದ ರವಿ ಕಟಪಾಡಿ. ಈ ಬಾರಿ ಅಮೇಸಿಂಗ್ ಮಾನ್‌ಸ್ಟರ್ ಎಂಬ ರಾಕ್ಷಸ ವೇಷದಲ್ಲಿ ಮಿಂಚುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಭಾನುವಾರ ರವಿ ಅಂಡ್ ಫ್ರೆಂಡ್ಸ್ ತಂಡ ನಗರದ ಎಲ್ಲೆಡೆ ದೇಣಿಗೆ ಸಂಗ್ರಹಿಸಿತು. ಸೋಮವಾರವೂ ಪ್ರದರ್ಶನ ನೀಡಲಿದ್ದಾರೆ. ಪ್ರದರ್ಶನದಿಂದ ಬಂದ ಹಣವನ್ನು ನಾಲ್ಕು ಮಕ್ಕಳ ಅನಾರೋಗ್ಯಕ್ಕೆ ವಿನಿಯೋಗಿಸಲಿದ್ದಾರೆ.

ಕಡಿಯಾಳಿ ಗಣೇಶೋತ್ಸವ ಸಮಿತಿಯಿಂದ ‘ಅವಿಘ್ನ ವ್ಯಾಘ್ರಾಸ್’ ಹೆಣ್ಣುಮಕ್ಕಳ ಹುಲಿವೇಷ ತಂಡ ಕೂಡ ಈ ಬಾರಿ ರಥ ಬೀದಿಯಲ್ಲಿ ಹೆಜ್ಜೆ ಹಾಕಿತು. ಸಾಮಾನ್ಯವಾಗಿ ಯುವಕರು ಮಾತ್ರ ಹುಲಿವೇಷ ಹಾಕುತ್ತಾರೆ. ಮೊದಲ ಬಾರಿಗೆ ಮಹಿಳೆಯರ ತಂಡ ಹುಲಿವೇಷ ಹಾಕಿ ಕುಣಿದಿದ್ದನ್ನು ನೋಡಿ ಎಲ್ಲರು ಹುಬ್ಬೇರಿಸಿದರು.

‘ಅವಿಘ್ನ ವ್ಯಾಘ್ರಾಸ್’ ಹಣ್ಣು ಹುಲಿವೇಷ ತಂಡ ಕೂಡ ಸಾಮಾಜಿಕ ಕಳಕಳಿಯಿಂದ ಹುಲಿವೇಷ ಹಾಕಿದ್ದು, ದಾನಿಗಳಿಂದ ದೊರೆತ ಹಣವನ್ನು ಆಸರೆ ಚಾರಿಟೇಬಲ್ ಟ್ರಸ್ಟ್‌ಗೆ ನೀಡಲಿದೆ.

ಭಗವತಿ ನಾಸಿಕ್ ಕಲಾತಂಡದ ಸದಸ್ಯರು ಕೂಡ ಅನಾರೋಗ್ಯಪೀಡಿತರಿಗೆ ನೆರವಾಗುವ ಉದ್ದೇಶದಿಂದ ವಿಚಿತ್ರ ವೇಷ ಹಾಕಿ ಪ್ರದರ್ಶನ ನೀಡಿದರು. ಹಾಲಿವುಡ್‌ ಚಿತ್ರಗಳಲ್ಲಿನ ರಾಕ್ಷಸ ವೇಷವನ್ನು ಧರಿಸಿ ನಗರದಲ್ಲೆಡೆ ಸಂಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.