ADVERTISEMENT

ಮರವಂತೆ ಕರ್ಕಾಟಕ ಅಮಾವಾಸ್ಯೆ ಸಂಭ್ರಮಕ್ಕೆ ಮಂಕು

ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 2:54 IST
Last Updated 7 ಆಗಸ್ಟ್ 2021, 2:54 IST
2019ರ ಕರ್ಕಾಟಕ ಅಮಾವಾಸ್ಯೆಯಂದು ಮರವಂತೆ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಹೆಜ್ಜೆಹಾಕಲೂ ಅವಕಾಶವಿಲ್ಲದಂತೆ ಸೇರಿದ್ದ ಜನರು (ಸಂಗ್ರಹ ಚಿತ್ರ)
2019ರ ಕರ್ಕಾಟಕ ಅಮಾವಾಸ್ಯೆಯಂದು ಮರವಂತೆ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಹೆಜ್ಜೆಹಾಕಲೂ ಅವಕಾಶವಿಲ್ಲದಂತೆ ಸೇರಿದ್ದ ಜನರು (ಸಂಗ್ರಹ ಚಿತ್ರ)   

ಬೈಂದೂರು: ಭಾನುವಾರ ನಡೆಯಬೇಕಾಗಿದ್ದ ಕುಂದಾಪುರ ಕರಾವಳಿಯ ಮಳೆಗಾಲದ ಅತಿದೊಡ್ಡ ಜಾತ್ರೆಯಾದ ಮರವಂತೆ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಕರ್ಕಾಟಕ ಅಮಾವಾಸ್ಯೆ ಕೋವಿಡ್ ಕಾರಣದಿಂದ ಎರಡನೆಯ ವರ್ಷವೂ ರದ್ದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.

ಪಶ್ಚಿಮದ ಕಡಲು, ಪೂರ್ವದ ಸೌಪರ್ಣಿಕಾ ನದಿ ನಡುವಿನ ಕಿರಿದಾದ ಭೂಪ್ರದೇಶದಲ್ಲಿ ಹೆದ್ದಾರಿಗೆ ನಿಕಟವಾಗಿರುವ ಈ ದೇವಸ್ಥಾನ ಪರಿಸರದ ಭಕ್ತರ ಆರಾಧನಾ ಕೇಂದ್ರ. ವರ್ಷದ ಎಲ್ಲ ದಿನಗಳಲ್ಲೂ ಭಕ್ತರು ಬಂದು ದೇವರ ದರ್ಶನ ಪಡೆದರೆ, ಹಿಂದೂ ಹಬ್ಬಗಳ ಸರಣಿಗೆ ನಾಂದಿಯಂತಿರುವ ಕರ್ಕಾಟಕ ಅಮಾವಾಸ್ಯೆಯಂದು ನಸುಕಿನಿಂದ ಸಂಜೆಯ ವರೆಗೆ ವಿವಿಧೆಡೆಯಿಂದ ಪ್ರವಾಹದೋಪಾದಿಯಲ್ಲಿ ಜನ ಬರುತ್ತಾರೆ. ಹರಕೆ ಹೊತ್ತವರು ಸಮುದ್ರ ಸ್ನಾನ ಮಾಡುತ್ತಾರೆ. ದೇವರಿಗೆ ಹಣ್ಣುಕಾಯಿ, ಮಂಗಳಾರತಿ ಸಲ್ಲಿಸುತ್ತಾರೆ. ತೀರ್ಥಪ್ರಸಾದ ಪಡೆದು ಕೃತಾರ್ಥರಾಗುತ್ತಾರೆ. ಕೃಷಿಕರು ಸಮೃದ್ಧ ಬೆಳೆಗಾಗಿ, ಮೀನುಗಾರರು ಯಶಸ್ವಿ ಮೀನುಗಾರಿಕೆಗಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ನೂತನ ದಂಪತಿ ಜತೆಯಾಗಿ ಬಂದು ಸಂತಾನ ಭಾಗ್ಯ ಬೇಡುತ್ತಾರೆ.
ದೇವಸ್ಥಾನದ ಸನಿಹ, ಹೆದ್ದಾರಿಯ ಬದಿ ತಾತ್ಕಾಲಿಕವಾಗಿ ನೆಲೆಯೂರುವ ವಿವಿಧ ಸರಕುಗಳ, ತಿಂಡಿಗಳ ನೂರಾರು ಅಂಗಡಿಗಳು ಭರಾಟೆಯ ವ್ಯಾಪಾರ ನಡೆಸುತ್ತವೆ.

ಈ ವರ್ಷ ಈ ಭಾನುವಾರ ಇವ್ಯಾವುದನ್ನೂ ಇಲ್ಲ ಕಾಣಲು ಸಿಗದು. ಕಳೆದ ವರ್ಷ ಅಮಾವಾಸ್ಯೆ ಆಚರಣೆ ರದ್ದಾಗಿದ್ದನ್ನು ತಿಳಿಯದೆ ಬಂದವರನ್ನು ಕರ್ತವ್ಯದಲ್ಲಿದ್ದ ಪೊಲೀಸರು ದೇವಾಲಯದ ಆವರಣ ಪ್ರವೇಶಿಸಲು ಬಿಡಲಿಲ್ಲ. ಕೋವಿಡ್ ಮೂರನೇ ಅಲೆಯ ಭೀತಿ ಇರುವುದರಿಂದ ಈ ವರ್ಷವೂ ಅದೇ ಸ್ಥಿತಿ ಇಲ್ಲಿರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.