ADVERTISEMENT

ಕುಸಿದ ಟೊಮೆಟೊ ದರ: ಏರಿದ ಕ್ಯಾರೆಟ್

ತರಕಾರಿ ಹಾಗೂ ಸೊಪ್ಪಿನ ದರಗಳಲ್ಲಿ ಸ್ವಲ್ಪ ಹೆಚ್ಚಳ: ಮಳೆ ಹೆಚ್ಚಾದರೆ ದರ ಗಗನಕ್ಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 14:50 IST
Last Updated 30 ಜೂನ್ 2022, 14:50 IST
ತರಕಾರಿ ಮಾರುಕಟ್ಟೆ
ತರಕಾರಿ ಮಾರುಕಟ್ಟೆ   

ಉಡುಪಿ: ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಟೊಮೆಟೊ ಬೆಲೆ ಇಳಿಯುತ್ತಿದ್ದು ಗುರುವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 40ರಂತೆ ಮಾರಾಟವಾಯಿತು.

ತಿಂಗಳ ಹಿಂದಷ್ಟೆ ಟೊಮೆಟೊ ದರ ₹ 100 ಗಡಿ ದಾಟಿ ಸಾರ್ವಜನಿಕರ ಜೇಬಿಗೆ ಹೊರೆಯಾಗಿತ್ತು. ಬಳಿಕ ನಿಧಾನವಾಗಿ ದರದಲ್ಲಿ ಇಳಿಕೆಯಾಗಿ ಕಳೆದ ವಾರ ಕೆ.ಜಿಗೆ ₹ 60 ರಂತೆ ಮಾರಾಟವಾಗುತ್ತಿದ್ದ ಟೊಮೆಟೊ ಸದ್ಯ ₹ 40ಕ್ಕೆ ಕುಸಿದಿದ್ದು ಗ್ರಾಹಕರು ನಿಟ್ಟುಸಿರುಬಿಡುವಂತಾಗಿದೆ.

15 ದಿನಗಳ ಹಿಂದೆ ಜಿಲ್ಲೆಗೆ ಬೇಡಿಕೆಯಷ್ಟು ಟೊಮೆಟೊ ಪೂರೈಕೆ ಇರಲಿಲ್ಲ. ಸದ್ಯ ಮಾರುಕಟ್ಟೆಗೆ ಟೊಮೆಟೊ ಹರಿವು ಹೆಚ್ಚಾಗಿರುವುದರಿಂದ ದರ ಕುಸಿತವಾಗಿದೆ. ಮತ್ತೆ ಭಾರಿ ಮಳೆ ಸುರಿದರೆ ದರ ಗಗನಕ್ಕೇರಲಿದೆ ಎನ್ನುತ್ತಾರೆ ವ್ಯಾಪಾರಿ ಚಂದ್ರಶೇಖರ್‌.

ADVERTISEMENT

ಟೊಮೆಟೊ ದರ ಕುಸಿದರೂ ಇತರ ತರಕಾರಿಗಳ ಬೆಲೆ ಹೆಚ್ಚಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕ್ಯಾರೆಟ್, ಬೀನ್ಸ್‌ ಬೆಲೆ ₹ 80ಕ್ಕೆ ಹೆಚ್ಚಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹60 ದರವಿತ್ತು. ನುಗ್ಗೆಕಾಯಿಯ ದರವೂ ಕೆ.ಜಿಗೆ ₹ 90 ಇದೆ. ಈರುಳ್ಳಿ ದರವೂ ಸ್ವಲ್ಪ ಹೆಚ್ಚಾಗಿದ್ದು ಕಳೆದವಾರ ಕೆ.ಜಿಗೆ 22 ಇದ್ದ ದರ ₹ 28ಕ್ಕೆ ಏರಿಕೆಯಾಗಿದೆ. ನಿಂಬೆ ಹಣ್ಣಿನ ದರ ಇಳಿಕೆಯಾಗಿದ್ದು ₹ 10ಕ್ಕೆ 4 ರಿಂದ 5 ಸಿಗುತ್ತಿದೆ.

ಸೊಪ್ಪಿನ ದರವೂ ಕುಸಿತವಾಗಿಲ್ಲ. ಹಸಿರು, ಕೆಂಪು ದಂಟು ಸೊಪ್ಪು ಕಟ್ಟಿಗೆ ₹ 8 ರಿಂದ ₹ 10 ದರವಿದೆ. ಹಾಗೆಯೇ ಪಾಲಕ್‌, ಕೊತ್ತಮರಿ ಹಾಗೂ ಮೆಂತ್ಯ ಸೊಪ್ಪು ಕಟ್ಟಿಗೆ ₹ 8 ಇದೆ. ಮಳೆ ಹೆಚ್ಚಾದರೆ ಸೊಪ್ಪಿನ ದರ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ವ್ಯಾಪಾರಿ ರಫೀಕ್.

ಜಿಲ್ಲೆಯಲ್ಲಿ ಮಳೆಗಾಲದಲ್ಲಿ ತರಕಾರಿಯ ಬಳಕೆ ಕಡಿಮೆ. ಹೆಚ್ಚಾಗಿ ಸಾಂಬಾರ್ ಸೌತೆ ಬಳಕೆಯಾಗುತ್ತದೆ. ವ್ಯಾಪಾರ ಕಡಿಮೆ ಇದೆ. ಮಳೆಗೆ ತರಕಾರಿಯು ಬೇಗ ಕೆಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ವ್ಯಾಪಾರಿಗಳು.

ಉಡುಪಿಗೆ ಜಿಲ್ಲೆಯ ಬೇಡಿಕೆಯ ಬಹುತೇಕ ಪಾಲು ಹೊರ ಜಿಲ್ಲೆಗಳಿಂದ ಪೂರೈಕೆಯಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಿಂದ ಜಿಲ್ಲೆಗೆ ತರಕಾರಿ ಪೂರೈಕೆಯಾಗುತ್ತದೆ. ಮೇಲಿನ ಜಿಲ್ಲೆಗಳಲ್ಲಿ ನೆರೆ ಬಂದು ತರಕಾರಿ ಹಾಳಾದರೆ ದರ ಹೆಚ್ಚಾಗುತ್ತದೆ. ಮಳೆ ಹದವಾಗಿದ್ದರೆ ತರಕಾರಿ ದರ ಇಳಿಕೆಯಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.