ADVERTISEMENT

ಜೂನ್‌ 1ರಿಂದ ಯಾಂತ್ರೀಕೃತ ಮೀನುಗಾರಿಕೆ ನಿಷೇಧ

ನಿಯಮ ಉಲ್ಲಂಘಿಸಿದರೆ ಸಬ್ಸಿಡಿ ಕಟ್‌: ಮೀನುಗಾರಿಕಾ ಇಲಾಖೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:45 IST
Last Updated 27 ಮೇ 2019, 19:45 IST
ಮಲ್ಪೆ ಬಂದರು (ಸಂಗ್ರಹ ಚಿತ್ರ)
ಮಲ್ಪೆ ಬಂದರು (ಸಂಗ್ರಹ ಚಿತ್ರ)   

ಉಡುಪಿ: ಜಿಲ್ಲೆಯ ಕರಾವಳಿಯಲ್ಲಿ ಜೂನ್ 1ರಿಂದ ಜುಲೈ 31ರವರೆಗೂ ಯಾಂತ್ರೀಕೃತ ಮೀನುಗಾರಿಕೆಯನ್ನು ನಿಷೇಧಿಸಿ ಮೀನುಗಾರಿಕಾ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ಕರಾವಳಿ ಮೀನುಗಾರಿಕೆ (ನಿಯಂತ್ರಣ) ಕಾಯ್ದೆಯ ಅನ್ವಯ ಯಾವುದೇ ಬಲೆ ಹಾಗೂ ಸಾಧನಗಳನ್ನು ಉಪಯೋಗಿಸಿ ಯಾಂತ್ರೀಕೃತ ದೋಣಿಗಳಲ್ಲಿ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‍ಬೋರ್ಡ್, ಔಟ್‍ಬೋರ್ಡ್ ಯಂತ್ರಗಳನ್ನು ಬಳಸಿ, ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕಾ ಚಟುವಟಿಕೆಯನ್ನು ನಿಷೇಧಿಸಲಾಗಿದೆ.

61 ದಿನಗಳ ನಿಷೇಧದ ಅವಧಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಡೆಸುವಂತಿಲ್ಲ.ಸರ್ಕಾರದ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು, ಮೀನುಗಾರರಿಗೆ ಹಲವು ಸವಲತ್ತುಗಳನ್ನು ಕಡಿತಗೊಳಿಸಲಾಗುವುದು ಎ‌ಂದು ಇಲಾಖೆ ಎಚ್ಚರಿಕೆ ನೀಡಿದೆ.

ADVERTISEMENT

ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆಯಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಒಳಗಾಗಬೇಕಾಗುತ್ತದೆ. ಜತೆಗೆ ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ. ಮೀನುಗಾರರು ಈ ಆದೇಶವನ್ನು ಪಾಲಿಸಿ ಸಹಕರಿಸಬೇಕು ಎಂದು ಮೀನುಗಾರಿಕಾ ಉಪ ನಿರ್ದೇಶಕರು ತಿಳಿಸಿದ್ದಾರೆ.

ಏಕೆ ನಿಷೇಧ:

ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮೀನುಗಳ ಸಂತಾನೋತ್ಪತ್ತಿ ಅವಧಿಯಾಗಿದ್ದು, ಈ ಅವಧಿಯಲ್ಲಿ ಮೀನುಗಾರಿಕೆ ಮಾಡಿದರೆ ಭವಿಷ್ಯದಲ್ಲಿ ಮೀನಿನ ಕ್ಷಾಮ ಉಂಟಾಗುವ ಆತಂಕ ತಲೆ ದೋರುತ್ತದೆ. ಹಾಗಾಗಿ ಪ್ರತಿ ಮಳೆಗಾಲದ ಆರಂಭದಿಂದ 2 ತಿಂಗಳು ಯಾಂತ್ರೀಕತ ಮೀನುಗಾರಿಕೆಯನ್ನು ನಿಷೇಧಿಸಲಾಗುತ್ತದೆ. ನಾಡದೋಣಿ ಮೀನುಗಾರಿಕೆಗೆ ಅಡ್ಡಿ ಇರುವುದಿಲ್ಲ.

ಬಂದರಿನತ್ತ ಮುಖ:

ಜೂನ್ 1ರಿಂದ ಮೀನುಗಾರಿಕೆಗೆ ನೀಷೇಧ ಹೇರಿರುವ ಹಿನ್ನೆಲೆಯಲ್ಲಿ ಆಳಸಮದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳು ಬಂದರಿನತ್ತ ಮುಖಮಾಡುತ್ತಿವೆ. ಈಗಾಗಲೇ ನೂರಾರು ಬೋಟ್‌ಗಳು ಸಮುದ್ರದಲ್ಲಿ ಲಂಗರು ಹಾಕಿಕೊಂಡಿವೆ. ಮೇ ಅಂತ್ಯಕ್ಕೆ ಬಹುತೇಕ ಬೋಟ್‌ಗಳು ತೀರಕ್ಕೆ ವಾಪಾಸಾಗಲಿವೆ.

ಸಮಸ್ಯೆಗಳ ಸುಳಿಯಲ್ಲಿ ಮೀನುಗಾರರು:

ಕಳೆದ ವರ್ಷ ಮೀನುಗಾರರ ಪಾಲಿಗೆ ಸಿಹಿಯಾಗಿರಲಿಲ್ಲ. ಸಾಲು ಸಾಲು ಸಮಸ್ಯೆಗಳನ್ನು ಎದುರಿಸುವಂತಾಯಿತು. ಮಳೆಗಾಲದ ಆರಂಭದಲ್ಲಿ ಕಡಲು ಪ್ರಕ್ಷುಬ್ಧಗೊಂಡು ಮೀನುಗಾರಿಕೆ ತಡವಾಗಿ ಶುರುವಾಯಿತು. ಬಳಿಕ ಹವಾಮಾನ ವೈಪರೀತ್ಯದಿಂದ ಸಮುದ್ರಕ್ಕೆ ತೆರಳಿದ್ದ ಮೀನುಗಾರರು ಬರಿಗೈಲಿ ವಾಪಾಸಾಗಿದ್ದರು. ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಬೇಕಾಯಿತು ಎಂದು ಮೀನುಗಾರರು ಬೇಸರ ವ್ಯಕ್ತಪಡಿಸಿದರು.

ಸಾಗರದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗಲಿಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಲಭ್ಯವಾಗಲಿಲ್ಲ. ಡೀಸೆಲ್‌, ಮಂಜುಗಡ್ಡೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಯಿತು. ಮೀನಿನಲ್ಲಿ ಫಾರ್ಮಾಲಿನ್ ಅಂಶ ಇದೆ ಎಂಬ ವದಂತಿ ಮೀನುಗಾರಿಕಾ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿತು. ಮಾರುಕಟ್ಟೆಯಲ್ಲಿ ಮೀನು ಮಾರಾಟವಾಗದ ಪರಿಣಾಮ ಸಂಕಷ್ಟ ಎದುರಿಸಬೇಕಾಯಿತು ಎಂದು ಅಳಲು ತೋಡಿಕೊಂಡರು.

ಗೋವಾ ಸರ್ಕಾರ ರಾಜ್ಯದ ಮೀನಿನ ಆಮದಿನ ಮೇಲೆ ನಿರ್ಬಂಧ ವಿಧಿಸಿದ್ದ ಪರಿಣಾಮ ನಷ್ಟ ಅನುಭವಿಸಬೇಕಾಯಿತು. ಇದರ ಬೆನ್ನಲ್ಲೇ ಡಿಸೆಂಬರ್‌ನಲ್ಲಿ ಸುವರ್ಣ ತ್ರಿಭುಜ ಬೋಟ್‌ನಿಂದ ಮೀನುಗಾರಿಕೆಗೆ ತೆರಳಿದ್ದವರು ನಾಪತ್ತೆಯಾಗಿದ್ದು, ಮೀನುಗಾರರ ಮನೋಸ್ಥೈರ್ಯವನ್ನೇ ಕುಂದಿಸಿತ್ತು ಎಂದು ಮೀನುಗಾರ ಯಶೋಧರ ಸಾಲ್ಯಾನ್ ತಿಳಿಸಿದರು.

ಮೀನುಗಾರರು ಸಾಲದ ಸುಳಿಗೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ರೈತರಂತೆ ಮೀನುಗಾರರ ಸಮಸ್ಯೆಗೆ ಸ್ಪಂದಿಸಬೇಕು. ಸಾಲ ಮನ್ನಾ ಯೋಜನೆಯನ್ನು ಮೀನುಗಾರರಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಮುಂದಿನ ಹಂಗಾಮಿನಲ್ಲಾದರೂ ಹೆಚ್ಚು ಮೀನಿನ ಇಳುವರಿ ಸಿಕ್ಕರೆ ಉದ್ಯಮ ಚೇತರಿಸಿಕೊಳ್ಳಲಿದೆ. ಇಲ್ಲವಾದರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.