ADVERTISEMENT

ಮತದಾರರ ಪಟ್ಟಿ: ಎರಡು ಕಡೆ ಹೆಸರಿದ್ದರೆ ರದ್ದುಪಡಿಸಿ

ಯುಪಿಒಆರ್ ಹಾಗೂ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಮುನೀಷ್ ಮೌದ್ಗಿಲ್ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 14:10 IST
Last Updated 4 ಫೆಬ್ರುವರಿ 2020, 14:10 IST
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ರದ್ದುಗೊಳಿಸುವಿಕೆ ಕುರಿತ ಪರಿಶೀಲನಾ ಸಭೆ ಯುಪಿಒಆರ್ ಹಾಗೂ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಮುನೀಷ್ ಮೌದ್ಗಿಲ್ ನೇತೃತ್ವದಲ್ಲಿ ನಡೆಯಿತು
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ರದ್ದುಗೊಳಿಸುವಿಕೆ ಕುರಿತ ಪರಿಶೀಲನಾ ಸಭೆ ಯುಪಿಒಆರ್ ಹಾಗೂ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಮುನೀಷ್ ಮೌದ್ಗಿಲ್ ನೇತೃತ್ವದಲ್ಲಿ ನಡೆಯಿತು   

ಉಡುಪಿ: ಮತದಾರರ ಪಟ್ಟಿಯಲ್ಲಿ ಮತದಾರನ ಹೆಸರು ಎಡಡು ಕಡೆಗಳಲ್ಲಿ ನೋಂದಣಿಯಾಗಿದ್ದರೆ, ಮತದಾರ ವಾಸವಿಲ್ಲದ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರು ರದ್ದು ಮಾಡುವಂತೆ ಯುಪಿಒಆರ್ ಹಾಗೂ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಮುನೀಷ್ ಮೌದ್ಗಿಲ್ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲೆಯ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ರದ್ದುಗೊಳಿಸುವಿಕೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಬ್ಬ ಮತದಾರ ಮತದಾರರ ಪಟ್ಟಿಯಲ್ಲಿ ಎರಡು ಕ್ಷೇತ್ರಗಳಲ್ಲಿ ನೋಂದಣಿ ಮಾಡಿಕೊಂಡಿದ್ದರೆ, ಚುನಾವಣಾ ಆಯೋಗದ ತಂತ್ರಾಂಶದ ಮೂಲಕ ಪತ್ತೆ ಮಾಡಬಹುದು. ಒಬ್ಬನೇ ವ್ಯಕ್ತಿಯ ಭಾವಚಿತ್ರಗಳನ್ನು ತಂತ್ರಾಂಶ ನಿಖರವಾಗಿ ಪತ್ತೆ ಹಚ್ಚಲಿದ್ದು, ಅಂತಹ ಮತದಾರರ ಪಟ್ಟಿಯನ್ನು ಸಿದ್ದಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಪಟ್ಟಿ ಸಿದ್ಧವಾದ ಬಳಿಕ ಬಿಎಲ್‌ಒಗಳ ಮೂಲಕ ಮತದಾರನ ವಿಳಾಸವನ್ನು ಪರಿಶೀಲಿಸಿ, ಪ್ರಸ್ತುತ ಮತದಾರ ವಾಸ್ತವ್ಯವಿರುವ ಕ್ಷೇತ್ರದಲ್ಲಿ ಹೆಸರು ಉಳಿಸಿ, ಬೇರೆಡೆ ಮತದಾರರ ಪಟ್ಟಿಯಿಂದ ಹೆಸರನ್ನು ರದ್ದುಗೊಳಿಸಬೇಕು. ಜತೆಗೆ, ಎರಡು ಕಡೆ ನೋಂದಣಿ ಮಾಡಿಕೊಂಡಿರುವ ಕುರಿತು ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ನೀಡುವ ಆಕ್ಷೇಪಣೆಗಳನ್ನು ಸೂಕ್ತವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುನೀಷ್ ಮೌದ್ಗಿಲ್ ನಿರ್ದೇಶನ ನೀಡಿದರು.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ ಚುನಾವಣಾ ಆಯೋಗದ ಸೂಚನೆಯಂತೆ ಒಟ್ಟು ಜನಸಂಖ್ಯೆಯ ಪ್ರಮಾಣಕ್ಕೆ ನಿಗಧಿಪಡಿಸಿದ ಪ್ರಮಾಣದಲ್ಲಿ ಮತದಾರರ ಸಂಖ್ಯೆ ಇರುವ ಬಗ್ಗೆ ಪರಿಶೀಲಿಸಬೇಕು. ವ್ಯತ್ಯಾಸಗಳು ಕಂಡುಬಂದರೆ ಮತ್ತೊಮ್ಮೆ ಕ್ಷೇತ್ರಮಟ್ಟದಲ್ಲಿ ಪರಿಶೀಲಿಸಬೇಕು.

ಮತದಾರರ ಪಟ್ಟಿಯಲ್ಲಿರುವ ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಗಣ್ಯ ವ್ಯಕ್ತಿಗಳ ಪಟ್ಟಿಯನ್ನು ಸಿದ್ದಪಡಿಸಿಟ್ಟುಕೊಳ್ಳಿ, ಚುನಾವಣಾ ಸಂದರ್ಭ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿನಿಧಿಗಳು, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಚುನಾವಣಾ ತಹಸೀಲ್ದಾರ್ ಆನಂದಪ್ಪ ನಾಯಕ್ ಹಾಗೂ ಎಲ್ಲ ತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.