ADVERTISEMENT

ಬಂದರಿಗೆ ಬಾಲ ಕಾರ್ಮಿಕರ ಪ್ರವೇಶ ನಿಷೇಧಿಸಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 13:23 IST
Last Updated 8 ಫೆಬ್ರುವರಿ 2021, 13:23 IST
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಲಕಾರ್ಮಿಕ ಯೋಜನಾ ಸಂಘದ ಸಲಹಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆ ನಡೆಯಿತು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಲಕಾರ್ಮಿಕ ಯೋಜನಾ ಸಂಘದ ಸಲಹಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆ ನಡೆಯಿತು.   

ಉಡುಪಿ: ಮಲ್ಪೆ ಸೇರಿದಂತೆ ವಿವಿಧ ಮೀನುಗಾರಿಕಾ ಬಂದರುಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ದೂರುಗಳಿದ್ದು, ಬಂದರಿನ ಪ್ರವೇಶ ದ್ವಾರದಲ್ಲೇ ಮಕ್ಕಳನ್ನು ಬಂದರು ಒಳಗೆ ಹೋಗದಂತೆ ತಡೆಯಬೇಕು. ಮಕ್ಕಳು ಬಂದರಿನೊಳಗೆ ಕೆಲಸ ಮಾಡುವುದು ಕಂಡುಬಂದರೆ ಸಂಬಂಧಪಟ್ಟ ಬಂದರಿನ ಪ್ರವೇಶ ದ್ವಾರದ ಸಿಬ್ಬಂದಿಗೆ ನೋಟೀಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಸೋಮವಾರ ಕಚೇರಿಯಲ್ಲಿ ನಡೆದ ಬಾಲಕಾರ್ಮಿಕ ಯೋಜನಾ ಸಂಘದ ಸಲಹಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೀನುಗಾರಿಕಾ ಬಂದರುಗಳಲ್ಲಿ ಬಾಲ ಕಾರ್ಮಿಕರು ಪತ್ತೆಯಾಗುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ಅಗತ್ಯ ಕ್ರಮ ಜರುಗಿಸಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊರ ರಾಜ್ಯ, ಜಿಲ್ಲೆಗಳಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರು ಕೆಲಸ ಮಾಡುವ ಕ್ವಾರಿ, ಕ್ರಷರ್‌ಗಳಲ್ಲಿ ಬಾಲ ಕಾರ್ಮಿಕರು ದುಡಿಯುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಬಾಲ ಕಾರ್ಮಿಕರು ಕಂಡುಬಂದರೆ ಕ್ವಾರಿಗಳ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಬೇಕು. ಬಾಲಕಾರ್ಮಿಕ ಪದ್ಧತಿ ನಿಷೇಧ ಕುರಿತು ಖಾಸಗಿ ಸಂಸ್ಥೆಗಳ ಮಾಲೀಕರಿಗೆ ಅರಿವು ಮೂಡಿಸುವ ಕಾರ್ಯಗಾರ ಏರ್ಪಡಿಸಬೇಕು ಎಂದು ನಿರ್ದೇಶನ ನೀಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ ಸದಾಶಿವ ಪ್ರಭು, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.