ADVERTISEMENT

ಗಾಂಧೀಜಿ ಅರ್ಥವಾದರೆ ಟೀಕೆಗಳಿಗೆ ಉತ್ತರ: ಪ್ರಶಾಂತ ನೀಲಾವರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 15:35 IST
Last Updated 2 ಅಕ್ಟೋಬರ್ 2021, 15:35 IST

ಉಡುಪಿ: ಮಹಾತ್ಮ ಗಾಂಧೀಜಿ ಅವರನ್ನು ಪ್ರಶ್ನಿಸುವುದು, ಟೀಕಿಸುವುದು ಹಿಂದಿನಿಂದಲೂ ನಡೆದುಕೊಂಡುಬಂದಿದೆ. ಗಾಂಧೀಜಿ ಜೀವನದುದ್ದಕ್ಕೂ ಪ್ರಶ್ನೆ, ಟೀಕೆ, ಸವಾಲುಗಳನ್ನು ಎದುರಿಸಿದ್ದರು ಎಂದು ಪ್ರೊ.ಪ್ರಶಾಂತ ನೀಲಾವರ ಹೇಳಿದರು.

ಶನಿವಾರ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದಲ್ಲಿ ನಡೆದ ಗಾಂಧಿ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಗಾಂಧೀಜಿ ಪ್ರಶ್ನೆ, ಸವಾಲುಗಳಿಗೆ ಪರಿಹಾರ ನೀಡುತ್ತ, ನುಡಿದಂತೆ ನಡೆದು ತೋರಿಸಿದ್ದರು. ಗಾಂಧೀಜಿ ಅವರನ್ನು ಸರಿಯಾಗಿ ಅಧ್ಯಯನ ಮಾಡಿದರೆ ಪ್ರಶ್ನೆ ಟೀಕೆಗಳಿಗೆ ಉತ್ತರ ಸಿಗುತ್ತದೆ. ಆದರೆ, ಅಧ್ಯಯನ ಮಾಡದೆ ಅವರನ್ನು ಟೀಕಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಹನೆ, ಕರುಣೆ, ಮಾನವೀಯತೆ ಹಾಗೂ ಸಮಾನತೆ, ಎಲ್ಲರನ್ನೂ ಒಳಗೊಳ್ಳುವ ಹಿಂದೂ ಧರ್ಮವನ್ನು ಗಾಂಧಿ ಪ್ರತಿಪಾದಿಸಿದ್ದರು. ಯಾಂತ್ರೀಕರಣವನ್ನು ವಿರೋಧಿಸಿರಲಿಲ್ಲ, ಆದರೆ, ಬಡವರ ಉದ್ಯೋಗ ಹಾಗೂ ಆದಾಯವನ್ನು ಕಸಿಯುವ ನೀತಿಗಳನ್ನು ಕಟುವಾಗಿ ವಿರೋಧಿಸುತ್ತಿದ್ದರು. ಸಂಪತ್ತು ಕೆಲವೇ ಜನರಲ್ಲಿ ಕ್ರೂಢೀಕರಣವಾಗುವುದನ್ನು ಒಪ್ಪುತ್ತಿರಲಿಲ್ಲ ಎಂದರು.

ADVERTISEMENT

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ್ ವಹಿಸಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಇದ್ದರು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಉಪನ್ಯಾಸಕ ಪ್ರಶಾಂತ್ ಉದ್ಯಾವರ ಕಾರ್ಯಕ್ರಮ ಸಂಯೋಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.