ADVERTISEMENT

ಕರಾವಳಿಯಲ್ಲಿ ಸಿದ್ಧವಾಯ್ತು ಮೈಕ್ರೋಲೈಟ್‌ ಸೀಪ್ಲೇನ್‌

8 ಮಂದಿಯ ತಂಡ ಸಿದ್ಧಪಡಿಸಿದ ನೀರಿನಲ್ಲಿ ತೇಲುವ, ಬಾನಿನಲ್ಲಿ ಹಾರುವ ವಿಮಾನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 19:30 IST
Last Updated 26 ಫೆಬ್ರುವರಿ 2021, 19:30 IST
ಮೈಕ್ರೋಲೈಟ್‌ ಸೀ ಪ್ಲೇನ್‌ ಸಿದ್ಧಪಡಿಸಿರುವ ತಂಡ
ಮೈಕ್ರೋಲೈಟ್‌ ಸೀ ಪ್ಲೇನ್‌ ಸಿದ್ಧಪಡಿಸಿರುವ ತಂಡ   

ಉಡುಪಿ: ಆತ್ಮನಿರ್ಭರ ಭಾರತ ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದಿರುವ ಉತ್ಸಾಹಿ ಯುವಪಡೆ ನೀರಿನಲ್ಲಿ ತೇಲುವ ಹಾಗೂ ಬಾನಿನಲ್ಲಿ ಹಾರುವ ಮೈಕ್ರೋಲೈಟ್‌ ಸೀಪ್ಲೇನ್‌ ನಿರ್ಮಾಣ ಮಾಡಿದೆ. ಕಾಪು ತಾಲ್ಲೂಕಿನ ಹೆಜಮಾಡಿಯ ನಡಿಕುದ್ರುವಿನಲ್ಲಿ ಪುಷ್ಪರಾಜ್ ಅಮೀನ್‌ ನೇತೃತ್ವದ 8 ಮಂದಿಯ ತಂಡ ಸೀಪ್ಲೇನ್‌ ಸಿದ್ಧಪಡಿಡಿದೆ.

120 ಕೆ.ಜಿ ತೂಕದ ಸೀಪ್ಲೇನ್‌ ಒಂದು ಸಿಲಿಂಡರ್‌, 33 ಅಡಿ ಉದ್ದದ ರೆಕ್ಕೆಗಳನ್ನು ಹೊಂದಿದ್ದು, 33 ಎಚ್‌ಪಿ ಹಾಗೂ 200 ಸಿಸಿ ಸಾಮರ್ಥ್ಯದ ಸಿಮೊನಿನಿ ಇಟಲಿ ನಿರ್ಮಿತ ಎಂಜಿನ್ ಬಳಸಿ ₹ 7 ಲಕ್ಷ ವೆಚ್ಚದಲ್ಲಿ ಸೀಪ್ಲೇನ್ ನಿರ್ಮಾಣ ಮಾಡಲಾಗಿದೆ. ಶಾಂಭವಿ ನದಿಯ ತೀರದಲ್ಲಿ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದ್ದು, ವರ್ಷಗಳ ನಿರಂತರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಪುಷ್ಪರಾಜ್ ಅಮೀನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈಗಾಗಲೇ ನದಿಯ ಹಿನ್ನೀರಿನಲ್ಲಿ ಐದಾರು ಗಂಟೆಗಳ ಕಾಲ ಸೀಪ್ಲೇನ್‌ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ಹಾರಾಟ ನಡೆಸಿದೆ. ಮುಂದೆ, ದೊಡ್ಡ ಸೀಪ್ಲೇನ್‌ಗಳು ಹಾಗೂ ವಿಶೇಷ ಬೋಟ್‌ಗಳನ್ನು ನಿರ್ಮಿಸುವ ಉದ್ದೇಶವಿದ್ದು, ಈ ನಿಟ್ಟಿನಲ್ಲಿ ನಿರಂತರ ಸಂಶೋಧನೆ ಹಾಗೂ ಅಧ್ಯಯನ ನಡೆಯುತ್ತಿದೆ ಎಂದು ಪುಷ್ಪರಾಜ್ ತಿಳಿಸಿದರು.

ADVERTISEMENT

ಬಾನಕ್ಕಿಗಳ ಬಗ್ಗೆ ಕುತೂಹಲ:ಬಾಲ್ಯದಿಂದಲೂ ವಿಮಾನಗಳ ಹಾರಾಟದ ಬಗ್ಗೆ ಅತಿಯಾದ ಆಸಕ್ತಿ ಹಾಗೂ ಕುತೂಹಲವಿತ್ತು. ಕಾಲೇಜಿನಲ್ಲಿದ್ದಾಗ ಸಣ್ಣ ಸಣ್ಣ ರಿಮೋಟ್‌ ಕಂಟ್ರೋಲ್‌ ವಿಮಾನಗಳನ್ನು ಮಾಡುತ್ತಿದ್ದೆ. ವರ್ಷದ ಹಿಂದೆ ಸಮಾನ ಮನಸ್ಕರ ತಂಡ ಒಟ್ಟಾಗಿ ಸೀಪ್ಲೇನ್‌ ಮಾಡುವ ಬಗ್ಗೆ ಚರ್ಚಿಸಿ ಯೋಜನೆ ಸಿದ್ಧಪಡಿಸಿದೆವು. ಈಗ ಕಾರ್ಯರೂಪಕ್ಕೆ ತಂದಿದ್ದೇವೆ ಎಂದರು.‌

ಸದ್ಯ ಪೈಲಟ್‌ ಮಾತ್ರ ಕೂರುವ ಸಣ್ಣ ಸೀಪ್ಲೇನ್ ಸಿದ್ಧಪಡಿಸಲಾಗಿದೆ. ಮುಂದೆ, ಪ್ರವಾಸೋದ್ಯಕ್ಕೆ ಪೂರಕವಾಗುವಂತೆ ನಾಲ್ಕೈದು ಮಂದಿ ಕೂರಲು ಸಾಧ್ಯವಿರುವ ಸೀಪ್ಲೇನ್‌ಗಳನ್ನು ನಿರ್ಮಿಸುವ ಯೋಚನೆ ಇದೆ. ಇದರ ಜತೆಗೆ, ಫೋಟೊಗ್ರಫಿ, ಸಿನಿಮಾ ಚಿತ್ರೀಕರಣಕ್ಕೆ ಬಳಸುವ, ನೆರೆ ಅವಘಡಗಳು ಎದುರಾದಾಗ ರಕ್ಷಣಾ ಕಾರ್ಯಕ್ಕೆ ಉಪಯೋಗಿಸುವ, ಸೇನೆಗೂ ಬಳಕೆ ಮಾಡುವಂತಹ, ಏರೊನಾಟಿಕಲ್ಸ್‌ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬಳಸುವ ಸೀಪ್ಲೇನ್‌ಗಳನ್ನು ತಯಾರಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಕನಸುಗಳು ಬಹಳಷ್ಟಿವೆ, ಆದರೆ ಕನಸುಗಳ ಸಾಕಾರಕ್ಕೆ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಆರ್ಥಿಕ ನೆರವಿನ ಅಗತ್ಯವಿದೆ. ವರ್ಕ್‌ಶಾಪ್‌ ನಿರ್ಮಾಣಕ್ಕೆ ಹಾಗೂ ಅಗತ್ಯ ಸಾಮಾಗ್ರಿಗಳ ಖರೀದಿಗೆ ಸಹಾಯಧನ ಸಿಕ್ಕರೆ ಸೀಪ್ಲೇನ್‌ಗಳ ನಿರ್ಮಾಣದಿಂದ ಕರಾವಳಿಯ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ ಎಂದರು ಪುಷ್ಪರಾಜ್‌.

ದೇಶದಲ್ಲಿ ಹಲವು ಏರೊನಾಟಿಕಲ್‌ ಎಂಜಿನಿಯರಿಂಗ್ ಕಾಲೇಜುಗಳಿದ್ದರೂ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಧೃತಿ ಎಂಬ ಸಂಸ್ಥೆ ಸ್ಥಾಪಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.