ADVERTISEMENT

ನೆರೆ, ಬರ ಪರಿಹಾರ ಕಾಮಗಾರಿ ನಿರ್ಲಕ್ಷ್ಯ ಸಹಿಸಲ್ಲ

ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಚಿವ ದೇಶಪಾಂಡೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 14:27 IST
Last Updated 18 ಜೂನ್ 2019, 14:27 IST
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಪ್ರಗತಿ ಪರಿಶೀಲನೆ ಹಾಗೂ ಪ್ರವಾಹ, ಬರ ಪರಿಹಾರ ಕಾಮಗಾರಿಗಳ ಅನುಷ್ಠಾನ ಸಭೆ ನಡೆಸಿದರು
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಪ್ರಗತಿ ಪರಿಶೀಲನೆ ಹಾಗೂ ಪ್ರವಾಹ, ಬರ ಪರಿಹಾರ ಕಾಮಗಾರಿಗಳ ಅನುಷ್ಠಾನ ಸಭೆ ನಡೆಸಿದರು   

ಉಡುಪಿ: ನೀತಿಸಂಹಿತೆ ಅಂತ್ಯವಾದರೂ ಜಿಲ್ಲೆಯಲ್ಲಿ ನೆರೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಲಕ್ಷ್ಯ ವಹಿಸಿದ್ದು ಸರಿಯಲ್ಲ. ಟೆಂಡರ್‌ಗಾಗಿ ಕಾಯದೆ ನೆರೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ವ್ಯಾಪ್ತಿಯ ಪ್ರಗತಿ ಪರಿಶೀಲನೆ ಹಾಗೂ ಪ್ರವಾಹ, ಬರ ಪರಿಹಾರ ಕಾಮಗಾರಿಗಳ ಅನುಷ್ಠಾನ ಕುರಿತ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್‌ ಸಿಇಒ ಕಚೇರಿ ಬಿಟ್ಟು ಗ್ರಾಮಗಳತ್ತ ಮುಖಮಾಡಿದರೆ ಕೆಳಹಂತದ ಎಲ್ಲ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. 15 ದಿನಗಳಲ್ಲಿ ಜಿಲ್ಲೆಯ ಎಲ್ಲ ಪಂಚಾಯತ್‌ಗಳಿಗೆ ಭೇಟಿ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.

ADVERTISEMENT

ಕರಾವಳಿ ಹಾಗೂ ಮಲೆನಾಡಿನಲ್ಲಿ ನೆರೆ ಪರಿಹಾರ ಕಾಮಗಾರಿಯ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ನಗರಸಭೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಕಾಮಗಾರಿ ನಡೆಸಬೇಕು. ಪ್ರತಿಯೊಂದು ಪಂಚಾಯತ್ ವ್ಯಾಪ್ತಿಯಲ್ಲಿ ಜನರ ಸಹಭಾಗಿತ್ವದಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸಿ ಎಂದು ಸಲಹೆ ನೀಡಿದರು.

ಸಮಸ್ಯೆ ಇದ್ದರೆ ಟ್ಯಾಂಕರ್ ನೀರು ಕೊಡಿ:

ಅಧಿಕಾರಿಗಳು 3 ದಿನಗಳಿಗೊಮ್ಮೆ ಹಳ್ಳಿಗಳಿಗೆ ಭೇಟಿನೀಡಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪರಿಶೀಲಿಸಬೇಕು. ಇದ್ದರೆ, ತಕ್ಷಣ ಟ್ಯಾಂಕರ್ ನೀರು ಪೂರೈಸಬೇಕು. ಸರ್ಕಾರದ ಬಳಿ ಹಣಕ್ಕೆ ಕೊರತೆ ಇಲ್ಲ. ವಿರೋಧ ಪಕ್ಷಗಳು ಆರೋಪ ಮಾಡಲು ಅವಕಾಶ ಕೊಡದಂತೆ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಶಾಸಕ ರಘುಪತಿ ಭಟ್‌, ಈ ಬಾರಿ ಉಡುಪಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ನಗರಸಭೆಯಿಂದ ಒಂದು ಟ್ಯಾಂಕರ್ ನೀರು ಪೂರೈಕೆ ಮಾಡಿಲ್ಲ. 31 ವಾರ್ಡ್‌ಗಳಲ್ಲಿ ಜನಪ್ರತಿನಿಧಿಗಳು ಸ್ವಂತ ದುಡ್ಡಿನಲ್ಲಿ ಟ್ಯಾಂಕರ್ ನೀರು ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರಿಂದ ಸಿಟ್ಟಿಗೆದ್ದ ಸಚಿವರು ನಗರ ವ್ಯಾಪ್ತಿಯಲ್ಲಿ ಎಷ್ಟು ಟ್ಯಾಂಕರ್ ನೀರು ಕೊಟ್ಟಿದ್ದೀರಿ ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು. ಸರ್ಕಾರದಿಂದ ಏಪ್ರಿಲ್‌ನಲ್ಲಿ ₹ 45 ಲಕ್ಷ ಅನುದಾನ ಬಂದಿದ್ದು, ಟೆಂಡರ್ ಕರೆಯಲಾಗಿದೆ ಎಂದು ಪ್ರತಿಕ್ರಿಯಿಸಿದರು. ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಸ್ವರ್ಣಾ ನದಿ ಪಾತ್ರದಲ್ಲಿ ಡ್ರೆಜಿಂಗ್ ಮೂಲಕ ನೀರು ಪೂರೈಸಲಾಗಿದೆ. ಅಗತ್ಯವಿದ್ದ ಕಡೆಗಳಲ್ಲಿ ಟ್ಯಾಂಕರ್ ನೀರು ಕೊಡಲಾಗಿದೆ ಎಂದು ತಿಳಿಸಿದರು.

ಟ್ಯಾಂಕರ್ ಮೂಲಕ ನೀರು ಪೂರೈಸಲು ಯಾವ ನಿಯಮಗಳೂ ಅಡ್ಡಿ ಬರುವುದಿಲ್ಲ. ಇದು ಆಡಳಿತ ವ್ಯವಸ್ಥೆಯ ಗಂಭೀರ ಲೋಪ. ಕರಾವಳಿಯಲ್ಲಿ ನೀರಿನ ಸಮಸ್ಯೆ ಗಂಭೀರ ವಿಚಾರ. ಶಾಲೆಗಳಲ್ಲಿ ಬಿಸಿಯೂಟಕ್ಕೂ ನೀರಿಲ್ಲ ಎಂಬ ವಿಚಾರ ಮಾಧ್ಯಮಗಳಿಂದ ತಿಳಿಯಿತು. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಅರಿವಿದ್ದರೂ ನಿರ್ಲಕ್ಷ್ಯ ವಹಿಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮರ್ಪಕ ಕುಡಿಯುವ ನೀರು ಪೂರೈಕೆ, ಜಾನುವಾರುಗೆ ಮೇವು, ಜನರು ಗುಳೆ ಹೋಗಬಾರದು ಎಂಬುದು ಸರ್ಕಾರದ ಆದ್ಯತೆಯಾಗಿದ್ದು, ಅದರಂತೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಚಿವರು ಚಾಟಿ ಬೀಸಿದರು.

ಸಭೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಸಿಇಒ ಸಿಂಧೂ ಬಿ.ರೂಪೇಶ್‌,ಎಸ್‌ಪಿ ನಿಶಾ ಜೇಮ್ಸ್‌ ಅವರು ಉಪಸ್ಥಿತರಿದ್ದರು.

‘ಕನಿಷ್ಠ ₹ 10 ಲಕ್ಷ ಖಾತೆಯಲ್ಲಿರಲಿ’

ತಹಶೀಲ್ದಾರ್ ಖಾತೆಯಲ್ಲಿ ಕನಿಷ್ಠ ₹ 10 ಲಕ್ಷ ಹಣ ಇರಲೇಬೇಕು. ಹಣದ ಕೊರತೆ ಎದುರಾದರೆ ಜಿಲ್ಲಾಧಿಕಾರಿಗೆ ಹಣ ಬಿಡುಗಡೆಗೆ ಮನವಿ ಮಾಡಬೇಕು. ಕಾಮಗಾರಿಗಳಿಗೆ, ಬಿಲ್‌ ಪಾವತಿಗೆ ಅನುದಾನದ ಕೊರತೆಯಾಗಬಾರದು ಎಂದು ತಹಶೀಲ್ದಾರ್‌ಗಳಿಗೆ ಸೂಚಿಸಿದರು. ಜತೆಗೆ, ಎಲ್ಲ ತಹಶೀಲ್ದಾರ್‌ಗಳಿಗೆ ತಕ್ಷಣ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಸಚಿವರು ಆದೇಶಿಸಿದರು.
‘ಅಂತರ್ಜಲ ವೃದ್ಧಿಗೆ ಗಮನ ಹರಿಸಿ’

ಪರಿಸರದ ಮೇಲಿನ ದೌರ್ಜನ್ಯದಿಂದ ಪ್ರಕೃತಿ ಮುನಿಸಿಕೊಂಡಿದೆ. ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡುವ ಬದಲು ಶಾಶ್ವತ ಪರಿಹಾರದತ್ತ ಗಮನ ಹರಿಸಿ. ಅಂತರ್ಜಲ ವೃದ್ಧಿಗಾಗಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಆದ್ಯತೆ ನೀಡಿ. ನೀರನ್ನು ಭೂಮಿಗೆ ಇಂಗಿಸುವ ಕೆಲಸವಾಗಲಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.