ADVERTISEMENT

ಪರಶುರಾಮ ಥೀಮ್ ಪಾರ್ಕ್ | ಹೋರಾಟಕ್ಕೆ ನಿರ್ಧಾರ: ಶಾಸಕ ವಿ. ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 5:41 IST
Last Updated 3 ಆಗಸ್ಟ್ 2025, 5:41 IST
ಕಾರ್ಕಳ ತಾಲ್ಲೂಕಿನ ಬೈಲೂರು ಪರಶುರಾಮ ಥೀಂ ಪಾರ್ಕ್ ನ ಕಾಮಗಾರಿಯನ್ನು ಮುಂದುವರೆಯಬೇಕು ಎಂಬ ಹಿನ್ನೆಲೆಯಲ್ಲಿ ವಿವಿಧ ಹಂತದ ಹೋರಾಟದ ಕುರಿತು ಶನಿವಾರ ಆಯೋಜಿಸಿದ ಸಭೆಯಲ್ಲಿ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿದರು.
ಕಾರ್ಕಳ ತಾಲ್ಲೂಕಿನ ಬೈಲೂರು ಪರಶುರಾಮ ಥೀಂ ಪಾರ್ಕ್ ನ ಕಾಮಗಾರಿಯನ್ನು ಮುಂದುವರೆಯಬೇಕು ಎಂಬ ಹಿನ್ನೆಲೆಯಲ್ಲಿ ವಿವಿಧ ಹಂತದ ಹೋರಾಟದ ಕುರಿತು ಶನಿವಾರ ಆಯೋಜಿಸಿದ ಸಭೆಯಲ್ಲಿ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿದರು.   

ಕಾರ್ಕಳ: ತಾಲ್ಲೂಕಿನ ಬೈಲೂರು ಪರಶುರಾಮ ಥೀಂ ಪಾರ್ಕ್‌ನ ಕಾಮಗಾರಿಯನ್ನು ಮುಂದುವರಿಯಬೇಕು ಎಂದು ಒತ್ತಾಯಿಸಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.

ಇಲ್ಲಿನ ವಿಕಾಸ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ  ಮಾತನಾಡಿದ ಅವರು, ‘ಪರಶುರಾಮ ಥೀಂ ಪಾರ್ಕ್ ಕುರಿತು ನಿರಂತರವಾಗಿ ಕಾಂಗ್ರೆಸ್ ನಾಯಕರು ಟೂಲ್ ಕಿಟ್ ರಾಜಕೀಯ ನಡೆಸುತ್ತಾ ಬಂದಿದ್ದರು. ಅವರ ನಿಜ ಬಣ್ಣ ಬಯಲಾಗಿದೆ. ಥೀಂ ಪಾರ್ಕ್ ಗೆ ತಾರ್ಕಿಕ ಅಂತ್ಯ ಹಾಡಲು ಮತ್ತು ಕಾಂಗ್ರೆಸ್‌ನ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳಲಾಗುವುದದು’ ಎಂದರು.

‘ಪರಶುರಾಮ ಥೀಂ ಪಾರ್ಕ್‌ನ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪುನರಾರಂಭಿಸಬೇಕು ಎಂದು ಆಗ್ರಹಿಸಿ ಇದೇ 6 ರಂದು ಬೆಳಿಗ್ಗೆ 9.30ಕ್ಕೆ ಕಾರ್ಕಳ ಅನಂತಶಯನದಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ತನಕ ಬೃಹತ್ ವಾಹನ ಜಾಥಾ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

‘ಥೀಂ ಪಾರ್ಕ್ ಸಾರ್ವಜನಿಕ ವೀಕ್ಷಣೆಗೆ ತೆರೆಯಬೇಕು. ಅಪಪ್ರಚಾರ ನಡೆಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಸೆ. 6 ರಂದು ಅನಂತಶಯನದಿಂದ ಬೈಲೂರಿನ ಉಮಿಕ್ಕಳ ಬೆಟ್ಟದ ತನಕ ಬೃಹತ್ ಪಾದಯಾತ್ರೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಕಾಂಗ್ರೆಸ್ ನಾಯಕರು ಕಳೆದ ಎರಡು ವರ್ಷಗಳಿಂದ ಅನಾವಶ್ಯಕ ಆರೋಪ, ಸುಳ್ಳು ಹೇಳಿಕೆ, ವ್ಯಂಗ್ಯ, ಟೂಲ್ ಕಿಟ್ ರಾಜಕೀಯ ನಡೆಸುತ್ತ ಕಾಮಗಾರಿಗೆ ತಡೆಯೊಡ್ಡಿದರು. ದೂರು ಕೊಟ್ಟದ್ದು ಕಾಂಗ್ರೆಸ್ ಯೂತ್ ಜಿಲ್ಲಾಧ್ಯಕ್ಷರು. ಬಳಿಕ ಶಿಲ್ಪಿ ಕೆಲಸ ಮಾಡಲು ಬಂದಾಗ ತಡೆದಿದ್ದು ಕಾಂಗ್ರೆಸ್. ರಸ್ತೆಗೆ ಮಣ್ಣು ಹಾಕಿದ್ದು ಕೂಡ ಕಾಂಗ್ರೆಸ್. ಹಣ ಬಿಡುಗಡೆ ಮಾಡದಂತೆ ತಡೆದಿದ್ದು ಕಾಂಗ್ರೆಸ್. ಪ್ರತಿಭಟನೆ ಮಾಡಿದ್ದು ಕೂಡ ಅದೇ ಕಾಂಗ್ರೆಸ್’ ಎಂದು ಹೇಳಿದರು.

‘ಮುಂದಿನ ಚುನಾವಣೆ ತನಕ ಹಾಗೇಯೇ ಇರಲಿ ಅಂತ ಹೇಳಿಸಿದ್ದು, ಹೇಳಿದ್ದು ಕೂಡ ಕಾಂಗ್ರೆಸ್. ಈಗ ಆಗಬೇಕು ಎನ್ನುವುದು ಕೂಡ ಕಾಂಗ್ರೆಸ್. ಪಕ್ಷ, ನಿಲುವುಗಳನ್ನು ಬದಲಿಸುತ್ತ ಬಂದ ನಾಯಕನ ಬಂಡವಾಳ ಈಗ ಕಳಚಿ ಬಿದ್ದಿದೆ’ ಎಂದರು.   

ಬೇಡಿಕೆಗಳ ಈಡೇರಿಕೆಗಾಗಿ ಹಂತ ಹಂತವಾಗಿ ತಾಲ್ಲೂಕು, ಜಿಲ್ಲೆ, ರಾಜ್ಯಾದ್ಯಾಂತ ನಿರಂತರ ಹೋರಾಟ, ಜನಜಾಗೃತಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಮಾಧ್ಯಮ ವಕ್ತಾರ ಸತೀಶ್ ಶೆಟ್ಟಿ ಮುಟ್ಲುಪ್ಪಾಡಿ, ಬೈಲೂರಿನ ವಿಕ್ರಂ ಹೆಗ್ಡೆ, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಮಾತನಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯರಾಮ ಸಾಲ್ಯಾನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವೀಂದ್ರ ಮಡಿವಾಳ, ಬೈಲೂರು ಪರಶುರಾಮ ಥೀಂ ಪಾರ್ಕ್ ಜನಾಗ್ರಹ ಸಮಿತಿ ಅಧ್ಯಕ್ಷ ಸಚ್ಚಿದನಾಂದ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು. ಸುರೇಶ್ ಶೆಟ್ಟಿ ಶಿವಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಸಾಲ್ಯಾನ್ ಸ್ವಾಗತಿಸಿದರು. ಸತೀಶ್ ಪೂಜಾರಿ ಬೋಳ ವಂದಿಸಿದರು.

‘ಪರಶುರಾಮ ಮೂರ್ತಿ ವಿಚಾರ: ಅವಹೇಳನ ಖಂಡನೀಯ’

ಹೆಬ್ರಿ: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿಚಾರವಾಗಿ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಅವರನ್ನು ಬಿಜೆಪಿಯವರು ಅವಹೇಳನ ಮಾಡುತ್ತಿರುವುದು ಖಂಡನೀಯ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ಹೇಳಿದರು. ಹೆಬ್ರಿಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪರಶುರಾಮ ಮೂರ್ತಿ ಕಂಚಿನದ್ದಲ್ಲ ಎಂಬುದು ಈಗ ತನಿಖೆಯಿಂದ ಸಾಬೀತಾಗಿದೆ. ಆದ್ದರಿಂದ ದಿನಕ್ಕೊಂದು ಹೇಳಿಕೆಗಳನ್ನು ಕಾರ್ಕಳದ ಬಿಜೆಪಿಯ ನಾಯಕರು ನೀಡುತ್ತಿದ್ದಾರೆ ಎಂದರು.

ಕಾರ್ಕಳ ಜನತೆಯ ಒತ್ತಾಯದ ಮೇರೆಗೆ ಕಂಚಿನ ಪರಶುರಾಮ ಮೂರ್ತಿ ನಿರ್ಮಾಣ ಮಾಡಬೇಕು ಎಂದು ಉದಯ ಕುಮಾರ್ ಶೆಟ್ಟಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರಬಹುದು. ಉದಯ ಶೆಟ್ಟಿ ಅವರು ಕಂಚಿನ ಪ್ರತಿಮೆ ಸ್ಥಾಪನೆ ಮಾಡಲು ಅರ್ಜಿ ಸಲ್ಲಿಸಿರುವುದರಿಂದ ಬಿಜೆಪಿಯವರ ಸುಳ್ಳು ಜನರಿಗೆ ತಿಳಿಯುತ್ತದೆ ಎಂದು ಹೆದರಿ ದಿನಕ್ಕೊಂದು ಹೇಳಿಕೆ ನಿಡಲಾಗುತ್ತಿದೆ ಎಂದರು. ಪಕ್ಷದ ಮುಖಂಡ ನವೀನ್ ಕೆ. ಅಡ್ಯಂತಾಯ ಮಾತನಾಡಿ ಪರಶುರಾಮ ಮೂರ್ತಿ ವಿಷಯದಲ್ಲಿ ನಮ್ಮ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅದನ್ನು ಕೂಡ ನಿಲ್ಲಿಸಬೇಕು ಎಂದರು. ಕಾಂಗ್ರೆಸ್ ವಕ್ತಾರ ನಿತೀಶ್ ಎಸ್. ಪಿ. ಹೆಬ್ರಿ ಕಾಂಗ್ರೆಸ್ ಮುಖಂಡರಾದ ದಿನೇಶ ಶೆಟ್ಟಿ ಶಂಕರ ಶೇರಿಗಾರ್ ಪ್ರವೀಣ್ ಸೂಡ ಮಿಥುನ್ ಶೆಟ್ಟಿ ಚಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.