ADVERTISEMENT

ಉಡುಪಿಯಲ್ಲಿ ಶೀಘ್ರ ವೈದ್ಯಕೀಯ ಕಾಲೇಜು

ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ: ಶಾಸಕ ರಘುಪತಿ ಭಟ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 16:43 IST
Last Updated 17 ಡಿಸೆಂಬರ್ 2020, 16:43 IST
ಉಡುಪಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಯೋಜನೆ ರೂಪಿಸುವ ಕುರಿತು ಬೆಂಗಳೂರಿನಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಯಿತು.
ಉಡುಪಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಯೋಜನೆ ರೂಪಿಸುವ ಕುರಿತು ಬೆಂಗಳೂರಿನಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಯಿತು.   

ಉಡುಪಿ: ಜಿಲ್ಲೆಯಲ್ಲಿ ಒಂದು ಖಾಸಗಿ ವೈದ್ಯಕೀಯ ಕಾಲೇಜು ಮಾತ್ರ ಇದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಯೋಜನೆ ರೂಪಿಸುವ ಕುರಿತು ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.

ವಿಧಾನಸೌಧದಲ್ಲಿ ಗುರುವಾರ ನಡೆದ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಬಾಕಿ ಇರುವ ಭರವಸೆಗಳ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದ್ದು, ಉಡುಪಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಪ್ರಸ್ತಾವವೂ ಪ್ರಮುಖವಾಗಿ ಚರ್ಚೆಗೆ ಬಂದು, ಅಧಿಕಾರಿಗಳ ಗಮನ ಸೆಳೆಯಲಾಯಿತು ಎಂದು ಅವರು ತಿಳಿಸಿದರು.

ಈಗಾಗಲೇ ಉಡುಪಿ ಜಿಲ್ಲಾ ಆಸ್ಪತ್ರೆಯನ್ನು 250 ಬೆಡ್‌ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರಕಿದೆ. ಆಸ್ಪತ್ರೆಯ 10 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಉದ್ದೇಶದಿಂದ 20 ಎಕರೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ADVERTISEMENT

ಜಿಲ್ಲಾ ಆಸ್ಪತ್ರೆಗೆ ಹೊಂದಿಕೊಂಡಿರುವ ಕಟ್ಟಡದಲ್ಲಿ ಈ ವರ್ಷದಿಂದಲೇ ಬಿಎಸ್ಸಿ ನರ್ಸಿಂಗ್ ಕಾಲೇಜು ಆರಂಭಿಸುವ ಬಗ್ಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಕುಲಸಚಿವರ ಜತೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಶಾಸಕ ರಘುಪತಿ ಭಟ್‌ ತಿಳಿಸಿದರು.

ಭರವಸೆಗಳ ಸಮಿತಿ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಜಂಟಿ ಕಾರ್ಯದರ್ಶಿ ಎಂ.ಶಿಲ್ಪಾ, ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ,ಕುಲಸಚಿವಶಿವಾನಂದ ಕಾಪಸಿ, ಕಿಮ್ಸ್‌ ನಿರ್ದೇಶಕ ಡಾ.ರಾಮಲಿಂಗಪ್ಪ, ಬ್ರಿಮ್ಸ್‌ ನಿರ್ದೇಶಕ ಡಾ.ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.