ADVERTISEMENT

ಬ್ರಹ್ಮಾವರ: ನೆರೆ ಪೀಡಿತ ಗದ್ದೆಗೆ ‘ಸಹ್ಯಾದ್ರಿ ಪಂಚಮುಖಿ’

ಅಧಿಕ ಇಳುವರಿ, ಕಡಿಮೆ ಖರ್ಚು, ನಿಧಾನದಲ್ಲಿ ಪ್ರಚಲಿತಗೊಳ್ಳುತ್ತಿರುವ ಕೆಂಪು ಭತ್ತದ ತಳಿ

​ಪ್ರಜಾವಾಣಿ ವಾರ್ತೆ
Published 26 ಮೇ 2022, 5:59 IST
Last Updated 26 ಮೇ 2022, 5:59 IST
ಕೃಷಿ ಭೂಮಿಯಲ್ಲಿ ಬೆಳೆದ ಪಂಚಮುಖಿ ತಳಿ
ಕೃಷಿ ಭೂಮಿಯಲ್ಲಿ ಬೆಳೆದ ಪಂಚಮುಖಿ ತಳಿ   

ಬ್ರಹ್ಮಾವರ: ನೆರೆ ಹಾವಳಿಯನ್ನು ತಡೆದುಕೊಂಡು ಬೆಳೆಯಬಲ್ಲ ‘ಸಹ್ಯಾದ್ರಿ ಪಂಚಮುಖಿ’ ಎಂಬ ಕೆಂಪು ಭತ್ತದ ತಳಿಯನ್ನು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಮೂರು ವರ್ಷಗಳಿಂದ ಅಭಿವೃದ್ಧಿ ಪಡಿಸಿದ್ದು, ರೈತರಿಗೆ ಬೆಳೆಯಲು ಶಿಫಾರಸು ಮಾಡುತ್ತಿದೆಯಾದರೂ ಇನ್ನೂ ಪ್ರಗತಿ ಕಂಡಿಲ್ಲ.

ಕರಾವಳಿ ಪ್ರದೇಶದ ಭತ್ತ ಬೆಳೆಯುವ ನೆರೆ ಪೀಡಿತ ಗದ್ದೆಗಳು ಎಂ.ಒ4, ಜ್ಯೋತಿ, ಉಮಾ ಮತ್ತಿತರ ಸಾಂಪ್ರದಾಯಿಕ ತಳಿಗಳಿಗೆ ಸೀಮಿತವಾಗಿವೆ. ‘ಸಹ್ಯಾದ್ರಿ ಪಂಚಮುಖಿ’ಯು ನೆರೆ ಹಾವಳಿಯಿಂದ ಭತ್ತದ ಇಳುವರಿ ಕಡಿಮೆ ಪಡೆಯುವ ಕೃಷಿಕರಿಗೆ ಪರಿಹಾರ ರೂಪದಂತಿದೆ.

ಕರಾವಳಿಯಲ್ಲಿ ಮುಂಗಾರಿನಲ್ಲಿ ದಪ್ಪ ಗಾತ್ರದ, ಕೆಂಪು ಕಾಳಿನ ಭದ್ರ ಎಂ.ಓ4 ಭತ್ತದ ತಳಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಪ್ರವಾಹ ಪೀಡಿತ ಗದ್ದೆಗಳಲ್ಲಿ ಒಂದು ವಾರ ನೆರೆ ನೀರು ನಿಂತರೂ (ಮುಳುಗಡೆ), ಬಳಿಕ ಇಳುವರಿ ಕಡಿಮೆಯಾಗುತ್ತದೆ. ಕರಾವಳಿಯಲ್ಲಿ 300 ಹೆಕ್ಟೇರ್‌ ಗಿಂತಲೂ ಅಧಿಕ ಭತ್ತ ಬೆಳೆಯುವ ಪ್ರದೇಶವು ನಿರಂತರ ಮಳೆಯ ಕಾರಣ ನೆರೆಪೀಡಿತವಾಗಿದ್ದು, ಈ ಕಾರಣದಿಂದ ರೈತರು ಕಡಿಮೆ ಆದಾಯ ಹೊಂದುವಂತಾಗಿದೆ. ಹೀಗಾಗಿ ಬಯಲು ಗದ್ದೆಗೆ ಸೂಕ್ತವಾಗಬಲ್ಲ ಸಹ್ಯಾದ್ರಿ ಪಂಚಮುಖಿಯನ್ನು ಅಭಿವೃದ್ಧಿಪಡಿಸಲಾಗಿದೆ.

ADVERTISEMENT

‘ಬಯಲು ಗದ್ದೆಗಳಿಗೆ ಮುಂಗಾರು ಬೆಳೆಯಾಗಿ ಬೆಳೆಯಲು ಅತ್ಯಂತ ಪ್ರಶಸ್ತವಾಗಿದೆ. ನಾಲ್ಕೈದು ವರ್ಷಗಳಲ್ಲಿ ನಿರಂತರವಾಗಿ ಹೆಕ್ಟೇರ್‌ಗೆ ಸರಾಸರಿ 56 ಕ್ವಿಂಟಲ್ ಇಳುವರಿ ಕೊಟ್ಟಿದೆ. ಮುಂಗಾರಿನಲ್ಲಿ ಇದು ಸ್ಥಳೀಯ ಹೋಲಿಕೆ ತಳಿ ಎಂ.ಓ4 ನ (ಹೆಕ್ಟೇರ್ ಒಂದಕ್ಕೆ 48 ಕ್ವಿಂಟಲ್) ಇಳುವರಿಗಿಂತಲೂ ಶೇ 14 ರಷ್ಟು ಹೆಚ್ಚು ಫಸಲು ನೀಡುತ್ತಿದೆ’ ಎಂದು ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಶ್ರೀದೇವಿ ಎ.ಜಕ್ಕೇರಾಳ ವಿವರಿಸಿದರು.

ಹಸಿರು ಎಲೆಗಳುಳ್ಳ, ಎತ್ತರ ನಿಲುವನ್ನು ಹೊಂದಿದ ಈ ತಳಿಯಲ್ಲಿ ಹೆಚ್ಚಿನ ತೆಂಡೆಗಳನ್ನು ಕಾಣಬಹುದಾಗಿದೆ. ಸುಮಾರು 130 ರಿಂದ 135 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಹುಲ್ಲಿನ ಇಳುವರಿಯು ಅಧಿಕವಾಗಿದೆ ಮತ್ತು ಕೀಟ ಬಾಧೆಯನ್ನು ತಡೆದು ಬೆಳೆಯುವ ಸಾಮರ್ಥ್ಯ ಹೊಂದಿದೆ. ಬೆಂಕಿ ಮತ್ತು ಕಂದು ಮಚ್ಚೆ ರೋಗಕ್ಕೆ ಶೀಘ್ರ ಪ್ರತಿರೋಧವನ್ನು ಹೊಂದಿದೆ. ಈ ತಳಿಯಲ್ಲಿ ಜೊಳ್ಳು ಕಡಿಮೆ, ಭತ್ತ ಪುಷ್ಟಿದಾಯಕವಾಗಿದೆ ಎನ್ನುತ್ತಾರೆ ಅವರು.

ಈ ತಳಿಯ ಭತ್ತದ ಕಾಳುಗಳು ಭದ್ರ (ಎಂ.ಒ4) ತಳಿಯ ಭತ್ತದಂತೆ ದಪ್ಪ ಮತ್ತು ಮಧ್ಯಮ ಗಾತ್ರ ಹೊಂದಿದ್ದು, ಕುಚ್ಚಲಕ್ಕಿಗೆ ಯೋಗ್ಯವಾಗಿದೆ. ಗ್ರಾಹಕರ ಆದ್ಯತೆಯನ್ನು ಹೊಂದಿದೆ. ನೆರೆಹಾವಳಿಯನ್ನು 8 ರಿಂದ 12 ದಿನಗಳವರೆಗೂ ತಡೆದು ಬೆಳೆಯುವ ಸಾಮರ್ಥ್ಯ ಹೊಂದಿದ್ದು, ಮಾಗಿದ ಪೈರು ಕೊಯ್ಲಿಗೆ ವಿಳಂಬವಾದರೂ ಮಳೆ –ಗಾಳಿಯಿಂದ ನೆಲಕ್ಕೆ ಬೀಳುವುದಿಲ್ಲ ಹಾಗೂ ಜೈವಿಕ ಮತ್ತು ಅಜೈವಿಕ ಒತ್ತಡಗಳನ್ನೂ ತಡೆಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಕರಾವಳಿ ಪ್ರದೇಶಕ್ಕೆ ಅತಿ ಸೂಕ್ತ ಎನ್ನುತ್ತಾರೆ ಅವರು.

ಉತ್ತಮ ಇಳುವರಿ
ಕಳೆದ ವರ್ಷ ಶಿರ್ಲಾಲಿನಲ್ಲಿ ಸುಮಾರು 20 ಎಕರೆಯಲ್ಲಿ ಪಂಚಮುಖಿ ತಳಿಯನ್ನು ಬೆಳೆಸಿ ಸುಮಾರು 350 ಕ್ವಿಂಟಲ್‌ ಇಳುವರಿ ಪಡೆದಿದ್ದರು. ಈ ಬಾರಿ ಶಿರ್ವದ ಮಟ್ಟಾರು ಗ್ರಾಮದಲ್ಲಿ 25 ಎಕರೆಯಷ್ಟು ಜಾಗದಲ್ಲಿ ಬೆಳೆಯಲು ಯೋಜನೆ ಹಾಕಲಾಗಿದೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಧನಂಜಯ ತಿಳಿಸಿದರು.

‘ಜೂನ್ ಮೊದಲ ವಾರ ಬಿತ್ತನೆಗೆ ಸೂಕ್ತ’
ಈ ತಳಿಯು ಮೇ ತಿಂಗಳ ಕೊನೆಯ ಮತ್ತು ಜೂನ್ 1 ನೇ ವಾರದಲ್ಲಿ ಬಿತ್ತನೆಗೆ ಸೂಕ್ತವಾಗಿದೆ. ಪ್ರತಿ ಹೆಕ್ಟೇರ್‌ಗೆ 62ಕಿ.ಗ್ರಾಂ ರಸಗೊಬ್ಬರದೊಂದಿಗೆ ಸುಮಾರು 5 ಟನ್ ಹಸಿರೆಲೆ ಮತ್ತು ಕೊಟ್ಟಿಗೆ ಗೊಬ್ಬರವನ್ನು ಉಪಯೋಗಿಸಬಹುದು. 20ಸೆಂ.ಮೀ x10 ಸೆಂ.ಮೀ. ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದು. ಬೀಜವನ್ನು ಉಪ್ಪು ನೀರಿನ ದ್ರಾವಣದಲ್ಲಿ (1:4 ಪ್ರಮಾಣದಲ್ಲಿ) ಹಾಕಿ ಚೆನ್ನಾಗಿ ಕಲಸಬೇಕು. ಮೇಲೆ ತೇಲುತ್ತಿರುವ ಅರ್ಧ ಬಲಿತಿರುವ ಮತ್ತು ಜೊಳ್ಳಾದ ಬೀಜಗಳನ್ನು ಬೇರ್ಪಡಿಸಿ ಗಟ್ಟಿಯಾದ ಬಿತ್ತನೆ ಬೀಜವನ್ನು ಸ್ವಚ್ಛವಾದ ನೀರಿನಲ್ಲಿ ತೊಳೆದು ಬಿತ್ತನೆಗೆ ಉಪಯೋಗಿಸಬೇಕು. 25 ದಿನಗಳಿಗೂ ಹೆಚ್ಚಾದ ಪೈರನ್ನು ನಾಟಿಗೆ ಬಳಸುವುದು ಸೂಕ್ತವಲ್ಲ ಮತ್ತು 5 ಸೆಂ.ಮಿ.ಗೂ ಹೆಚ್ಚು ಆಳದಲ್ಲಿ ಪೈರು ನಾಟಿ ಮಾಡಬಾರದು ಎಂದು ತಳಿ ಅಭಿವೃದ್ಧಿ ಪಡಿಸಿದ ವಿಜ್ಞಾನಿ ಶ್ರೀದೇವಿ ಎ.ಜಕ್ಕೇ ರಾಳ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಾಹಿತಿಗೆ (ಮೊಬೈಲ್‌ ಸಂಖ್ಯೆ 9538200850) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.