ಕುಂದಾಪುರ: ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಮನ್ಮಹಾರಥೋತ್ಸವ ಶನಿವಾರ ವೈಭವದಿಂದ ಸಂಪನ್ನಗೊಂಡಿತು. ದೇವಿಯ ವಿಜೃಂಭಣೆಯ ಉತ್ಸವಕ್ಕೆ ಆಸುಪಾಸಿನ ಗ್ರಾಮಗಳು, ರಾಜ್ಯ, ಹೊರ ರಾಜ್ಯ, ವಿದೇಶದಿಂದ ಬಂದಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.
ವ್ಯವಸ್ಥಾಪನಾ ಸಮಿತಿ ಸದಸ್ಯ, ದೇಗುಲದ ಪ್ರಧಾನ ತಂತ್ರಿ ನಿತ್ಯಾನಂದ ಅಡಿಗ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುಹೂರ್ತ ಬಲಿ, ಕ್ಷಿಪ್ರ ಬಲಿ, ರಥಬಲಿಯ ಬಳಿಕ ಮಧ್ಯಾಹ್ನ 12.30ರ ವೇಳೆಗೆ ಜೋಡಿ ಉತ್ಸವಮೂರ್ತಿಗಳನ್ನು ಗರ್ಭಗುಡಿಯಿಂದ ಹೊರತಂದು, ಸುತ್ತ ಪೌಳಿಯಲ್ಲಿ ಮೂರು ಸುತ್ತು ಉತ್ಸವ ನಡೆಸಿ, ಬಳಿಕ ಓಡ ಬಲಿ ಸೇವೆಗಾಗಿ ಸೌಪರ್ಣಿಕಾ ನದಿ ತೀರಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಗರ್ಭಗುಡಿಯಿಂದ ತರಲಾದ ಜೋಡಿ ಉತ್ಸವ ಮೂರ್ತಿಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥಪೂಜೆ ನಡೆಸಿದ ಬಳಿಕ, ಸಾವಿರಾರು ಭಕ್ತರ ಜಯಘೋಷದ ನಡುವೆ ಬೀದಿ ಗಣಪತಿ ದೇವಸ್ಥಾನದವರೆಗೆ ರಥೋತ್ಸವ ನಡೆಸಲಾಯಿತು. ಸಂಜೆ ಬ್ರಹ್ಮರಥದಲ್ಲಿ ದೇವರನ್ನು ಕೂರಿಸಿ ರಥಬೀದಿಯಲ್ಲಿ ಶಂಕರಾಶ್ರಮದವರೆಗೆ ಕೊಂಡೊಯ್ಯಲಾಯಿತು. ರಥಬೀದಿಯ ಉತ್ಸವಾಚರಣೆಯ ಬಳಿಕ ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಒಳಗೆ ಕೊಂಡೊಯ್ಯಲಾಯಿತು. ಚೆಂಡೆ ವಾದನ, ತಟ್ಟಿರಾಯ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳು ಮೆರುಗು ನೀಡಿದವು. ದೇವಸ್ಥಾನದ ಹೊರ, ಒಳ ಆವರಣವನ್ನು ಹೂವು, ಹಣ್ಣುಗಳಿಂದ ಅಲಂಕರಿಸಲಾಗಿತ್ತು.
ದೇವಸ್ಥಾನದ ಖುತ್ವೀಜರಾದ ಶ್ರೀಧರ ಅಡಿಗ, ಕೆ.ಎನ್. ಗೋವಿಂದ ಅಡಿಗ, ರಾಮಚಂದ್ರ ಅಡಿಗ, ಸುಬ್ರಹ್ಮಣ್ಯ ಅಡಿಗ, ವಿಘ್ನೇಶ್ ಅಡಿಗ, ಗಜಾನನ ಜೋಯಿಸ್, ಸುದರ್ಶನ್ ಜೋಯಿಸ್, ಕಾಳಿದಾಸ ಭಟ್, ಸುರೇಶ್ ಭಟ್, ಶಿವಾನಂದ ಜೋಯಿಸ್, ಅಶ್ವಿನ್ ಭಟ್ ದಳಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಮಾ. 15ರಂದು ಗಣಪತಿ ಪ್ರಾರ್ಥನೆಯೊಂದಿಗೆ ಆರಂಭವಾದ ವಾರ್ಷಿಕ ಉತ್ಸವದ ಅಂಗವಾಗಿ ಪ್ರತಿದಿನ ವಿಶೇಷ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿತ್ತು. 16ರಂದು ಮಾಂಗಲ್ಯೋತ್ಸವ, ಮಯೂರಾರೋಹಣೋತ್ಸವ, 17ರಂದು ಡೋಲಾರೋಹಣೋತ್ಸವ, 18ರಂದು ಪುಷ್ಪಮಂಟಪಾರೋಹಣೋತ್ಸವ, 19ರಂದು ವೃಷಭಾರೋಹಣೋತ್ಸವ, 20ರಂದು ಗಜಾರೋಹಣೋತ್ಸವ, 21ರಂದು ಸಿಂಹಾರೋಹಣೋತ್ಸವಾಚರಣೆ ನಡೆಸಲಾಗಿತ್ತು.
ಇಂದು (ಮಾ. 23) ಓಕುಳಿ, ಅವಭೃತ ಸ್ನಾನ, ಸೋಮವಾರ (ಮಾ. 24) ಅಶ್ವರೋಹಣೋತ್ಸವ, ಧ್ವಜಾವರೋಹಣ ಮಹಾಪೂರ್ಣಾಹುತಿ, ಪೂರ್ಣಕುಂಭಾಭಿಷೇಕ, ಅಂಕುರ ಪ್ರಸಾದ ವಿತರಣೆ ನಡೆಯಲಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ ಶೆಟ್ಟಿ, ಶಾಸಕ ಗುರುರಾಜ್ ಗಂಟಿಹೊಳೆ, ಮುಖಂಡ ಕೆ. ಗೋಪಾಲ ಪೂಜಾರಿ, ಉಪ ವಿಭಾಗಾಧಿಕಾರಿ ಕೆ. ಮಹೇಶ್ಚಂದ್ರ, ಜಯರತ್ನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ದಿನೇಶ್ ಹೆಗ್ಡೆ ಮೊಳಹಳ್ಳಿ,
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು. ರಾಜೇಶ್ ಕಾರಂತ್, ಡಾ.ಅಭಿಲಾಶ್ ಪಿ.ವಿ, ರಘುರಾಮ ದೇವಾಡಿಗ ಆಲೂರು, ಧನಾಕ್ಷಿ ವಿಶ್ವನಾಥ್ ಪೂಜಾರಿ, ಕೆ. ಸುಧಾ, ಮಹಾಲಿಂಗ ನಾಯ್ಕ್, ಸುರೇಂದ್ರ ಶೆಟ್ಟಿ, ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ರಮೇಶ್ ಗಾಣಿಗ, ಚುಚ್ಚಿ ನಾರಾಯಣ ಶೆಟ್ಟಿ, ಮೋಹನಚಂದ್ರ ನಂಬಿಯಾರ್, ರತ್ನ ರಮೇಶ್ ಕುಂದರ್, ಸಂಧ್ಯಾ ರಮೇಶ್, ಜಯಂತಿ ವಿಜಯ್‌ಕೃಷ್ಣ, ನರಸಿಂಹ ಹಳಗೇರಿ, ಮುಜರಾಯಿ ಇಲಾಖೆ ಅಧಿಕಾರಿಗಳಾದ ಎಸ್.ಪಿ.ಬಿ. ಮಹೇಶ್, ಅರವಿಂದ್ ಅಯ್ಯಪ್ಪ ಸುತಗುಂಡಿ, ಗ್ರಾ.ಪಂ. ಅಧ್ಯಕ್ಷೆ ಪ್ರಸನ್ನ ಶರ್ಮಾ, ಉಪಾಧ್ಯಕ್ಷ ನಾಗಾ ಪೂಜಾರಿ, ಮಾಜಿ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಸದಾಶಿವ ಶೆಟ್ಟಿ, ಪ್ರಮುಖರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಕರುಣಾಕರನ್ ಬೇಕಲ್, ಉದ್ಯಮಿಗಳಾದ ವೆಂಕಟೇಶ್ ಬೆಂಗಳೂರು, ಭಾಸ್ಕರ್ ಮಾಲೂರು, ಕುರಿಪ್ಪು ಕೇರಳ, ಸುಧೀರ್ ಕೆ.ಎಸ್, ದೇಗುಲದ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್ ಭಾಗವಹಿಸಿದ್ದರು.
Highlights - null
Quote - ಜಾತ್ರೆಗೆ ದೇಶ– ವಿದೇಶದಿಂದ ಬಂದಿದ್ದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಕೆ. ಬಾಬು ಶೆಟ್ಟಿ ತಗ್ಗರ್ಸೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
Cut-off box - ಬದಲಾದ ಮುಹೂರ್ತ ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ 11.30ರ ಮಿಥುನ ಲಗ್ನದ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ಎಂದು ನಿಗದಿ ಪಡಿಸಲಾಗಿತ್ತು. ಮುಹೂರ್ತ ಕಳೆದು 12.30ರವರೆಗೂ ಉತ್ಸವ ಮೂರ್ತಿಗಳು ಗರ್ಭಗುಡಿಯಿಂದ ಹೊರ ಬಂದಿರಲಿಲ್ಲ. ರಥೋತ್ಸವ ಆರಂಭವಾಗಲು ಮಧ್ಯಾಹ್ನ 2 ಗಂಟೆ ದಾಟಿತ್ತು. ದೇವರನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥಾರೋಹಣ ನಡೆಸುವ ಸಂದರ್ಭದಲ್ಲಿ ಋತ್ವೀಜರು ಮೇಲಿನಿಂದ ಎಸೆದ ನಾಣ್ಯಗಳನ್ನು ಪಡೆದುಕೊಳ್ಳಲು ಭಕ್ತರು ನೂಕುನುಗ್ಗಾಟ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.