ಹೆಬ್ರಿ: ಹೆಬ್ರಿಯ ಜೀವನದಿ ಸೀತಾನದಿಯ ಡ್ಯಾಂನಲ್ಲಿ ಏಪ್ರಿಲ್ ತಿಂಗಳಲ್ಲೂ ನೀರು ತುಂಬಿದ್ದು, ಈ ಪರಿಸರದ ಜನರಲ್ಲಿ ನೆಮ್ಮದಿ ಮೂಡಿಸಿದೆ.
ಹೆಬ್ರಿಯ ಕಲ್ಲಿಲ್ಲು ಎಂಬಲ್ಲಿರುವ ಡ್ಯಾಂ ಪೂರ್ಣ ತುಂಬಿರುವುದರಿಂದ ಈ ಸಲ ನೀರಿನ ಭವಣೆ ಎದುರಾಗುವ ಸಾಧ್ಯತೆ ಕಡಿಮೆ ಎಂಬ ವಿಶ್ವಾಸದಲ್ಲಿದ್ದಾರೆ ಅಲ್ಲಿನ ನಿವಾಸಿಗಳು.
ಕಳೆದ ಕೆಲವು ವರ್ಷಗಳಲ್ಲಿ ಹೆಬ್ರಿಯಲ್ಲೂ ನೀರಿನ ಸಮಸ್ಯೆ ಕಾಡಿದ್ದು, ಖಾಸಗಿ ಬಾವಿ ಬೋರ್‌ವೆಲ್‌ಗಳಿಂದ ನೀರು ಸಂಗ್ರಹಿಸಿ ಟ್ಯಾಂಕರ್ ಮೂಲಕ ಗ್ರಾಮಸ್ಥರ ಮನೆಮನೆಗೆ ಸರಬರಾಜು ಮಾಡಲಾಗಿತ್ತು.
ಹೆಬ್ರಿಯ ಬಹುತೇಕ ಮನೆಗಳಿಗೆ ಹೆಬ್ರಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ನೀರು ಸರಬರಾಜು ಆಗುತ್ತಿದೆ. ಕೆಲವು ಮನೆಗಳಲ್ಲಿ ಸ್ವಂತ ಬಾವಿ, ಬೋರ್‌ವೆಲ್ ಗಳಿವೆ. ಅಲ್ಲೆಲ್ಲೂ ನೀರಿನ ಸಮಸ್ಯೆ ಕಾಡುತ್ತಿಲ್ಲ.
ಸುಮಾರು 7200 ರಷ್ಟು ಜನಸಂಖ್ಯೆ ಹೆಬ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು ಎರಡು ಸಾವಿರ ಕುಟುಂಬಗಳಿವೆ. 1200 ಕುಟುಂಬಗಳು ಗ್ರಾಮ ಪಂಚಾಯಿತಿಯ ನಲ್ಲಿ ನೀರಿನ ಸಂಪರ್ಕ ಪಡೆದಿವೆ.
ಈ ತನಕ ಪಂಚಾಯಿತಿ ವ್ಯಾಪ್ತಿಯ ಎಲ್ಲಿಯೂ ನೀರಿನ ಸಮಸ್ಯೆ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಕಲ ಸಿದ್ಧತೆ: ನಮ್ಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಜಲಮೂಲಗಳು ಕೂಡ ಭರ್ತಿಯಾಗಿವೆ. ಸೀತಾನದಿಯ ಡ್ಯಾಂನಲ್ಲಿ ನೀರು ತುಂಬಿದೆ. ಆದರೂ ನಾವು ಮುಂಜಾಗೃತಾ ಕ್ರಮವಾಗಿ ಖಾಸಗಿ ಬಾವಿ ಬೋರ್‌ವೆಲ್‌ಗಳನ್ನು ಗುರುತಿಸಿಕೊಂಡಿದ್ದೇವೆ ಎಂದು ಹೆಬ್ರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸದಾಶಿವ ಸೇರ್ವೆಗಾರ್ ತಿಳಿಸಿದರು.
ನೀರಿನ ಸಮಸ್ಯೆ ಎದುರಾದರೆ ಹೇಗೆ ನಿಭಾಯಿಸಬಹುದು ಎಂಬುದರ ಕುರಿತು ಪಂಚಾಯಿತಿಯು ಹಲವು ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ ಎಂದರು.
ನೀರಿನ ಸಮಸ್ಯೆ ಕಾಡಿದರೂ ಹೆಬ್ರಿ ಪಂಚಾಯಿತಿ ಆಡಳಿತವು ಗ್ರಾಮಸ್ಥರಿಗೆ ನೀರಿನ ವ್ಯವಸ್ಥೆ ಮಾಡಲು ಸನ್ನದ್ಧವಾಗಿದೆ. ವಾರಾಹಿಯಿಂದ ಮನೆಮನೆಗೆ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್ ನೀರಿನ ಯೋಜನೆ ಪೈಪ್ ಲೈನ್ ಕಾರ್ಯ ಪ್ರಗತಿಯಲ್ಲಿದ್ದು ಅದು ಮುಗಿದ ಕೂಡಲೇ ನೀರಿನ ಸಮಸ್ಯೆಗೆ ಹೆಚ್ಚಿನ ಪರಿಹಾರ ದೊರೆಯಲಿದೆ ಎಂದು ಹೇಳಿವೆ ಮೂಲಗಳು.
ನೀರಿನ ಸಮಸ್ಯೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಲ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ನೀರಿನ ಸಮಸ್ಯೆ ಕಾಡದು ಎಂಬುದು ನಮ್ಮ ನಂಬಿಕೆಸದಾಶಿವ ಸೇರ್ವೆಗಾರ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.