ಪಡುಬಿದ್ರಿ: ಇಲ್ಲಿನ ಪಡುಬಿದ್ರಿ– ಕಾರ್ಕಳ ರಾಜ್ಯ ಹೆದ್ದಾರಿಯ ನಂದಿಕೂರು ರೈಲ್ವೇ ಸೇತುವೆ ಪದೇ ಪದೇ ಹದಗೆಡುತ್ತಿದ್ದು, ರಸ್ತೆಯಲ್ಲಿ ಸಂಚಾರ ದುಸ್ಥರವಾಗಿದೆ.
ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ನಿರ್ವಹಣೆಗೆ ಕೊಂಕಣ ರೈಲ್ವೆಯ ವ್ಯಾಪ್ತಿಗೊಳಪಟ್ಟಿದೆ. ಕೊಂಕಣ ರೈಲ್ವೆಯ ನಿರಾಸಕ್ತಿ, ನಿರಾಕ್ಷೇಪಣಾ ಪತ್ರದ ಗೊಂದಲದಿಂದ ಲೋಕೋಪಯೋಗಿ ಇಲಾಖೆಗೆ ವಾರ್ಷಿಕವಾಗಿ 3–4 ಬಾರಿ ದುರಸ್ತಿ ಮಾಡುವುದು ಬಿಟ್ಟರೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಇನ್ನೂ ಸಾಧ್ಯವಾಗಿಲ್ಲ.
ಸೇತುವೆ ಸಮಸ್ಯೆ ಬಗ್ಗೆ ಸ್ಥಳೀಯರು ರೈಲ್ವೆ ಇಲಾಖೆಗೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಸ್ಥಳೀಯರು ಗಿಡ ನೆಟ್ಟು ಪ್ರತಿಭಟನೆ ನಡೆಸಿದ್ದರು. 4 ವರ್ಷಗಳಿಂದ ಹಲವು ಬಾರಿ ಹೊಂಡ ಮುಚ್ಚುವ ಕೆಲಸವನ್ನು ಲೋಕೋಪಯೋಗಿ ಇಲಾಖೆ ಮಾಡಿದ್ದು, ಶಾಶ್ವತ ಪರಿಹಾರ ದೊರೆತಿಲ್ಲ.
2023ರ ಡಿಸೆಂಬರ್‌ನಲ್ಲಿ ಪಿಡಬ್ಲ್ಯು ಡಾಂಬರ್ ಕಿತ್ತು ಮರು ಡಾಮರೀಕರಣಗೊಳಿಸಿತ್ತು. ಆದರೆ ಮುಂಗಾರು ಪೂರ್ವ ಮಳೆಗೆ ಅದು ಕೊಚ್ಚಿ ಹೋಗಿದೆ. ಸ್ವಲ್ಪ ಮಳೆ ಬಂದರೂ ಸೇತುವೆ ಮೇಲೆ ನಿಲ್ಲುವ ನೀರಿನ ಸರಾಗ ಹರಿವಿಗೆ ಕೊಂಕಣ ರೈಲ್ವೆ ಮುಂದಾಗುತ್ತಿಲ್ಲ. ಈಗ ಸೇತುವೆ ಮಧ್ಯಭಾಗದಲ್ಲಿ ಹೊಂಡ ಕಾಣಿಸಿಕೊಂಡಿದ್ದು, ದಿನದಿನಕ್ಕೆ ಗಾತ್ರ ಹಿರಿದಾಗುತ್ತಿದೆ. ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.
ಯುಪಿಸಿಎಲ್, ನಂದಿಕೂರು ಕೈಗಾರಿಕಾ ಪ್ರದೇಶ ಸೇರಿದಂತೆ ಕಾರ್ಕಳ ಕಡೆ ಪ್ರತಿದಿನ ಶಾಲಾ ವಾಹನಗಳು, ಘನ ವಾಹನಗಳ ಸಹಿತ ಸಾವಿರಾರು ವಾಹನಗಳು ಸಂಚರಿಸುವ ಪ್ರಮುಖ ಸಂಪರ್ಕ ರಸ್ತೆ ಇದಾಗಿದೆ. ಇದೇ ಪ್ರದೇಶಕ್ಕೆ ಹೊಂದಿಕೊಂಡು ಕೈಗಾರಿಕಾ ಪ್ರದೇಶ, ಹೆದ್ದಾರಿ ಆಸುಪಾಸಿನಲ್ಲಿ 2 ರಾಷ್ಟ್ರೀಕೃತ ಬ್ಯಾಂಕ್‌ಗಳಿವೆ. ಅಪಾಯಕಾರಿಯಾಗಿ ವಾಹನ ಸಂಚಾರದಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಡಾಮರೀಕರಣವಾದ ಕೆಲವೇ ತಿಂಗಳಿನಲ್ಲಿ ಹೊಂಡ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಒತ್ತಾಯನಕ್ಕೆ ಮಣಿದು ಮತ್ತೆ ತೇಪೆ ಹಚ್ಚಲಾಗಿದೆ. ಆದರೆ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೈಗಾರಿಕಾ ಘಟಕಗಳ ಹೆಚ್ಚಳದಿಂದ ಘನವಾಹನಗಳ ನಿರಂತರ ಸಂಚಾರದಿಂದ ದುರಸ್ತಿ ಮಾಡಿದರೂ ಹೊಂಡಮಯವಾಗುವ ಪಡುಬಿದ್ರಿ– ಕಾರ್ಕಳ ರಾಜ್ಯ ಹೆದ್ದಾರಿಯ ನಂದಿಕೂರು ರೈಲ್ವೇ ಸೇತುವೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ರೈಲ್ವೆ, ಲೋಕೋಪಯೋಗಿ ಇಲಾಖೆ ವಿಫಲವಾಗಿವೆ ಎಂದು ಸಾಮಾಜಿಕ ಕಾರ್ಯಕರ್ತ ದೀಪಕ್ ಕಾಮತ್ ಕಾಂಜರಕಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೇತುವೆ ದುರಸ್ತಿಗೆ ವರ್ಷದ ಹಿಂದೆ ಸಂಸದರ ಸಹಿತ ಕೊಂಕಣ ರೈಲ್ವೆ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಇಲಾಖೆಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಮತ್ತೆ ಬೇಡಿಕೆ ಸಲ್ಲಿಸಲಾಗುವುದು.– ಸೌಮ್ಯಲತಾ ಶೆಟ್ಟಿ, ಪಲಿಮಾರು ಗ್ರಾ.ಪಂ. ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.