ಬ್ರಹ್ಮಾವರ: ‘ಪಾರಂಪಳ್ಳಿ ನರಸಿಂಹ ಐತಾಳರು ಸಾಹಿತ್ಯ, ಸಂಗೀತ, ನೃತ್ಯ, ಸಂಘಟನೆ, ರಂಗಭೂಮಿ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಮಕ್ಕಳ ಸ್ನೇಹಿಯಾಗಿ ಅವರು ನೀಡಿರುವ ಚಟುವಟಿಕೆಗಳು ಅನನ್ಯ. ಸುಪ್ರಭಾತ ಐತಾಳರೆಂದೇ ಪ್ರಸಿದ್ಧರಾಗಿರುವ ಅವರ ಸಾಧನೆಗಳು ಮುಂದಿನ ಪೀಳಿಗೆಗೆ ದಾರಿದೀಪ’ ಎಂದು ಉಡುಪಿ ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ನಿ.ಬೀ. ವಿಜಯ ಬಲ್ಲಾಳ ಹೇಳಿದರು.
ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಕೋಟ ಮಿತ್ರ ಮಂಡಳಿಯ ಆಶ್ರಯದಲ್ಲಿ ನಡೆದ ಹುಟ್ಟೂರು ಸಾಧಕ ಶ್ರೀಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಿತ್ರ ಮಂಡಳಿಯ ಗಿಳಿಯಾರು ಶ್ರೀನಿವಾಸ ಅಡಿಗ ಅಭಿನಂದನಾ ಭಾಷಣ ಮಾಡಿದರು. ‘ಪಾರಂಪಳ್ಳಿ ನರಸಿಂಹ ಐತಾಳರ ಬದುಕು ಬರಹ ಕೃತಿಗಳ ಬಗ್ಗೆ’ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕವಯಿತ್ರಿ ಸುಮನಾ ಹೇರ್ಳೆ, ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಹೇರ್ಳೆ, ಕೋಟ ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಪಿ. ಮಂಜುನಾಥ ಉಪಾಧ್ಯ ಮಾತನಾಡಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಗೌರವ ಕೋಶಾಧ್ಯಕ್ಷ ಮನೋಹರ ಪಿ., ಮಿತ್ರ ಮಂಡಳಿಯ ರಂಗಪ್ಪಯ್ಯಹೊಳ್ಳ, ಶ್ರೀನಿವಾಸ ಉಪಾಧ್ಯ, ಶ್ರೀದೇವಿ ಹಂದೆ, ವಿಜಯಲಕ್ಷ್ಮಿ, ಮುಖ್ಯ ಶಿಕ್ಷಕ ನಾಗೇಶಮಯ್ಯ ಇದ್ದರು.
ಇದೇ ಸಂದರ್ಭ ಸಾಹಿತಿ, ರಂಗಕರ್ಮಿ ಮತ್ತು ಸಾಂಸ್ಕೃತಿಕ ಚಿಂತಕ ಪಾರಂಪಳ್ಳಿ ನರಸಿಂಹ ಐತಾಳ ಅವರಿಗೆ ‘ಹುಟ್ಟೂರು ಸಾಧಕ ಶ್ರೀಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಶ್ರೀದೇವಿ ಹಂದೆ ಪ್ರಾರ್ಥಿಸಿದರು. ಕೋಟ ಮಿತ್ರ ಮಂಡಳಿ ಅಧ್ಯಕ್ಷ ಉಪೇಂದ್ರ ಸೋಮಯಾಜಿ ಸ್ವಾಗತಿಸಿದರು. ಕಸಾಪ ಬ್ರಹ್ಮಾವರ ತಾಲ್ಲೂಕು ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.