ADVERTISEMENT

ಉಡುಪಿ | ಸರ್ವೀಸ್ ರಸ್ತೆ ಅವಾಂತರ: ಹೆದ್ದಾರಿ ಸಂಚಾರ ದುಸ್ತರ

ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ವಾಹನ ಸವಾರರು: ಅಪಘಾತ ಪ್ರಮಾಣ ಹೆಚ್ಚಳ

ಬಾಲಚಂದ್ರ ಎಚ್.
Published 4 ಸೆಪ್ಟೆಂಬರ್ 2022, 19:30 IST
Last Updated 4 ಸೆಪ್ಟೆಂಬರ್ 2022, 19:30 IST
ಉದ್ಯಾವರ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಮಗಾರಿಗೆ ತೆಗೆದಿರುವ ಬೃಹತ್ ಗುಂಡಿ.
ಉದ್ಯಾವರ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಮಗಾರಿಗೆ ತೆಗೆದಿರುವ ಬೃಹತ್ ಗುಂಡಿ.   

ಉಡುಪಿ: ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಹಾಗೂ ಅಪೂರ್ಣ ಕಾಮಗಾರಿಯಿಂದ ವಾಹನ ಸವಾರರು ಹಾಗೂ ಹೆದ್ದಾರಿ ಬದಿಯಲ್ಲಿರುವ ಗ್ರಾಮಗಳ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ. ಹೆದ್ದಾರಿ ಬದಿಯಲ್ಲಿ ಅಪೂರ್ಣ ಸರ್ವೀಸ್ ರಸ್ತೆಗಳಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಅವಘಡಗಳಲ್ಲಿ ಹಲವರು ಪ್ರಾಣ ಕಳೆದುಕೊಂಡರೆ, ಹಲವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ.

ಸರ್ವೀಸ್ ರಸ್ತೆ ನಿರ್ಮಾಣದ ಉದ್ದೇಶ:ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಗ್ರಾಮ, ಪಟ್ಟಣ ಹಾಗೂ ನಗರಗಳ ಜನರು ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳಲು ಅನುಕೂಲ ಮಾಡಿಕೊಡುವುದು ಹಾಗೂ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವುದು, ಸ್ಥಳೀಯರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಸರ್ವೀಸ್‌ ರಸ್ತೆಗಳ ನಿರ್ಮಾಣದ ಹಿಂದಿರುವ ಪ್ರಮುಖ ಉದ್ದೇಶ. ಆದರೆ, ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸರ್ವೀಸ್ ರಸ್ತೆಗಳು ಇಲ್ಲದೆ ಸಮಸ್ಯೆ ಗಂಭೀರವಾಗಿದೆ.

ಉಡುಪಿಯಲ್ಲಿ ಎಲ್ಲೆಲ್ಲಿ ಸಮಸ್ಯೆ:ಉಡುಪಿಯ ಕಿನ್ನಿಮೂಲ್ಕಿ ಸ್ವಾಗತ ಗೋಪುರದಿಂದ ಅನತಿದೂರದಿಂದ ಹಿಡಿದು ಗುಡ್ಡೆಯಂಗಡಿ–ಬಲೈಪಾದೆ–ಉದ್ಯಾವರ ಜಂಕ್ಷನ್‌ವರೆಗೂ ಸರ್ವೀಸ್‌ ರಸ್ತೆ ಬೇಕು ಎಂಬುದು ಸ್ಥಳೀಯರ ಬಹು ದಿನಗಳ ಬೇಡಿಕೆ. ಈ ಭಾಗದಲ್ಲಿ ಸರ್ವೀಸ್‌ ರಸ್ತೆ ಇಲ್ಲದೆ ನಿತ್ಯ ಅಪಘಾತಗಳು ನಡೆಯುತ್ತಿವೆ.

ADVERTISEMENT

ಹೆದ್ದಾರಿಯಲ್ಲಿ ಸುತ್ತಿ ಬಳಸಿದರೆ ಮೂರ್ನಾಲ್ಕು ಕಿ.ಮೀ ಕ್ರಮಿಸಬೇಕಾಗುತ್ತದೆ ಎಂಬ ಕಾರಣಕ್ಕೆ ವಾಹನ ಸವಾರರು ಗುಡ್ಡೆಯಂಗಡಿ ಹಾಗೂ ಬಲಾಯಿಪಾದೆ ಬಳಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಾರೆ. ಗುಡ್ಡೆಯಂಗಡಿಯಿಂದ ಒನ್‌ವೇನಲ್ಲಿ ಸಾಗಿದರೆ ಬಲೈಪಾದೆ ಜಂಕ್ಷನ್‌ ತಲುಪಲು 100 ಮೀಟರ್ ಸಾಕು. ಇಲ್ಲವಾದರೆ, ಕಟಪಾಡಿ ಜಂಕ್ಷನ್‌ಗೆ ಹೋಗಿ ಅಲ್ಲಿಂದ ಯೂ ಟರ್ನ್ ತೆಗೆದುಕೊಂಡು ಬಲೈಪಾದೆ ಮುಟ್ಟಬೇಕು.

ಪೆಟ್ರೋಲ್ ಹಾಗೂ ಸಮಯ ಉಳಿಸಲು ಹೆಚ್ಚಿನ ಸವಾರರು ಪ್ರಾಣ ಪಣಕ್ಕಿಟ್ಟು ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದಾರೆ. ಹೀಗೆ, ಸಾಗುವಾಗ ಕೆಲವೊಮ್ಮೆ ಅಪಘಾತಗಳಿಗೆ ತುತ್ತಾಗಿ ಬಲಿಯಾಗುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಬಹುತೇಕ ವಾಹನಗಳು ಕನಿಷ್ಠ 100 ಕಿ.ಮೀ ವೇಗದಲ್ಲಿ ಸಂಚರಿಸುವುದರಿಂದ ಅಪಾಯಕಾರಿ ತಿರುವುಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಏಕಾಏಕಿ ವಾಹನಗಳು ಎದುರಾಗುತ್ತಿರುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.

ಗುಡ್ಡೆಯಂಗಡಿ ಬಳಿ ಇರುವ ಹಲಿಮಾ ಸಬ್ಜು ಆಡಿಟೋರಿಯಂನಲ್ಲಿ ನಡೆಯುವ ಸಮಾರಂಭಗಳಿಗೆ ಕಟಪಾಡಿಯಿಂದ ಬರುವ ಹೆಚ್ಚಿನ ವಾಹನ ಸವಾರರು ವಿರುದ್ಧ ದಿಕ್ಕಿನಲ್ಲಿಯೇ ಬರುತ್ತಾರೆ. ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತಿದ್ದರೂ ಏಕಮುಖ ಸಂಚಾರ ನಿಂತಿಲ್ಲ. ಸರ್ವೀಸ್‌ ರಸ್ತೆ ನಿರ್ಮಾಣವಾದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುತ್ತಾರೆ ಪೊಲೀಸರು.

ಕೊರಂಗ್ರಪಾಡಿಯ ಮೂಲಕವೂ ವಾಹನಗಳು ಏಕಮುಖವಾಗಿ ರಸ್ತೆಗೆ ಬರುತ್ತಿವೆ. ಹೆದ್ದಾರಿ ಬದಿಯಲ್ಲಿ ಗೂಡಂಗಡಿಗಳು ತಲೆ ಎತ್ತಿರುವುದರಿಂದ ಜಂಕ್ಷನ್‌ನಲ್ಲಿ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ.

ರಾಷ್ಟ್ರೀಯ ಹೆದ್ದಾರಿ 169 ಎ ಹಾಗೂ 66 ವ್ಯಾಪ್ತಿಯಲ್ಲಿ 32 ಬ್ಲಾಕ್ ಸ್ಪಾಟ್‌ಗಳನ್ನು (ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳಗಳು) ಜಿಲ್ಲಾಡಳಿತ ಗುರುತಿಸಿದ್ದು, ಇವುಗಳಲ್ಲಿ 17 ಬ್ಲಾಕ್‌ ಸ್ಪಾಟ್‌ಗಳು ಹೆದ್ದಾರಿ 66ರ ವ್ಯಾಪ್ತಿಯಲ್ಲಿವೆ. ನಿಯಮಗಳ ಪ್ರಕಾರ ಬ್ಲಾಕ್‌ ಸ್ಪಾಟ್‌ಗಳಲ್ಲಿ ಅಗತ್ಯವಿದ್ದರೆ ಸರ್ವೀಸ್‌ ರಸ್ತೆಗಳನ್ನು ನಿರ್ಮಿಸಬೇಕು. ಈಚೆಗೆ ಜಿಲ್ಲಾಧಿಕಾರಿ ಕೂಡ ಅಗತ್ಯವಿರುವ ಕಡೆಗಳಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಿದ್ದರೂ ಪಾಲನೆಯಾಗಿಲ್ಲ.

ಇನ್ನೂ ಸಂತೆಕಟ್ಟೆ ಜಂಕ್ಷನ್‌ನಿಂದ ಉಡುಪಿಯ ಹುಂಡೈ ಶೋರೂಂವರೆಗೂ ಸರ್ವೀಸ್‌ ರಸ್ತೆ ಬೇಕು ಎಂಬ ಬೇಡಿಕೆ ಇದೆ. ಈ ಭಾಗದಲ್ಲೂ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ.

ಕುಂದಾಪುರದಲ್ಲಿ ಅವ್ಯವಸ್ಥೆ:ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಿನಾಯಕ ಟಾಕೀಸ್‌ನಿಂದ ಸಂತೆ ಮಾರುಕಟ್ಟೆಗೆ ಬರುವ ಮಾರ್ಗದ ಸರ್ವೀಸ್ ರಸ್ತೆಯ ಎರಡು ಬದಿಯಲ್ಲಿ ಒಂದಲ್ಲ ಒಂದು ಸಮಸ್ಯೆ ಜನರನ್ನು ಕಾಡುತ್ತಿದೆ. ಕೋಣಿ ಮೂರುಕೈಯಿಂದ ವಿನಾಯಕ ಟಾಕೀಸ್‌ವರೆಗಿನ ರಸ್ತೆ ಪ್ರತಿ ಮಳೆಗಾಲದಲ್ಲಿ ಕೃತಕ ಸರೋವರವಾಗುತ್ತದೆ. ಪರಿಣಾಮ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ.

ಹೆದ್ದಾರಿಯ ಮೇಲ್ಭಾಗದಿಂದ ನಗರ ಪ್ರವೇಶಕ್ಕೆ ಇನ್ನೂ ಪ್ರವೇಶ ಸಿಗದ ಕಾರಣ ಉಭಯ ಕಡೆಗಳಲ್ಲಿನ ಸರ್ವೀಸ್ ರಸ್ತೆಯ ಮೇಲೆ ವಾಹನ ಒತ್ತಡ ಇದೆ. ಕುಂಭಾಸಿ-ತೆಕ್ಕಟ್ಟೆ ಮಾರ್ಗದಲ್ಲಿಯೂ ಜನರ ಅಪೇಕ್ಷೆಗೆ ಅನುಗುಣವಾಗಿ ಸರ್ವೀಸ್ ರಸ್ತೆ ನಿರ್ಮಾಣವಾಗಿಲ್ಲ. ಹೆದ್ದಾರಿಯ ಒಂದು ಕಡೆಯ ರಸ್ತೆಯಿಂದ ಮತ್ತೊಂದು ಕಡೆಯ ರಸ್ತೆಗೆ ಬರಲು ಕಿ.ಮೀ ದೂರವನ್ನು ಸುತ್ತಿ ಬರಬೇಕಾದ ಅನೀವಾರ್ಯತೆ ಇದೆ.

ಹರಿಪ್ರಸಾದ್ ಹೋಟೇಲ್ ಸಮೀಪದಲ್ಲಿನ ಅಂಡರ್ ಪಾಸ್ ಸರಿಯಾಗಿ ಬಳಕೆಗೆ ಅವಕಾಶ ದೊರಕಿಲ್ಲ. ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯಿಂದ ಹಳೆಯ ಆದರ್ಶ ಆಸ್ಪತ್ರೆಯವರೆಗಿನ ಸರ್ವೀಸ್ ರಸ್ತೆಯ ಕಾಮಗಾರಿಗಳು ಇನ್ನೂ ಆರಂಭವೇ ಆಗಿಲ್ಲ. ಹೀಗೆ, ಕುಂದಾಪುರ ತಾಲ್ಲೂಕಿನಲ್ಲಿ ಹೆದ್ದಾರಿ ಸಮಸ್ಯೆಗಳು ಸಾಕಷ್ಟಿದೆ ಎನ್ನುತ್ತಾರೆ ಸ್ಥಳೀಯರು.

ಬ್ರಹ್ಮಾವರದಲ್ಲೂ ಇದೇ ಕಥೆ:ಕೋಟ ಮತ್ತು ಬ್ರಹ್ಮಾವರದಲ್ಲಿ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು.‌ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ‌ ದಾಟಬೇಕಾಗಿದ್ದು, ಸರ್ವಿಸ್ ರಸ್ತೆ ನಿರ್ಮಾಣದ ಜತೆಗೆ ಮೇಲ್ಸೇತುವೆ ನಿರ್ಮಾಣದ ಅಗತ್ಯವೂ ಇದೆ. ವರ್ಷದ ಹಿಂದೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಬಳಿ‌ ಮೇಲ್ಸೇತುವೆಗೆ ಅನುದಾನ‌ ಬಿಡುಗಡೆ ಮಾಡಲಾಗಿದೆ‌ ಎಂದು‌ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ‌ ಹೇಳಿದ್ದರು. ಇದುವರೆಗೂ ಆದೇಶ‌ ಆಗಿಲ್ಲ.‌

‘ಹೆಜಮಾಡಿಗೂ ಬೇಕು ಸರ್ವೀಸ್ ರಸ್ತೆ’
ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪೂರ್ಣಗೊಂಡರೂ ಕೆಲವಡೆ ಸರ್ವೀಸ್ ರಸ್ತೆ ನಿರ್ಮಾಣವಾಗಿಲ್ಲ. ಇಲ್ಲಿನ ಕನ್ನಂಗಾರ್ ಬೈಪಾಸ್‌ನಿಂದ ಬೀಡುವರೆಗೆ ಸರ್ವೀಸ್ ರಸ್ತೆ ನಿರ್ಮಾಣದ ಬೇಡಿಕೆ ಹಲವು ಕಾಲದಿಂದ ಇದ್ದರೂ ಈಡೇರಿಲ್ಲ. ಬೀಡುವಿನಿಂದ ಹೆಜಮಾಡಿ ಪೇಟೆಗೆ ಸಂಚರಿಸುವ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿವೆ. ಉಚ್ಚಿಲದಲ್ಲೂ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ಅರೆಬರೆ ನಡೆದಿದೆ.

ಅಧಿಕಾರಿಗಳು ಏನಂತಾರೆ
ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿಗೂ ಮುನ್ನವೇ ಎಲ್ಲೆಲ್ಲಿ ಸರ್ವೀಸ್‌ ರಸ್ತೆಗಳು ಅವಶ್ಯವಿದೆ ಎಂದು ಸಮೀಕ್ಷೆ ನಡೆಸಿ ಅದರಂತೆಯೇ ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಕುಂದಾಪುರದಿಂದ ಜಿಲ್ಲೆಯ ಗಡಿ ಭಾಗವಾಗಿರುವ ಮೂಲ್ಕಿವರೆಗಿನ 60 ಕಿ.ಮೀ ಹೆದ್ದಾರಿಯಲ್ಲಿ 18.8 ಕಿ.ಮೀ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗಿದೆ. 580 ಮೀಟರ್ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ಮಾತ್ರ ಬಾಕಿ ಇದೆ ಎನ್ನುತ್ತಾರೆ ಹೆದ್ದಾರಿ ಇಲಾಖೆಯ ಎಂಜಿನಿಯರ್‌ ಲಿಂಗೇಗೌಡ.

ಎಲ್ಲೆಲ್ಲಿ ಸರ್ವೀಸ್ ರಸ್ತೆಗೆ ಬೇಡಿಕೆ
ಕುಂಭಾಶಿ
–3 ಕಿ.ಮೀ
ತೆಕ್ಕಟ್ಟೆ–2 ಕಿ.ಮೀ
ಸಾಲಿಗ್ರಾಮ–2 ಕಿ.ಮೀ
ಬೀಜಾಡಿ–1.58 ಕಿ.ಮೀ
ಪಡುಬಿದ್ರಿ–460 ಮೀಟರ್‌
ಬಲೈಪಾದೆ–325 ಮೀಟರ್

ಅಧಿಕಾರಿಗಳಿಗೆ ನಿರ್ದೇಶನ
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ಲಾಕ್‌ಸ್ಪಾಟ್‌ಗಳಲ್ಲಿ ಅಪಘಾತಗಳ ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೆದ್ದಾರಿಗಳಲ್ಲಿರುವ ಗುಂಡಿಗಳನ್ನು ಮುಚ್ಚಿ ಫೊಟೊ ಸಹಿತ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.
–ಎಂ.ಕೂರ್ಮಾರಾವ್‌, ಜಿಲ್ಲಾಧಿಕಾರಿ

ಸಹಕಾರ: ರಾಜೇಶ್ ಕೆ.ಸಿ, ಶೇಷಗಿರಿ ಭಟ್‌, ಪ್ರಕಾಶ್ ಸುವರ್ಣ ಕಟಪಾಡಿ, ಅಬ್ದುಲ್ ಹಮೀದ್‌, ಡಾ.ಸುಬ್ರಹ್ಮಣ್ಯ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.