ಹೆಬ್ರಿ (ಉಡುಪಿ): ನಕ್ಸಲ್ ನಾಯಕ ಕೂಡ್ಲು ವಿಕ್ರಂ ಗೌಡನ ಎನ್‌ಕೌಂಟರ್‌ಗೂ ಮುನ್ನ ಮನೆ ಖಾಲಿ ಮಾಡಿದ್ದ ನಾಡ್ಪಾಲಿನ ಪೀತುಬೈಲಿನ ಮೂರು ಮಲೆಕುಡಿಯ ಕುಟುಂಬಗಳು ಮತ್ತೆ ಮನೆ ಸೇರಿವೆ. ನಕ್ಸಲ್ ನಿಗ್ರಹ ಪಡೆಯ ಭದ್ರತೆಯೊಂದಿಗೆ ಅವರು ಮನೆಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೀತುಬೈಲಿನ ನಾರಾಯಣ ಗೌಡ, ಜಯಂತ್ ಗೌಡ ಹಾಗೂ ಸುಧಾಕರ ಗೌಡ ಎಂಬ ಮೂವರು ಸಹೋದರರ ಕುಟುಂಬದವರು ಈ ಮನೆಗಳಲ್ಲಿ ವಾಸವಿದ್ದಾರೆ.
ವಿಕ್ರಂ ಗೌಡನ ಎನ್‌ಕೌಂಟರ್ ನವೆಂಬರ್ 18ರಂದು ನಡೆದಿತ್ತು.
15 ದಿನಗಳಿಂದ ಈ ಮನೆಗಳು ಖಾಲಿಯಾಗಿದ್ದವು. ಅನೇಕ ದಿನ ಸಾಕುಪ್ರಾಣಿಗಳು ಉಪವಾಸವಿದ್ದವು. ನಂತರ ದಿನಗಳಲ್ಲಿ ಎಎನ್ಎಫ್‌ನವರು ಸಾಕು ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದರು. ಈ ಕುಟುಂಬಗಳವರು ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಎಎನ್ಎಫ್ ಭದ್ರತೆ: ಮಲೆಕುಡಿಯ ಸಮುದಾಯದ ಮುಖಂಡರ ಒತ್ತಾಯದಂತೆ ಮೂರು ತಿಂಗಳ ಕಾಲ ಎಎನ್ಎಫ್ ಪೊಲೀಸರು ಎನ್‌ಕೌಂಟರ್ ನಡೆದ ಜಯಂತ ಗೌಡ ಅವರ ಮನೆ ಸುತ್ತಮುತ್ತ ಭದ್ರತೆ ಒದಗಿಸಲಿದ್ದಾರೆ. ನಕ್ಸಲ್ ನಾಯಕನಾಗಿದ್ದ ವಿಕ್ರಂ ಗೌಡನಿಗೆ ಅವನ ತಂಡದವರು ಸ್ಥಳಕ್ಕೆ ಬಂದು ಶ್ರದ್ಧಾಂಜಲಿ ಸಲ್ಲಿಸುವುದು, ಮೃತನ ಪ್ರತಿಮೆ ನಿರ್ಮಾಣ, ನಕ್ಸಲ್ ಹುತಾತ್ಮರ ದಿನಾಚರಣೆ ಮಾಡುವುದು ಹೀಗೆ ನಕ್ಸಲ್ ಸಂಘಟನೆಯ ಚಟುವಟಿಕೆ ನಡೆಯಬಹುದು ಎಂದು ಸ್ಥಳದಲ್ಲಿ ಬಿಗಿ ಭದ್ರತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಕ್ಸಲರು ಹುತಾತ್ಮರ ದಿನವನ್ನು ಆಚರಿಸುವುದು ಸಾಮಾನ್ಯ. ಅದಕ್ಕಾಗಿ ಮುಂದೆ ಪ್ರತಿ ವರ್ಷ ನವೆಂಬರ್ 18ರಂದು ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತದೆ ಎಂದು ಈ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.