
ಪಡುಬಿದ್ರಿ: ತಾಲ್ಲೂಕಿನ ನಡ್ಸಾಲು ಪ್ರದೇಶದಲ್ಲಿರುವ 14 ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದಲ್ಲಿ ಇಡೀ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ರೂಪಿಸಬಹುದೆಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಆದರೆ ಈ ಕೆರೆಗಳ ಅಭಿವೃದ್ಧಿಗೆ ದೀರ್ಘಕಾಲಿಕ ಮುಂದಾಲೋಚನೆ ಮಾಡದಿರುವುದರಿಂದ ಹಲವಾರು ಕೆರೆಗಳು ಪಾಲುಬಿದ್ದು, ನಿರ್ಲಕ್ಷ್ಯಕ್ಕೊಳಗಾಗಿವೆ.
ನಡ್ಸಾಲು ಪ್ರದೇಶದಲ್ಲಿರುವ ಪ್ರಮುಖ ಕೆರೆಗಳಲ್ಲಿ ಮದ್ಮಾಲ್ ಕೆರೆ, ಸಂಕೇಶ್ ಕೆರೆ, ಕರ್ಕಟ ಕೆರೆ, ಕೆದುಬರಿ ಕೆರೆ, ಕಣ್ಣಂಗಾರ್ ಕೆರೆ, ಬೀಡಿನ ಕೆರೆ, ಕರ್ಕಟೆ ಕೆರೆ, ಮಾಸ್ತಿಕಟ್ಟೆ ಕೆರೆ, ಕಲ್ಲಟ್ಟೆ ಕೆರೆ, ಬೇಂಗ್ರೆ ಕೆರೆ, ಕೆಳಗಿನ ಪೇಟೆ ಕೆರೆ, ಪಡುಹಿತ್ಲು ಕೆರೆ, ಕಂಗಿನ ಕುದ್ರು ಮತ್ತು ಕೊಳ ಕೆರೆಗಳು ಸೇರಿವೆ. ಈ ಕೆರೆಗಳ ಪರಸ್ಪರ ಜೋಡಣೆ, ಭೂಗರ್ಭಜಲ ಮರುಭರ್ತಿ ವ್ಯವಸ್ಥೆ, ಶುದ್ಧೀಕರಣ ಘಟಕಗಳ ಸ್ಥಾಪನೆ ಹಾಗೂ ನಿಯಮಿತ ನಿರ್ವಹಣೆ ಮೂಲಕ ದೀರ್ಘಕಾಲಿಕ ನೀರಿನ ಭದ್ರತೆ ಸಾಧಿಸಬಹುದು ಎನ್ನುತ್ತರೆ ಜನರು.
ಮದ್ಮಾಲ್ ಕೆರೆಯನ್ನು ಸುಮಾರು 10 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ. ಇದೀಗ ಹೂಳೆತ್ತುವ ಕಾಮಗಾರಿ ಆಗಬೇಕಿದೆ. ಉಳಿದ ಕೆರೆಗಳ ತಟದ ಬಲವರ್ಧನೆ, ಮಳೆನೀರು ಹರಿಯಲು ವ್ಯವಸ್ಥೆ ಹಾಗೂ ಸಂರಕ್ಷಣೆಗೆ ಕ್ರಮ ಕೈಗೊಳ್ಳದಿರುವುದರಿಂದ ಅವುಗಳ ಸಾಮರ್ಥ್ಯ ಕಡಿಮೆಯಾಗುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಸಹಜ ಜಲಸಂಪತ್ತು ಸಾಕಷ್ಟಿದ್ದರೂ ಪ್ರತಿ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆರೆಗಳ ಸಮಗ್ರ ಅಭಿವೃದ್ಧಿ ಮಾಡಿದಲ್ಲಿ ಈ ಭಾಗದಲ್ಲಿ ನೀರಿನ ಸಮಸ್ಯೆ ಉಂಟಾಗದು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಕೋಟ್ಯಾನ್.
ಪಡುಬಿದ್ರಿ ಗ್ರಾಮ ಪಂಚಾಯಿತಿ ಆಡಳಿತವು ಸಮಗ್ರ ವರದಿ ಸಿದ್ಧಪಡಿಸಿ ಹಂತ ಹಂತವಾಗಿ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಒತ್ತಾಯ. ಶಾಶ್ವತ ನೀರಿನ ಪರಿಹಾರಕ್ಕಾಗಿ ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ ಅಗತ್ಯ ಎನ್ನುತ್ತಾರೆ ಸ್ಥಳೀಯರು.
‘ಜಲಮೂಲ ಅಭಿವೃದ್ಧಿಗೆ ಒತ್ತು’
ಹತ್ತು ವರ್ಷಗಳ ಹಿಂದೆ ಅಭಿವೃದ್ಧಿಗೊಂಡಿರುವ ಮದ್ಮಲ್ ಕೆರೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕಾಗಿದೆ. ಈ ಕೆರೆಯು ಹೂಳೆತ್ತುವಿಕೆಯ ಮೂಲಕ ಇನ್ನಷ್ಟು ಜಲಮೂಲವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ ಎಂದು ಪಡುಬಿದ್ರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಶೆಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.